ದೇಶಕಂಡ ಮಹಾನ ನಾಯಕರು, ಹೋರಾಟಗಾರರು ಸಹ ವಕೀಲರಾಗಿ ಸಾಮಾಜಿಕ ಪ್ರವರ್ತಕರಾಗಿ ಮಾಡಿದ ಕಾರ್ಯ ಸ್ಮರಣೀಯವಾದದ್ದು. ಕಾನೂನು ಚೌಕಟ್ಟಿನಲ್ಲಿಯೇ ಕಾರ್ಯ ನಿರ್ವಹಿಸುವ ಜವಾಬ್ದಾರಿ ವಕೀಲರ ಮೇಲೆ ಇದೆ.

ಧಾರವಾಡ:

ದೇಶದ ಸ್ವಾತಂತ್ರ್ಯ ಪೂರ್ವ ಸಂವಿಧಾನ ರಚನೆಯಿಂದ ಪ್ರಸ್ತುತ ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ವಕೀಲರ ಪಾತ್ರ ಮತ್ತು ಕೊಡುಗೆ ಅಪಾರ ಎಂದು ಪ್ರಾಚಾರ್ಯರಾದ ಡಾ. ಸವಿತಾ ಪಾಟೀಲ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಹಿರಿಯ ನ್ಯಾ. ಎಂ.ಜಿ. ಅಗಡಿ ದತ್ತಿ ಮತ್ತು ವಕೀಲರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶಕಂಡ ಮಹಾನ ನಾಯಕರು, ಹೋರಾಟಗಾರರು ಸಹ ವಕೀಲರಾಗಿ ಸಾಮಾಜಿಕ ಪ್ರವರ್ತಕರಾಗಿ ಮಾಡಿದ ಕಾರ್ಯ ಸ್ಮರಣೀಯವಾದದ್ದು. ಕಾನೂನು ಚೌಕಟ್ಟಿನಲ್ಲಿಯೇ ಕಾರ್ಯ ನಿರ್ವಹಿಸುವ ಜವಾಬ್ದಾರಿ ವಕೀಲರ ಮೇಲೆ ಇದೆ. ಮಾನವ ಹಕ್ಕು, ಸಾರ್ವಜನಿಕ ಹಿತಾಸಕ್ತಿ, ಪರಿಸರ ಸಂರಕ್ಷಣೆ ಸೇರಿದಂತೆ ಹಲವಾರು ವಿಷಯಗಳಲ್ಲಿ ವಕೀಲರ ಪಾತ್ರ ಪ್ರಮುಖವಾಗಿದ್ದನ್ನು ಕಾಣಬಹುದಾಗಿದೆ. ಪ್ರಜಾಪ್ರಭುತ್ವದಲ್ಲಿ ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ವಕೀಲರ ಜವಾಬ್ದಾರಿ ಹೆಚ್ಚಿದೆ ಎಂದರು.

ನ್ಯಾ. ಕೆ.ಬಿ. ನಾವಲಗಿಮಠ ಮಾತನಾಡಿ, ದೇಶಕ್ಕೆ ಕಾನೂನಿನ ಕ್ಲಿಷ್ಟತೆ, ಆಪತ್ತು ಬಂದಾಗ ನಮ್ಮೆಲ್ಲರ ಗಮನ ವಕೀಲರತ್ತ ಇರುತ್ತದೆ. ಸಂವಿಧಾನದ ರಚನೆ ಸಂದರ್ಭದಲ್ಲಿ ಮತ್ತು ಮೂಲಭೂತ ಸಿದ್ಧಾಂತಕ್ಕೆ ಧಕ್ಕೆ ಇಲ್ಲದೆ ತಿದ್ದುಪಡಿ ಸಂದರ್ಭದಲ್ಲಿ ತಿಂಗಳುಗಟ್ಟಲೆ ವಾದ-ವಿವಾದ ಮಂಡನೆ ಮಾಡಿದ ವಕೀಲರ ಹಾಗೂ ನ್ಯಾಯಾಂಗದ ಪಾತ್ರ ಅವಿಸ್ಮರಣೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ವ್ಹಿ.ಡಿ. ಕಾಮರಡ್ಡಿ, ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಎಂ.ಎಂ. ಅಗಡಿ, ಗುರು ಹಿರೇಮಠ, ಅಶೋಕ ಏಣಗಿ, ಬಿ.ಎಸ್. ಸಂಗಟಿ, ಪಿ.ಎಚ್. ನೀರಲಕೇರಿ, ಸದಾನಂದ ಮುಂದಿನಮನಿ, ಸಿ.ಎಸ್. ನಾಗಶೆಟ್ಟಿ, ಶಿವಾನಂದ ಭಾವಿಕಟ್ಟಿ, ಮಂಗಳಗೌರಿ ಹಿರೇಮಠ ಇದ್ದರು.