ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣದ ತಾಲೂಕು ವಕೀಲರ ಸಂಘದ ಸದಸ್ಯ ಬಸವರಾಜ ಮಹಾದೇವಪ್ಪ ಮಿಣಜಗಿ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ತನಿಖೆ ನಡೆಸಿ ಆತನನ್ನು ಪತ್ತೆ ಮಾಡುವಂತೆ ಒತ್ತಾಯಿಸಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ನೇತೃತ್ವದಲ್ಲಿ ಸದಸ್ಯರು ಶುಕ್ರವಾರ ಕಲಾಪಗಳಿಂದ ದೂರ ಉಳಿದು ಡಿವೈಎಸ್ಪಿ ಬಲಪ್ಪ ನಂದಗಾವಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ಸಂಘದ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ ಮಾತನಾಡಿ, ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದ ವಕೀಲ, ಸಂಘದ ಸದಸ್ಯರಾಗಿದ್ದ ಬಸವರಾಜ ಮಿಣಜಗಿ ಕಳೆದ ಎರಡು ತಿಂಗಳಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಅ.೧೭ ರಂದು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ನಿಡಗುಂದಿ ಸಿಪಿಐ ಅವರಿಗೆ ವಕೀಲರ ಸಂಘದಲ್ಲಿ ಈ ಪ್ರಕರಣದ ಬಗ್ಗೆ ತೀವ್ರ ತನಿಖೆ ಮಾಡುವಂತೆ ಒತ್ತಾಯಿಸಿ ಮನವಿ ಮಾಡಲಾಗಿತ್ತು. ಪ್ರಕರಣ ದಾಖಲಾಗಿ ಒಂದು ತಿಂಗಳು ಗತಿಸಿದರೂ ಪೊಲೀಸ್ ಇಲಾಖೆಯಿಂದ ಇದುವರೆಗೂ ಯಾವುದೇ ವಿವರಣೆ ಸಂಘಕ್ಕೆ ನೀಡಿಲ್ಲ. ಹೀಗಾಗಿ, ಡಿವೈಎಸ್ಪಿ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅವರ ಕುಟುಂಬ ಸದಸ್ಯರು ಇಲ್ಲವೇ ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಿಸಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್.ಬಿದರಕುಂದಿ, ವಕೀಲರಾದ ಮಲ್ಲಿಕಾರ್ಜುನ ದೇವರಮನಿ, ಗುರುರಾಜ ಕನ್ನೂರ, ಎಸ್.ಡಿ.ರಾಠೋಡ, ಎಸ್.ಎಂ.ಚಿಂಚೋಳಿ, ಎಂ.ಎ.ಯರನಾಳ, ಸುರೇಶ ಕೋಲಕಾರ, ಆರ್.ವ್ಹಿ.ಗುತ್ತರಗಿಮಠ, ಬಿ.ಎ.ಪಾಟೀಲ, ಸುರೇಶ ಗಬ್ಬೂರ, ಎನ್.ಎಂ.ಸಜ್ಜನ, ಕುಮಾರ ಚವ್ಹಾಣ, ಆರ್.ಐ.ಬಿರಾದಾರ, ಬಿ.ಪಿ.ಪತ್ತಾರ, ಪಿ.ಎಸ್.ಸಾಸನೂರ, ಆರ್.ಎಂ.ಅಣ್ಣಿಗೇರಿ, ಬಿ.ಆರ್.ಅಡ್ಡೋಡಗಿ, ಎಂ.ಬಿ.ಮೇಟಿ, ಸಿ.ಆರ್.ಸುಬಾನವರ, ಬಿ.ಎಸ್.ವಾಲೀಕಾರ, ಜಿ.ಜಿ.ಬಿಸನಾಳ, ಜಿ.ಬಿ.ಪವಾರ, ಎಂ.ಎನ್.ಕದಂ, ಆರ್.ಸಿ.ಚಿಕ್ಕೊಂಡ ಇತರರು ಇದ್ದರು.