ಸಾರಾಂಶ
2023ರ ಮೇ 10 ರಂದು ನಡೆದ ಚುನಾವಣೆ ಸಮಯದಲ್ಲಿ ಬಾಗೇಪಲ್ಲಿಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಚುನಾವಣಾ ಅಯೋಗಕ್ಕೆ ಸಲ್ಲಿಸಿರುವ ನಾಮಪತ್ರ ದೋಷ ಪೂರಿತವಾಗಿದ್ದು, ನಾಮಪತ್ರದಲ್ಲಿ ಆಸ್ತಿ ವಿವರಗಳನ್ನು ಮುಚ್ಚಿಟ್ಟಿದ್ದಾರೆಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಹೈಕೋರ್ಟ್‌ನಲ್ಲಿ 2023ರಲ್ಲಿ ಅರ್ಜಿ ಸಲ್ಲಿಸಿದ್ದರು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
2023 ರ ವಿಧಾನಸಭೆ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನ ಸಭೆಯ ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ತಮ್ಮ ವಿರುದ್ಧ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ಶಾಸಕರಿಗೆ ಮೂರನೇ ಬಾರಿಯೂ ಸಂಕಷ್ಟ ಎದುರಾಗಿದೆ.ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ 2023ರ ಮೇ 10 ರಂದು ನಡೆದ ಚುನಾವಣೆ ಸಮಯದಲ್ಲಿ ಬಾಗೇಪಲ್ಲಿಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಚುನಾವಣಾ ಅಯೋಗಕ್ಕೆ ಸಲ್ಲಿಸಿರುವ ನಾಮಪತ್ರ ದೋಷ ಪೂರಿತವಾಗಿದ್ದು, ನಾಮಪತ್ರದಲ್ಲಿ ಆಸ್ತಿ ವಿವರಗಳನ್ನು ಮುಚ್ಚಿಟ್ಟಿದ್ದಾರೆಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಹೈಕೋರ್ಟ್‌ನಲ್ಲಿ 2023ರಲ್ಲಿ ಅರ್ಜಿ ಸಲ್ಲಿಸಿದ್ದರು.
ತಕರಾರು ಅರ್ಜಿ ಸಲ್ಲಿಕೆ:ವಿಧಾನಸಭಾ ಚುನಾವಣೆಯ ದೋಷಪೂರಿತ ನಾಮಪತ್ರ ಸಲ್ಲಿಕೆ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕರ್ನಾಟಕ ಹೈಕೋರ್ಟ್ ನಲ್ಲಿ ಮಧ್ಯಂತರ ಅರ್ಜಿಯನ್ನ ಸಲ್ಲಿಸಿದ್ದು, ಏಕ ಸದಸ್ಯ ನ್ಯಾಯಪೀಠ ಶಾಸಕ ಸುಬ್ಬಾರೆಡ್ಡಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು 2024 ಮಾರ್ಚ್‌ನಲ್ಲಿ ವಜಾಗೊಳಿಸಿ ವಿಚಾರಣೆಯನ್ನು ಮುಂದುವರಿಸುವಂತೆ ಅದೇಶ ನೀಡಿತ್ತು.
ಇದನ್ನು ಪ್ರಶ್ನಿಸಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ದೆಹಲಿಯ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ 2024 ರ ಆಗಸ್ಟ್ 9 ರಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯ ಮೇಲ್ಮನವಿಯ ಸುಪ್ರೀಂ ಕೋರ್ಟ್ ವಜಾಗೊಳಿಸಿ ಕರ್ನಾಟಕ ಹೈ ಕೋರ್ಟ್ ನಲ್ಲೇ ಪ್ರಕರಣದ ವಿಚಾರಣೆಯನ್ನು ಮುಂದುವರಿಸುವಂತೆ ಅದೇಶ ನೀಡಿತ್ತು. ಶಾಸಕರ ಅರ್ಜಿಯನ್ನು ಈಗ ಹೈಕೋರ್ಟ್ ಮತ್ತೆ ವಜಾಗೊಳಿಸಿದೆ. ಮೂರು ಬಾರಿ ಸಲ್ಲಿಸಿರುವ ಮಧ್ಯತರ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಬಾಗೇಪಲ್ಲಿಯ ಸುಬ್ಬಾರೆಡ್ಡಿಯವರ ಶಾಸಕ ಸ್ಥಾನಕ್ಕೇ ಕಾನೂನಿನ ಸಂಕಷ್ಟ ಎದುರಾಗಿದೆ. ಹೈ ಕೋರ್ಟ್‌ನ ಮುಂದಿನ ಅದೇಶದವರೆಗೂ ಕಾದು ನೋಡುವ ಪರಿಸ್ಥಿತಿ ಎದುರಾಗಿದೆ.