ತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣ ತಡೆಗಟ್ಟಲು ವಕೀಲರುಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ವಕೀಲರ ರಕ್ಷಣಾ ಕಾಯ್ದೆ ಸಮರ್ಪಕವಾಗಿ ಜಾರಿ ಮಾಡಬೇಕು.
ಹೊಸಪೇಟೆ: ವಕೀಲರ ಮೇಲಿನ ಹಲ್ಲೆ ಹಾಗೂ ಕೊಲೆ ಪ್ರಕರಣ ಖಂಡಿಸಿ ನಗರದಲ್ಲಿ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನಾ ಬೈಕ್ ರ್ಯಾಲಿ ನಡೆಸಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರಿಗೆ ಮನವಿ ಸಲ್ಲಿಸಿದರು.ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಕೀಲರೊಬ್ಬರ ಕೊಲೆ ಹಾಗೂ ಗೌರಿಬಿದನೂರಿನಲ್ಲಿ ನಡೆದ ವಕೀಲರೊಬ್ಬರ ಮೇಲಿನ ಹಲ್ಲೆ ಘಟನೆ ಖಂಡಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಹಿರಿಯ ವಕೀಲ ಎ.ಕರುಣಾನಿಧಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣ ತಡೆಗಟ್ಟಲು ವಕೀಲರುಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ವಕೀಲರ ರಕ್ಷಣಾ ಕಾಯ್ದೆ ಸಮರ್ಪಕವಾಗಿ ಜಾರಿ ಮಾಡಬೇಕು. ವಕೀಲರ ಮೇಲೆ ಹಲ್ಲೆ ಮಾಡಿದ ಅರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕೊಲೆಯಾದ ವಕೀಲರುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕಾನೂನು ಸಚಿವರನ್ನು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಶ್ರೀಕೃಷ್ಣದೇವರಾಯ, ವಕೀಲರುಗಳಾದ ಪುಂಡಲೀಕ ಪ್ರಭು, ಮಲ್ಲಿಕಾರ್ಜುನಸ್ವಾಮಿ, ನೀಲಕಂಠ, ಕೆ.ಎಂ, ವಿಶ್ವನಾಥ, ಭರತ್, ದೇವೇಂದ್ರ, ಕೆ. ರಾಮಪ್ಪ, ಕಟಗಿ ಜಂಬಯ್ಯನಾಯಕ, ಪುಷ್ಪಲತಾ, ಟಿ ಹನುಮಂತಪ್ಪ, ತಿಪ್ಪೇಸ್ವಾಮಿ, ಎಚ್. ಮಹೇಶ್, ಬಿ. ಮಹೇಶ್, ಕಲ್ಯಾಣಯ್ಯ ಸೇರಿದಂತೆ ನೂರಾರು ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.