ಸಾರಾಂಶ
ಬೆಂಗಳೂರು: ನೆಲಮಂಗಲದ ಖ್ಯಾತ ವಕೀಲ ಕೇಶವಮೂರ್ತಿ ಅವರ ಪುತ್ರ ವಕೀಲ ಅಮಿತ್ ಕೇಶವಮೂರ್ತಿ ಕೊಲೆ ಪ್ರಕರಣದ ಅಪರಾಧಿ ರಾಜೇಶ್ ಗೌಡಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದಲ್ಲಿ ರಾಜೇಶ್ ಗೌಡ ಅವರನ್ನು ದೋಷಿಯಾಗಿ ಬುಧವಾರವಷ್ಟೇ ತೀಮಾರ್ನಿಸಿದ್ದ ನ್ಯಾಯಾಧೀಶ ಹೊಸಮನಿ ಪುಂಡಲೀಕ ಅವರು, ಜೀವಾವಧಿ ಶಿಕ್ಷೆ ವಿಧಿಸಿ ಗುರುವಾರ ಆದೇಶಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ನಾಲ್ಕು ತಿಂಗಳ ಸಾಧಾರಣ ಜೈಲು ಶಿಕ್ಷೆ ಹಾಗೂ ₹2 ಸಾವಿರ ದಂಡ ವಿಧಿಸಿರುವ ನ್ಯಾಯಾಲಯ, ದಂಡ ಪಾವತಿಸಲು ವಿಫಲವಾದರೆ ಮತ್ತೆ ಒಂದು ವರ್ಷ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಸ್ಪಷ್ಟಪಡಿಸಿದೆ.ಅಮಿತ್ ಕೇಶವ ಮೂರ್ತಿ ಅಮೆರಿಕದಲ್ಲಿ ಎಲ್ಎಲ್ಎಂ ಸ್ನಾತಕೋತ್ತರ ಪದವಿ ಪಡೆದಿದ್ದರು. ನೆಲಮಂಗಲ ಮತ್ತು ಬೆಂಗಳೂರು ನಗರದಲ್ಲಿ ವಕೀಲಿಕೆ ನಡೆಸುತ್ತಿದ್ದರು. 2017ರ ಜ.13ರಂದು ಮಧ್ಯಾಹ್ನ 3.15ಕ್ಕೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆಚಾರ್ಯ ಎಂಜಿನಿಯರಿಂಗ್ ಕಾಲೇಜು ಬಳಿ ಅಮಿತ್ ಕೇಶವಮೂರ್ತಿ, ಅಪರಾಧಿ ರಾಜೇಶ್ ಅವರ ಪತ್ನಿ ಪಿಡಿಒ ಶ್ರುತಿಗೌಡ ಅವರೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಕುಳಿತಿದ್ದರು. ಶ್ರುತಿಗೌಡ ಅವರಿಗೆ ಸೇರಿದ ಈ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ರಾಜೇಶ್, ಕಾರಿನ ಬಾಗಿಲು ತೆರೆದು ತಮ್ಮ ಬಳಿಯಿದ್ದ ಪಿಸ್ತೂಲಿನಿಂದ ಅಮಿತ್ ಮೇಲೆ ಗುಂಡು ಹಾರಿಸಿ ಕೊಂದಿದ್ದರು. ಅಮಿತ್ ಮೃತಪಟ್ಟ ನಂತರ ಶ್ರುತಿಗೌಡ ಲಾಡ್ಜ್ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಪ್ರವೀಣ್ ಬಾಬು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ವಿಶೇಷ ಪ್ರಾಸಿಕ್ಯೂಟರ್ ಆಗಿ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ವಾದ ಮಂಡಿಸಿದ್ದರು.