ಸಾರಾಂಶ
ವಸಂತಕುಮಾರ್ ಕತಗಾಲ
ಕಾರವಾರ: ಹೊನ್ನಾವರದ ಅರೆಅಂಗಡಿಯಲ್ಲಿ ಈಚೆಗೆ ಗಿಡ ನೆಡುವ ಹಬ್ಬವೇ ನಡೆಯಿತು. ಸಾವಿರಾರು ಗಿಡಗಳನ್ನು ನೆಡಲಾಯಿತು. ಹೈಕೋರ್ಟಿನ ಐವರು ನ್ಯಾಯಮೂರ್ತಿಗಳು, ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು, ಹಿರಿಯ ವಕೀಲರು ಹೀಗೆ ನ್ಯಾಯಾಂಗದ ಅತಿರಥ ಮಹಾರಥರು ಪರಿಸರಕ್ಕೆ ನ್ಯಾಯ ದೊರಕಿಸಿಕೊಡುವ ಕಾಯಕದಲ್ಲಿ ನಿರತರಾದದ್ದು ಬೆರಗುಗೊಳಿಸುವ ಸಂಗತಿ. ಇಂತಹ ಮಹಾನ್ ಅಭಿಯಾನದ ಹಿಂದೆ ಪ್ರೇರಕ ಶಕ್ತಿಯಾಗಿದ್ದವರು ಹೈಕೋರ್ಟಿನ ಹಿರಿಯ ವಕೀಲ ವಿಘ್ನೇಶ್ವರ ಶಾಸ್ತ್ರಿ.ಹೈಕೋರ್ಟ್ ವಕೀಲರು, ಹೊನ್ನಾವರ ವಕೀಲರ ಸಂಘ, ಲೋಕಾಯುಕ್ತರು, ಜಿಲ್ಲಾಡಳಿತ ಮತ್ತಿತರ ಸಹಕಾರದಿಂದ ಅಭೂತಪೂರ್ವ ಕಾರ್ಯಕ್ರಮ ಸಹಸ್ರ ವೃಕ್ಷಾರೋಪಣ ನಡೆಸಿದ ಶ್ರೇಯಸ್ಸು ವಿಘ್ನೇಶ್ವರ ಶಾಸ್ತ್ರಿ ಅವರದ್ದು.
ಮೂಲತಃ ಹೊನ್ನಾವರ ತಾಲೂಕಿನ ಕಡ್ಲೆ ಗ್ರಾಮದ ಉಂಚಗೇರಿಯವರಾದ ವಿಘ್ನೇಶ್ವರ ಶಾಸ್ತ್ರಿ, ಪರಿಸರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಸಮಾಜಕ್ಕೆ ವಿಧಾಯಕ ಕೊಡುಗೆ ನೀಡುತ್ತಿದ್ದಾರೆ.ಬ್ಯಾಡಗಿಯಲ್ಲಿ ಟೆಲಿಫೋನ್ ಆಪರೇಟರ್ ಆಗಿದ್ದ ವಿಘ್ನೇಶ್ವರ ಶಾಸ್ತ್ರಿ ಕೇವಲ ₹500 ಕಿಸೆಯಲ್ಲಿಟ್ಟುಕೊಂಡು ಬೆಂಗಳೂರು ಬಸ್ ಹತ್ತಿದರು. ತಂದೆಯ ಅಣ್ಣನ ಮಗಳ ಮನೆಗೆ ಬಂದಿಳಿದರು. ಪ್ರೀತಿಯಿಂದ ಆಕೆ ನೀಡುತ್ತಿದ್ದ ಊಟ, ತಿಂಡಿ ನನ್ನ ಬದುಕಿಗೆ ಆಗ ಆಸರೆಯಾಗಿತ್ತು ಎಂದು ಶಾಸ್ತ್ರಿ ಕೃತಜ್ಞತೆ ವ್ಯಕ್ತಪಡಿಸುತ್ತಾರೆ.
ಪ್ರಸ್ತುತ ರಾಜ್ಯದ ಹೈಕೋರ್ಟಿನ ಸೀನಿಯರ್ ಕೌನ್ಸಿಲ್ ಆಗಿದ್ದಾರೆ. ವಕೀಲ ವೃತ್ತಿಯಲ್ಲಿ ಶಾಸ್ತ್ರಿ ಅವರದ್ದು ದೊಡ್ಡ ಹೆಸರು. ಸುಮಾರು 80ರಷ್ಟು ವಕೀಲರು ಇವರ ಗರಡಿಯಲ್ಲಿ ಪಳಗಿ ವಿವಿಧೆಡೆ ಸಾಧನೆ ಮಾಡುತ್ತಿದ್ದಾರೆ. ನನ್ನೊಂದಿಗೆ ಇದ್ದವರ ಉನ್ನತಿಯೇ ನನಗೆ ಸಮಾಧಾನ ಖುಷಿ ತಂದುಕೊಡುತ್ತದೆ ಎನ್ನುವ ವಿಶಾಲ ಹೃದಯಿ ಇವರು.ಭೂವ್ಯಾಜ್ಯ, ಸೇವೆ ಮತ್ತಿತರ ಯಾವುದೇ ಪ್ರಕರಣ ಇರಲಿ, ಶಾಸ್ತ್ರಿಯವರ ಕೈಗೆ ಕೇಸ್ ಕೊಟ್ಟರೆ ಗೆಲುವು ಪಕ್ಕಾ ಎಂಬುದು ಕಕ್ಷಿದಾರರ ಲೆಕ್ಕ. ವಕೀಲರ ಮುಖಾಂತರ ಬರುವ ಪ್ರಕರಣಗಳು ಹೆಚ್ಚಿತ್ತು. ಲೋಕೋಪಯೋಗಿ ದಿನಗೂಲಿ ನೌಕರರ ಪರವಾಗಿ ಶಾಸ್ತ್ರಿಯವರು ವಾದ ಮಂಡಿಸಿದಾಗ 70 ಸಾವಿರ ನೌಕರರ ಬದುಕಿಗೆ ಆಸರೆಯಾಯಿತು. ಆಗೆ ಶಾಸ್ತ್ರಿ ಅವರನ್ನು ಹುಬ್ಬಳ್ಳಿಯಲ್ಲಿ ಮೆರವಣಿಗೆ ಮಾಡಿ ಗೌರವಿಸಿದ್ದು ಗಮನಾರ್ಹವಾಗಿತ್ತು.
ಹೈಕೋರ್ಟಿನಲ್ಲಿ ಶಾಸ್ತ್ರಿ ತುಂಬ ಬ್ಯುಸಿ. 8-10 ಜ್ಯೂನಿಯರ್ ಇದ್ದರೂ ಪುರುಸೊತ್ತಿಲ್ಲ. ಆಗ ಪುತ್ರ ಸಾಗರ್ ಮತ್ತು ಸೊಸೆ ಐಶ್ವರ್ಯಾ ಹೆಗಡೆ ಎಲ್.ಎಲ್.ಎಂ. ಮುಗಿಸಿ ವೃತ್ತಿಗೆ ಸೇರಿದ್ದು ಇವರಿಗೆ ಅನುಕೂಲವಾಗಿದೆ. ಮತ್ತೊಬ್ಬ ಮಗ ಸಮರ್ಥ ಮತ್ತು ಸೊಸೆ ಶ್ರೇಯಾ ಅಮೆರಿಕದಲ್ಲಿ ಉತ್ತಮ ಉದ್ಯೋಗದಲ್ಲಿದ್ದಾರೆ. 65ರ ಹರೆಯದಲ್ಲೂ ಶಾಸ್ತ್ರಿ ಅವರದ್ದು 35ರ ಚುರುಕು.ಇವರ ತಂದೆ ಸುಬ್ರಹ್ಮಣ್ಯ ಶಾಸ್ತ್ರಿ ರಾಮಚಂದ್ರಾಪುರ ಮಠದ ಆಸ್ಥಾನ ವಿದ್ವಾಂಸರಾಗಿದ್ದರು. ಆದರೆ ಆರ್ಥಿಕವಾಗಿ ಬಡತನವೇ ಇತ್ತು. ಅವರು ಕರಟದಲ್ಲಿ ಹಣ ಇಡುತ್ತಿದ್ದರು ಅಂದರೆ ಆಗ ಪರಿಸ್ಥಿತಿ ಹೇಗಿತ್ತು ಎಂದು ತಿಳಿಯಬಹುದು. ಚಪ್ಪಲಿಯೂ ಇಲ್ಲದೇ ವಿಘ್ನೇಶ್ವರ ಶಾಸ್ತ್ರಿ ಕಾಲ್ನಡಿಗೆಯಲ್ಲೇ ಅರೆಅಂಗಡಿಯ ಕರಿಕಾನ ಪರಮೇಶ್ವರಿ ಹೈಸ್ಕೂಲಿಗೆ ಹೋಗಿ ಓದು ಮುಗಿಸಿದರು.
ಮುಂದೆ ಕುಮಟಾದಲ್ಲಿ ಬಿಕಾಂ ಮುಗಿಸಿ ಹುಬ್ಬಳ್ಳಿಯ ಕಾನೂನು ಕಾಲೇಜು ಮೆಟ್ಟಿಲೇರಿದರು. ಅಲ್ಲಿನ ಖರ್ಚು ವೆಚ್ಚ ನಿಭಾಯಿಸಲು ಜನತಾ ಹೊಟೇಲಿನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ, ಊಟ, ತಿಂಡಿ, ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಂಡರು. ಮೂರನೇ ರ್‍ಯಾಂಕ್ ಕೂಡ ಪಡೆದು ಅಚ್ಚರಿ ಮೂಡಿಸಿದರು.ಕೆ.ಆರ್.ಡಿ. ಕಾರಂತ, ಜಿ.ಡಿ. ಶಿರಗೂರಕರ, ಜಸ್ಟಿಸ್ ವಿ.ಜಿ. ಸಭಾಹಿತ್ (ವಕೀಲರಾಗಿದ್ದಾಗ) ಮತ್ತಿತರ ಮೇಧಾವಿಗಳೊಂದಿಗೆ ಇವರು ಕಾನೂನಿನ ಪಟ್ಟುಗಳನ್ನು ಕಲಿತು ವಕೀಲಿ ವೃತ್ತಿ ಆರಂಭಿಸಿದರು. ನಂತರ ಶಾಸ್ತ್ರಿ ಆ್ಯಂಡ್ ಶಾಸ್ತ್ರಿ ಅಸೋಸಿಯೆಟ್ಸ್ ಎಂಬ ಸ್ವಂತ ಸಂಸ್ಥೆಯನ್ನು ಬೆಂಗಳೂರಿನ ಮಲ್ಲೇಶ್ವರಂದಲ್ಲಿ ಪ್ರಾರಂಭಿಸಿ ವಕೀಲ ವೃತ್ತಿಯಲ್ಲಿಯೇ ತಮ್ಮ ಬದುಕು ಭವಿಷ್ಯವನ್ನು ಗಟ್ಟಿಯಾಗಿ ರೂಪಿಸಿಕೊಂಡರು.
ಹಳದೀಪುರ ಸಭಾಹಿತರ ಕುಟುಂಬದ ಕುಡಿಯಾದ ಸರಸ್ವತಿ ಅವರನ್ನು ವರಿಸಿದ ಶಾಸ್ತ್ರಿ ಅವರಿಗೆ ಜೀವನ ಇನ್ನಷ್ಟು ಸಲೀಸಾಯಿತು. ನ್ಯಾಯಾಂಗ ಕ್ಷೇತ್ರದಲ್ಲಿ ಶಾಸ್ತ್ರಿಯವರ ಕೊಡುಗೆಗಾಗಿ ಈಚೆಗೆ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸ್ಫೂರ್ತಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಎಷ್ಟೇ ಎತ್ತರಕ್ಕೇರಿದರೂ ಊರಿನ ನಂಟನ್ನು ಬಿಟ್ಟಿಲ್ಲ. ಉಂಚಗೇರಿಯ ಇವರ ಮನೆಯಲ್ಲೇ ಮಹಾ ಗಣಪತಿ ದೇವಸ್ಥಾನವಿದೆ. ಇದನ್ನು ಜೀರ್ಣೋದ್ಧಾರ ಮಾಡಿ, ದೇವಸ್ಥಾನವನ್ನು ಅಧ್ಯಾತ್ಮ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಿದ್ದಾರೆ. ವೇದ ನಾದೋಪಾಸನೆ, ತಾಳಮದ್ದಲೆ, ಸಂಗೀತ ಕಾರ್ಯಕ್ರಮಗಳಿಗೆ ಇವರ ನೇತೃತ್ವದಲ್ಲೇ ಈ ದೇವಾಲಯ ವೇದಿಕೆಯಾಗುತ್ತದೆ.
ಕಡ್ಲೆ ಹೆಬ್ಬಾರನಕೆರೆ ಶಾಲೆಗಳಲ್ಲಿ ಇಂಗ್ಲಿಷ್ ಮಾತನಾಡುವ ತರಬೇತಿ ಶಿಬಿರಗಳನ್ನು ಈ ಶಾಸ್ತ್ರಿಯವರೇ ಏರ್ಪಡಿಸಲು ವ್ಯವಸ್ಥೆ ಮಾಡಿದ್ದರಿಂದ ಆ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ.ಶಾಸ್ತ್ರಿ ಅವರು ವೃತ್ತಿಯಲ್ಲೂ ಆದಾಯವನ್ನೇ ಲೆಕ್ಕ ಹಾಕುತ್ತ ಕುಳಿತುಕೊಳ್ಳುವವರಲ್ಲ. ಪರಸ್ಪರ ಮುನಿಸಿಕೊಂಡು ಡೈವೋರ್ಸಿಗೆ ಬಂದ ಅನೇಕ ದಂಪತಿಗಳು ಕೈಕೈ ಹಿಡಿದು ನಗುತ್ತ ಮನೆಗೆ ಮರಳಿದ ಉದಾಹರಣೆಗಳು ಇವೆ.
ಸಮಾಜಕ್ಕೆ ನಾವು ಕೊಡುಗೆ ನೀಡುವುದು ಮುಖ್ಯ. ಅಕೇಶಿಯಾದಂತಹ ನೆಡುತೋಪುಗಳ ಬದಲು ಕಾಡು ಸಸಿಗಳು, ಹಣ್ಣಿನ ಸಸಿಗಳನ್ನು ನೆಡುವ ಮೂಲಕ ಪರಿಸರವನ್ನು ಇನ್ನಷ್ಟು ಸಮೃದ್ಧಗೊಳಿಸಲು ಸಾಧ್ಯ. ಪಶ್ಚಿಮ ಘಟ್ಟದಲ್ಲಿ ಪರಿಸರ ರಕ್ಷಣೆ, ಸಂವರ್ಧನೆ ಆಗಬೇಕಾಗಿದೆ ಎನ್ನುತ್ತಾರೆ ಹೈಕೋರ್ಟಿನ ಹಿರಿಯ ವಕೀಲ ವಿಘ್ನೇಶ್ವರ ಶಾಸ್ತ್ರಿ..