ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಯುಗದಲ್ಲಿ ವಕೀಲರು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಮ್ಮ ಕೌಶಲ ಬೆಳೆಸಿಕೊಳ್ಳಬೇಕು.

ಹುಬ್ಬಳ್ಳಿ:

ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಯುಗದಲ್ಲಿ ವಕೀಲರು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಮ್ಮ ಕೌಶಲ ಬೆಳೆಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಜನಗಳು ಕಕ್ಷಿದಾರರಿಗೆ ತಲುಪುವಂತೆ ಕಾರ್ಯನಿರ್ವಹಿಸಬೇಕು ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ ಹೇಳಿದರು.

ಇಲ್ಲಿನ ವಿದ್ಯಾನಗರದಲ್ಲಿರುವ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್. ಪಾಟೀಲ ಕಾನೂನು ಮಹಾವಿದ್ಯಾಲಯದ 2026-27ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಜಗತ್ತಿನ ಪೈಪೋಟಿ ಎದುರಿಸಲು ವಿದ್ಯಾರ್ಥಿಗಳು ತಂತ್ರಜ್ಞಾನದ ಜ್ಞಾನ ಬೆಳೆಸಿಕೊಳ್ಳುವ ಜತೆಗೆ ಯಶಸ್ವಿ ವಕೀಲರಾಗಲು ಅಗತ್ಯವಾದ ಪ್ರಾಮಾಣಿಕತೆ, ಧೈರ್ಯ, ಪರಿಶ್ರಮ, ಸಮಯಪ್ರಜ್ಞೆ, ವಾಕ್ಚಾತುರ್ಯ, ಆಲೋಚನಾ ಸಾಮರ್ಥ್ಯ ಹಾಗೂ ವೃತ್ತಿ ಬಾಂಧವರೊಂದಿಗೆ ಸೌಹಾರ್ದತೆ ಸೇರಿದಂತೆ ಅಗತ್ಯ ಗುಣ ಮೈಗೂಡಿಸಿಕೊಳ್ಳಬೇಕು ಎಂದರು.

ವೇಮನ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ. ಪಾಟೀಲ, ಆಡಳಿತ ಮಂಡಳಿ ಸದಸ್ಯ ಮಹೇಶ ಪಾಟೀಲ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರಾಚಾರ್ಯ ಅಕ್ಷಯ ಯಾದವ ಕಾಲೇಜಿನ ಬೆಳವಣಿಗೆ ಹಾಗೂ ವಿವಿಧ ಚಟುವಟಿಕೆಗಳ ಕುರಿತು ವಿವರಿಸಿದರು.

ಇದೇ ವೇಳೆ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕಾಲೇಜಿನ ವಿದ್ಯಾರ್ಥಿನಿ ಡಿಂಪಲ್ ರಾಠೋಡ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಶ್ವೇತಾ ಹೆಗಡೆ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಅಶೋಕ ಹದ್ದಿ, ಜಿ.ಬಿ. ನೀಲರಡ್ಡಿ, ಪ್ಯೂಚರ್ ಫೋರ್ಜ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಪ್ರೊ. ವಿ.ಕೆ. ರಡ್ಕರ, ಅಶೋಕ ಇಟಗಿ, ವಕೀಲ ಕೆ.ಎಲ್. ಪಾಟೀಲ, ಬೋಧಕ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಾಧಿಕಾ ಪಲ್ಸಾನ್ ನಿರೂಪಿಸಿದರು. ಮಲ್ಲಿಕಾರ್ಜುನ ಸೋಮನಕಟ್ಟಿ ವಂದಿಸಿದರು.