ಐಜೂರು ಠಾಣೆ ಎಸ್ಐ ಅಮಾನತಿಗೆ ವಕೀಲರ ಆಗ್ರಹ

| Published : Feb 10 2024, 01:46 AM IST

ಸಾರಾಂಶ

ರಾಮನಗರ: ಜಿಲ್ಲಾ ವಕೀಲರ ಸಂಘಕ್ಕೆ ಅಕ್ರಮ ಪ್ರವೇಶ ಮಾಡಿದವರ ರಕ್ಷಣೆಗೆ ನಿಂತಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿರುವ ವಕೀಲರು ಸೋಮವಾರ ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದು ಅನಿರ್ಧಿಷ್ಟಾವಧಿ ಪ್ರತಿಭಟಿಸುವ ನಿರ್ಣಯ ಕೈಗೊಂಡಿದ್ದಾರೆ.

ರಾಮನಗರ: ಜಿಲ್ಲಾ ವಕೀಲರ ಸಂಘಕ್ಕೆ ಅಕ್ರಮ ಪ್ರವೇಶ ಮಾಡಿದವರ ರಕ್ಷಣೆಗೆ ನಿಂತಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿರುವ ವಕೀಲರು ಸೋಮವಾರ ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದು ಅನಿರ್ಧಿಷ್ಟಾವಧಿ ಪ್ರತಿಭಟಿಸುವ ನಿರ್ಣಯ ಕೈಗೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ಶ್ರೀವತ್ಸ, ವಕೀಲರ ಸಂಘಕ್ಕೆ ಅತಿಕ್ರಮ ಪವೇಶ ಮಾಡಿದವರ ವಿರುದ್ದ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ, ಸದರಿ ಎಸ್‌ಐ ಅವರು ಯಾರದ್ದೋ ಒತ್ತಡಕ್ಕೆ ಮಣಿದು ವಕೀಲರ ವಿರುದ್ಧವೇ ಪ್ರತಿ ದೂರನ್ನು ಪಡೆದುಕೊಂಡಿದ್ದಾರೆ. ವಕೀಲರ ಸಂಘಕ್ಕೆ ಗುಂಪುಗೂಡಿ ಧಮಕಿ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳದೆ ಪ್ರತಿ ದೂರುದಾರರ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.

ವಾರಾಣಸಿಯಲ್ಲಿರುವ ಜ್ಞಾನವ್ಯಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗಕ್ಕೆ ಪೂಜೆ ಮಾಡಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಅವಕಾಶ ನೀಡಿತ್ತು. ಇದರ ವಿರುದ್ಧ ವಕೀಲ ಚಾನ್ ಪಾಷಾ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಮತ್ತು ನ್ಯಾಯಾಲಯದ ಪತ್ರಿಕೆಗೆ ಧಕ್ಕೆ ಬರುವ ರೀತಿ ತಮ್ಮ ಫೇಸ್ ಬುಕ್‌ನಲ್ಲಿ ಅಲ್ಲಿನ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿಯಾಗಿ ಬರೆದುಕೊಂಡಿದ್ದರು. ಇತರ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರ ಹರಿದಾಡಿತ್ತು. ವಕೀಲ ವೃತ್ತಿಯಲ್ಲಿದ್ದವರು ನ್ಯಾಯಾಲಯದ ಆದೇಶದ ವಿರುದ್ಧ ಅವಹೇಳನಕಾರಿ ಬರಹ ಹಾಕಿದ್ದನ್ನು ಪ್ರಸ್ತಾಪಿಸಿ ಚಾನ್‌ಪಾಷಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲವು ಸಾರ್ವಜನಿಕರು ವಕೀಲರ ಸಂಘಕ್ಕೆ ಮನವಿ ಮಾಡಿದ್ದರು ಎಂದು ತಿಳಿಸಿದರು.

ಈ ವಿಚಾರದಲ್ಲಿ ಸಂಘ ಸದರಿ ವಕೀಲರ ವಿರುದ್ಧ ಕ್ರಮಕೈಗೊಳ್ಳುವ ವಿಚಾರದಲ್ಲಿ ವಕೀಲರ ಸಭೆ ನಡೆಸುವ ವಿಷಯವನ್ನು ಅರಿತು ಸುಮಾರು 30 -40 ಮಂದಿ ವಕೀಲರ ಸಂಘದ ಆವರಣ ಮತ್ತು ವಕೀಲರ ಸಂಘದ ಅಧ್ಯಕ್ಷರ ಕೊಠಡಿಗೆ ಅಕ್ರಮ ಪ್ರವೇಶ ಮಾಡಿ, ಚಾನ್ ಪಾಷಾ ವಿರುದ್ಧ ಕ್ರಮ ಕೈಗೊಳ್ಳದಂತೆ ಒತ್ತಡ ಹೇರಿ ಏರುಧ್ವನಿಯಲ್ಲಿ ಮಾತನಾಡಿದ್ದಾರೆ. ಹಾಗೊಮ್ಮೆ ಅವರ ವಿರುದ್ಧ ಕ್ರಮ ಕೈಗೊಂಡರೆ ತೊಂದರೆ ಉಂಟು ಮಾಡುತ್ತೇವೆಂದು ಧಮಕಿ ಹಾಕಿದ್ದಾರೆ. ಮತೀಯ ಭಾವನೆ ಸೃಷ್ಟಿ ಮಾಡುವಂತಹ ವಾತಾವರಣ ನಿರ್ಮಾಣ ಮಾಡಿ ಅಶಾಂತಿ ಉಂಟು ಮಾಡಲು ಚಾನ್ ಪಾಷಾರ ಕುಮ್ಮಕ್ಕಿನಿಂದ ಈ ಜನ ಹೀಗೆ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎಂದರು.

ವಕೀಲರ ಸಂಘದಲ್ಲಿ ಅಶಾಂತಿ ಉಂಟಾದ ಮಾಹಿತಿಯನ್ನಾಧರಿಸಿ ಐಜೂರು ಠಾಣೆಯ ಎಸ್‌ಐ ತನ್ವೀರ್ ಹುಸೇನ್ ಅವರು ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ಫುಟೇಜ್‌ಗಳನ್ನು ಸಂಗ್ರಹಿಸಿಕೊಂಡು ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ಈ ಘಟನೆಯ ಹಿನ್ನೆಲೆಯಲ್ಲಿ ಸಂಘದ ಸರ್ವ ಸದಸ್ಯರ ತುರ್ತು ಸಭೆ ನಡೆಸಿ ಸದಸ್ಯರ ಅಭಿಪ್ರಾಯದಂತೆ ಚಾನ್ ಪಾಷರನ್ನು ಸಂಘದ ಸದಸ್ಯತ್ವದಿಂದ ವಜಾಕರಿಸಲಾಗಿದೆ. ಆತನ ವಿರುದ್ಧ ಠಾಣೆಗೆ ದೂರು ನಿಡಿ ಆತನ ವಿರುದ್ಧ ಕ್ರಮ ಕೈಗೊಳ್ಳಲು ಸಹ ತೀರ್ಮಾನ ಮಾಡಲಾಗಿದೆ. ಇದೇ ವಿಚಾರವನ್ನು ರಾಜ್ಯ ವಕೀಲರ ಪರಿಷತ್‌ಗೂ ದೂರು ನೀಡಿದ್ದು ಚಾನ್ ಪಾಷಾರ ಸದಸ್ಯತ್ವವನ್ನು ರದ್ದುಪಡಿಸುವಂತೆಯೂ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಿ.ಎಂ.ಶ್ರೀವತ್ಸ್ ತಿಳಿಸಿದ್ದಾರೆ.

ಹಿರಿಯ ವಕೀಲ ಶಿವಣ್ಣಗೌಡ ಮಾತನಾಡಿ, ವಕೀಲರ ವಿರುದ್ಧ ಬಂದ ದೂರಿನ ಹಿನ್ನೆಲೆಯಲ್ಲಿ ಐಜೂರು ಠಾಣೆ ಎಸ್‌ಐ ಅವರು ಪೂರ್ವ ತನಿಖೆಯನ್ನು ನಡೆಸದೆ ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸದರಿ ಅಧಿಕಾರಿ ವಕೀಲರ ಸಂಘವನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಹೊರೆಸಿದರು.

ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಐಜೂರು ಠಾಣೆ ಎಸ್‌ಐ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಬೇರೆ ತನಿಖಾಧಿಕಾರಿಯನ್ನು ನೇಮಿಸುವಂತೆ ಒತ್ತಾಯಿಸಿ ವಕೀಲರ ಸಂಘದ ಸದಸ್ಯರ ನಿರ್ಣಯದ ಮೇರೆಗೆ ಸೋಮವಾರದಿಂದ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಅನಿರ್ಧಿಷ್ಟಾವಧಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ್, ತಿಮ್ಮೇಗೌಡ, ಮಂಜೇಶ್ ಗೌಡ, ಪ್ರಭಾ, ಶಶಿಧರ, ಗುರುಮೂರ್ತಿ, ವಿ.ಹನುಮಂತರಾಜು, ಸಿದ್ದೇಗೌಡ, ಎಂ.ಜಿ.ಮಹೇಶ್, ರೇಣುಕಾ ಪ್ರಸಾದ್ ಇತರರಿದ್ದರು.

9ಕೆಆರ್ ಎಂಎನ್ 10.ಜೆಪಿಜಿ

ರಾಮನಗರದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ಶ್ರೀವತ್ಸ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.