ವಕೀಲರು ಕಕ್ಷಿದಾರ ಹಿತರಕ್ಷಣೆ ನಂಬಿಕೆ ಉಳಿಸಿಕೊಳ್ಳಬೇಕು: ನ್ಯಾ.ಇಂದಿರೇಶ

| Published : Mar 30 2024, 12:46 AM IST

ವಕೀಲರು ಕಕ್ಷಿದಾರ ಹಿತರಕ್ಷಣೆ ನಂಬಿಕೆ ಉಳಿಸಿಕೊಳ್ಳಬೇಕು: ನ್ಯಾ.ಇಂದಿರೇಶ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಸುಗೂರಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕಾನೂನು ಕಾರ್ಯಾಗಾರಕ್ಕೆ ಹೈಕೋರ್ಟ್ ನ್ಯಾಯಾಧೀಶ ಇ.ಎಸ್.ಇಂದಿರೇಶ ಅವರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ನ್ಯಾಯ ಅರಸಿ ಜನರು ವಕೀಲರ ಬಳಿ ಬಂದಾಗ ಕಕ್ಷಿದಾರರ ಹಿತರಕ್ಷಣೆ ಮಾಡಿ ಅವರ ನಂಬಿಕೆ ಉಳಿಸಿಕೊಳ್ಳುವುದು ವಕೀಲ ವೃತ್ತಿಯಲ್ಲಿ ಪ್ರಮುಖವಾದದ್ದು ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶ, ರಾಯಚೂರು ಆಡಳಿತಾತ್ಮಕ ನ್ಯಾಯಾಧೀಶ ಇ.ಎಸ್. ಇಂದಿರೇಶ ಹೇಳಿದರು.

ಪಟ್ಟಣದ ಆರ್‌ಎಂಎಸ್ ಪಂಕ್ಷನ್ ಹಾಲ್‌ನಲ್ಲಿ ರಾಜ್ಯ ವಕೀಲರ ಪರಿಷತ್, ನ್ಯಾಯಾಂಗ ಇಲಾಖೆ, ತಾಲೂಕು ನ್ಯಾಯವಾದಿಗಳ ಸಂಘದಿಂದ ವಕೀಲರಿಗಾಗಿ 3 ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕಾನೂನು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಕೀಲರು ನಿರಂತರ ಅಧ್ಯಯನಶೀಲರಾಗಿರಬೇಕು. ಇಲ್ಲದೇ ಹೋದರೆ ಕಾನೂನು ಜ್ಞಾನದ ಅರಿವು ಆಗುವುದಿಲ್ಲ. ಓದುವ ಜೊತೆಗೆ ನುರಿತ, ಹಿರಿಯ ನ್ಯಾಯವಾದಿಗಳ ಬಳಿ ಪ್ರಾಕ್ಟಿಸ್ ಮಾಡಬೇಕು. ಅಂದಾಗ ನ್ಯಾಯಾಲಯದಲ್ಲಿನ ಬೆಳವಣಿಗೆಗಳು ಅರ್ಥ ಆಗುತ್ತವೆ. ಇಲ್ಲದೇ ಹೋದರೆ ವಕೀಲ ವೃತ್ತಿಯಲ್ಲಿ ಮುಂದುವರೆಯಲು ಹಾಗೂ ಕಕ್ಷಿದಾರರಿಗೆ ನ್ಯಾಯ ಒದಗಿಸುವುದು ಕಷ್ಟಕರವಾಗುತ್ತದೆ. ನ್ಯಾಯ ಬಯಸಿ ಬಂದವರಿಗೆ ನ್ಯಾಯ ಒದಗಿಸಲು ಅಧ್ಯಯನ ಅಗತ್ಯವಾಗಿದೆ ಎಂದು ತಿಳಿಸಿದರು.

ನಾಗರಿಕ ನ್ಯಾಯ, ಅಪರಾಧಿಕ ನ್ಯಾಯಗಳ ಕುರಿತು ಅನುಭವ, ಅಪಾರ ಪಾಂಡಿತ್ಯ ಹೊಂದಿದ ನ್ಯಾಯವಾದಿಗಳಿಂದ ಕಿರಿಯ ನ್ಯಾಯವಾದಿಗಳಿಗೆ ಉಪನ್ಯಾಸ ದೊರಕಿಸಿಕೊಡಲು ಲಿಂಗಸುಗೂರು ನ್ಯಾಯವಾದಿಗಳ ಸಂಘವು ಉತ್ತಮ ಹೆಜ್ಜೆ ಇಟ್ಟಿದೆ ಇದು ಮುಂದುವರೆಯಬೇಕು, ಕಾನೂನು ಜ್ಞಾನವು ಎಲ್ಲೇಡೆ ಹರಡಬೇಕು ಅಂದಾಗ ಮಾತ್ರ ಉತ್ತಮ ತೀರ್ಪುಗಳು ಬರುತ್ತವೆ. ಉತ್ತಮ ತೀರ್ಪುಗಳು ಬರಲು ಉತ್ತಮವಾದ ವಕೀಲಿಕೆ ಅಗತ್ಯವಾಗಿದೆ ಎಂದರು.

ಈ ವೇಳೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾರುತಿ ಎಸ್.ಬಾಗಡೆ, ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ ರಘು ಹೆಚ್,ಎಲ್. ಹೈಕೋರ್ಟ ನ್ಯಾಯವಾದಿ ಶ್ರೀನಿವಾಸ ಬಿ.ವಿ. ಹರೀಶ ಎಸ್, 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಬಿ.ಬಿ.ಜಕಾತಿ, ಹಿರಿಯ ಸಿವಿಲ್ ಜೆಎಂಎಫ್ಸಿ ನ್ಯಾಯಾಧೀಶ ಚಂದ್ರಶೇಖರ ಪ್ರಭಪ್ಪ ದಿಡ್ಡಿ, ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ದೇಶಮುಖ ಶಿವಕುಮಾರ, ಹೈಕೋರ್ಟ ನ್ಯಾಯವಾದಿ ಕೆ.ಕೆ.ಕೋಟೇಶ್ವರರಾವ್, ವಿಶೇಷ ಸರ್ಕಾರಿ ಅಭಿಯೋಜಕ ಮಧು ಲಿಂಗರಾಜ ನಾಡಗೌಡ್ರು, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ಬಾನುರಾಜ ಸೇರಿದಂತೆ ಇದ್ದರು.