ವಕೀಲ ಪ್ರೀತಂ ಹಲ್ಲೆ ಪ್ರಕರಣ: ಚುರುಕುಗೊಂಡ ಸಿಐಡಿ ತನಿಖೆ

| Published : Dec 09 2023, 01:15 AM IST

ವಕೀಲ ಪ್ರೀತಂ ಹಲ್ಲೆ ಪ್ರಕರಣ: ಚುರುಕುಗೊಂಡ ಸಿಐಡಿ ತನಿಖೆ
Share this Article
  • FB
  • TW
  • Linkdin
  • Email

ಸಾರಾಂಶ

ವಕೀಲ ಪ್ರೀತಂ ಹಲ್ಲೆ ಪ್ರಕರಣ: ಚುರುಕುಗೊಂಡ ಸಿಐಡಿ ತನಿಖೆ ನೋಟೀಸ್ ಜಾರಿ

ಟೌನ್ ಠಾಣೆಯ ಪೊಲೀಸರ ಹಾಜರ್‌ಗೆ ನೋಟೀಸ್ ಜಾರಿ । ಲಾಠಿ ಸುಟ್ಟು ರಸ್ತೆ ತಡೆ ನಡೆಸಿದ ಪೊಲೀಸರಿಗೆ ಕಂಟಕ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಕೀಲ ಪ್ರೀತಂ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ತಂಡದ ಎದುರು ಶುಕ್ರವಾರ ಟೌನ್ ಪೊಲೀಸ್ ಠಾಣೆ ಸಿಪಿಐ ಹಾಜರಾಗಿ ಹೇಳಿಕೆ ನೀಡಿದರು. ನಗರ ಪ್ರವಾಸಿ ಮಂದಿರದಲ್ಲಿ ತನಿಖೆ ಕೈಗೊಂಡಿರುವ ಸಿಐಡಿ ತಂಡದ ಎದುರು ಪೊಲೀಸರಿಂದ ಹಲ್ಲೆ ಗೊಳಗಾಗಿದ್ದ ವಕೀಲ ಪ್ರೀತಂ ಗುರುವಾರ ಹಾಜರಾಗಿ ಹೇಳಿಕೆ ನೀಡಿದ್ದರು. ಸಿಐಡಿ ಡಿಐಜಿಪಿ ವಂಶಿಕೃಷ್ಣ ಅವರ ನೇತೃತ್ವದಲ್ಲಿ ವಿಚಾರಣೆ ಕೈಗೊಂಡಿದ್ದು, ವಕೀಲರ ಮೇಲೆ ಹಲ್ಲೆ ನಡೆದಿರುವ ಟೌನ್ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ರೇಣುಕಾಪ್ರಸಾದ್ ಶುಕ್ರವಾರ ಸಿಐಡಿ ತಂಡದ ಎದುರು ಹಾಜರಾಗಿ ಹೇಳಿಕೆ ನೀಡಿದರು. ನ. 30 ರಂದು ರಾತ್ರಿ ವಕೀಲರನ್ನು ಠಾಣೆಯೊಳಗೆ ಥಳಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿರುವ, ಈಗಾಗಲೇ ಅಮಾನತುಗೊಂಡಿರುವ ಪಿಎಸ್‌ಐ, ಎಎಸ್‌ಐ, ಮುಖ್ಯಪೇದೆ ಹಾಗೂ ಮೂವರು ಪೊಲೀಸರನ್ನು ವಿಚಾರಣೆ ನಡೆಸಬೇಕಾಗಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಅವರುಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎನ್ನಲಾಗುತ್ತಿದೆ.

ಹಿರಿಯ ಅಧಿಕಾರಿಗಳಿಗೆ ಮುಜುಗರ: ಎಫ್‌ಐಆರ್ ದಾಖಲು ಮಾಡಿರುವ ಪೊಲೀಸರನ್ನು ಬಂಧಿಸಬಾರದು. ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವಕೀಲರ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕೆಂದು ಆಗ್ರಹಿಸಿ ಡಿ. 2 ರಂದು ರಾತ್ರಿ ಟೌನ್ ಪೊಲೀಸ್ ಠಾಣೆ ಎದುರು ಧರಣಿ ನಡೆಸಿ, ಸಾರ್ವಜನಿಕರೊಂದಿಗೆ ಮೆರವಣಿಗೆ ತೆರಳಿ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಬೆಳಗಿನ ಜಾವದವರೆಗೆ ರಸ್ತೆ ತಡೆ ನಡೆಸಿ, ಲಾಠಿಗೆ ಬೆಂಕಿ ಹಚ್ಚಿರುವ ಪೊಲೀಸರ ನಡೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಅವರು ಎಷ್ಟೇ ಕೋರಿಕೊಂಡರು ಪೊಲೀಸರು ಅವರ ಮಾತುಗಳನ್ನು ಕೇಳಲಿಲ್ಲ. ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಹಿರಿಯ ಅಧಿಕಾರಿಗಳ ಮಾತನ್ನು ಕೇಳದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬಂದವು. ಚಿಕ್ಕಮಗಳೂರಿನ ಇತಿಹಾಸದಲ್ಲಿ ಪೊಲೀಸ್ ಇಲಾಖೆಯಲ್ಲಿ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರುವುದು ಇದೇ ಮೊದಲು. ಪೊಲೀಸರ ವರ್ತನೆ ಹಾಗೂ ಹಿರಿಯ ಅಧಿಕಾರಿಗಳ ಅಸಹಾಯಕತೆ, ಚಿಕ್ಕಮಗಳೂರು ಜಿಲ್ಲೆಗೆ ಕಪ್ಪು ಚುಕ್ಕಿ ಇಟ್ಟಿತು. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ, ಹಿರಿಯ ಅಧಿಕಾರಿಗಳ ಮಾತನ್ನು ಕೇಳದ ಪೊಲೀಸರನ್ನು ಪತ್ತೆ ಹಚ್ಚುವ ಕೆಲಸ ಆಂತರಿಕವಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಟೌನ್ ಪೊಲೀಸ್ ಠಾಣೆ ಆವರಣದಲ್ಲಿ ಧರಣಿ ನಡೆಸಿದ ಹಾಗೂ ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿರುವ ಪೊಲೀಸರನ್ನು ಪತ್ತೆ ಹಚ್ಚಲು ಉಡುಪಿ ಜಿಲ್ಲೆಯ ಡಿವೈಎಸ್ಪಿ ನೇತೃತ್ವದ ತಂಡ ಚಿಕ್ಕ ಮಗಳೂರಿಗೆ ಆಗಮಿಸಿದೆ. ಈ ತಂಡ ಸಿಸಿ ಟಿವಿ ಪುಟೇಜ್ ಸಂಗ್ರಹ ಮಾಡುತ್ತಿದ್ದು, ಅದರ ಅಧಾರದ ಮೇಲೆ ಅಶಿಸ್ತಿನಿಂದ ವರ್ತಿಸಿರುವ ಪೊಲೀಸರ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರತಿಭಟನೆ ನಿರತ ಕೆಲವು ಪೊಲೀಸರನ್ನು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಕರೆಸಿ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸುವ ಕೆಲಸ ನಡೆಯುತ್ತಿದೆ. ಅಶಿಸ್ತಿನಿಂದ ವರ್ತಿಸಿರುವ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಮಾತನ್ನ ಧಿಕ್ಕರಿಸಿರುವ ಸಿಬ್ಬಂದಿಗೆ ಮುಂದಿನ ದಿನಗಳಲ್ಲಿ ಕಂಟಕ ಎದುರಾಗುವ ಸಾಧ್ಯತೆ ಹೆಚ್ಚಿದೆ. --- ಬಾಕ್ಸ್ ----

ಇಂದು ಎಜಿ ಕಚೇರಿಯಲ್ಲಿ ಸಭೆ

ವಕೀಲರ ಹಾಗೂ ಪೊಲೀಸರ ನಡುವೆ ಉದ್ಭವಿಸಿರುವ ಸಮಸ್ಯೆ ಬಗೆಹರಿಸಲು ಡಿ. 9 ರಂದು ಎಜಿ ಕಚೇರಿ ಯಲ್ಲಿ ಸಭೆ ನಡೆಸಬೇಕೆಂದು ಹೈಕೋರ್ಟ್‌ನ ವಿಭಾಗೀಯ ಪೀಠ ಡಿ. 5 ರಂದು ನಡೆದ ಸ್ವಯಂ ಪ್ರೇರಿತ ವಾಗಿ ತೆಗೆದುಕೊಂಡ ಕೇಸಿನ ವಿಚಾರಣೆ ಸಂದರ್ಭದಲ್ಲಿ ನಿರ್ದೇಶನ ನೀಡಿತ್ತು. ಈ ಸಭೆಯಲ್ಲಿ ಗೃಹ ಇಲಾಖೆ ಕಾರ್ಯದರ್ಶಿ ಹಾಗೂ ಡಿಐಜಿ ಭಾಗವಹಿಸಬೇಕು. ರಾಜ್ಯ ವಕೀಲರ ಪರಿಷತ್ ಮತ್ತು ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷರು ಹಾಗೂ ವಕೀಲರ ಸಂಘದ ಆರು ಪ್ರತಿನಿಧಿಗಳು, ಹಿರಿಯ ವಕೀಲರು ಭಾಗವಹಿಸಲು ಸೂಚನೆ ನೀಡಲಾಗಿದ್ದು, ಈ ಸಭೆಯ ನಡಾವಳಿ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ಹೇಳಿತ್ತು. ಅದ್ದರಿಂದ ಶನಿವಾರ ನಡೆಯಲಿರುವ ಸಭೆ ಮಹತ್ವ ಪಡೆದುಕೊಂಡಿದೆ.