ವಕೀಲರು ಸಮಾಜಕ್ಕೆ ಮಾದರಿ ಆಗಬೇಕು

| Published : Jan 18 2025, 12:45 AM IST

ಸಾರಾಂಶ

ಉತ್ತಮ ವಕೀಲರೆನಿಸಿಕೊಳ್ಳಲು ಪುಸ್ತಕಗಳ ಅಧ್ಯಯನ ಮಾಡಬೇಕು. ಹೊಸ ಹೊಸ ಕಾನೂನುಗಳ ಜಾರಿ ಸಂದರ್ಭದಲ್ಲಿ ಅವುಗಳ ಕುರಿತು ತಿಳಿದುಕೊಳ್ಳಬೇಕು, ವಕೀಲ ವೃತ್ತಿಯಲ್ಲಿ ಹಣ ಗಳಿಕೆಗೆ ಮಾತ್ರ ಸೀಮಿತವಾಗದೇ ಸಮಾಜಕ್ಕೂ ನೆರವಾಗುವ ಗುಣ ಬೆಳೆಸಿಕೊಳ್ಳಿ. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇದ್ದು, ಅದು ಸಮಾಜಕ್ಕೆ ಬಳಕೆಯಾಗಬೇಕು.

ಕನ್ನಡಪ್ರಭ ವಾರ್ತೆ ಕೋಲಾರ ವಕೀಲ ವೃತ್ತಿ ಆಯ್ಕೆ ಮಾಡಿಕೊಂಡವರು ನಿರಂತರ ಅಧ್ಯಯನ ಮಾಡಿ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಮತ್ತು ವೃತ್ತಿ ಘನತೆಗೆ ಧಕ್ಕೆಯಾಗದಂತೆ ನಿಮ್ಮ ನಡೆ ಇರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎ.ಮಂಜುನಾಥ್ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಸರ್ಕಾರಿ ಕಾನೂನು ಕಾಲೇಜುಗಳಿಂದ ಕಾನೂನು ಸೇವೆಗಳ ಪ್ರಾಧಿಕಾರದ ಯೋಜನೆಗಳ ಕುರಿತು ಕಾನೂನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಣ ಗಳಿಕೆಗೆ ಸೀಮಿತರಾಗಬೇಡಿ

ಉತ್ತಮ ವಕೀಲರೆನಿಸಿಕೊಳ್ಳಲು ಪುಸ್ತಕಗಳ ಅಧ್ಯಯನ ಮಾಡಬೇಕು. ಹೊಸ ಹೊಸ ಕಾನೂನುಗಳ ಜಾರಿ ಸಂದರ್ಭದಲ್ಲಿ ಅವುಗಳ ಕುರಿತು ತಿಳಿದುಕೊಳ್ಳಬೇಕು, ವಕೀಲ ವೃತ್ತಿಯಲ್ಲಿ ಹಣ ಗಳಿಕೆಗೆ ಮಾತ್ರ ಸೀಮಿತವಾಗದೇ ಸಮಾಜಕ್ಕೂ ನೆರವಾಗುವ ಗುಣ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಕಾನೂನು ಪದವಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ನೀವು ಸಮಾಜಕ್ಕೆ ಒಳಿತನ್ನು ಮಾಡುವ ಜವಾಬ್ದಾರಿ ಇದೆ, ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇದ್ದು, ಅದು ಸಮಾಜಕ್ಕೆ ಬಳಕೆಯಾಗಬೇಕು, ನೀವು ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು.ನಿರಂತರ ಅಧ್ಯಯನ ಅಗತ್ಯ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶ ಸುನಿಲ ಎಸ್.ಹೊಸಮನಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಮುಂದೆ ವಕೀಲರು, ನ್ಯಾಯಾಧೀಶರಾಗುವವರು ನೀವು ನಿಮ್ಮ ವೃತ್ತಿ ಘನತೆಗೆ ಚ್ಯುತಿಯಾಗದಂತೆ ಉತ್ತಮ ವಕೀಲರಾಗಲು ಅಥವಾ ನ್ಯಾಯಾಧೀಶರಾಗಿ ಹೊರಹೊಮ್ಮಲು ಕಾನೂನು ಪುಸ್ತಕಗಳ ನಿರಂತರ ಅಧ್ಯಯನ ಮಾಡಬೇಕು ಎಂದು ಕಿವಿ ಮಾತು ಹೇಳಿದರು.ನಿಮ್ಮಲ್ಲಿಗೆ ಬರುವ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಹೊಣೆಯೂ ನಿಮ್ಮದಾಗಿರುತ್ತದೆ, ಕಾನೂನು ಪ್ರಾಧಿಕಾರದ ಮೂಲಕ ಸಮಾಜಕ್ಕೆ ಅರಿವು ಮೂಡಿಸುವ ಕೆಲಸವನ್ನು ನೀವು ಮಾಡಬೇಕು. ಇತ್ತೀಚೆಗೆ ಕಾನೂನು ಪದವಿ ಪಡೆದವರಿಗೆ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಹಲವಾರು ಅವಕಾಶಗಳಿವೆ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಹಲವಾರು ಯೋಜನೆಗಳು ಜಾರಿಗೆ ಬಂದಿವೆ. ಅದರ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ಲೋಕ ಅದಾಲತ್‌ ಬಳಸಿಕೊಳ್ಳಿ

ಕಾನೂನು ಸೇವೆಗಳ ಪ್ರಾಧಿಕಾರ ನಡೆಸುವ ಲೋಕ ಅದಾಲತ್‌ಗಳ ಕುರಿತು ಜನರಿಗೆ ತಿಳಿಸಿ, ವೃಥಾ ನ್ಯಾಯಾಲಯಕ್ಕೆ ಅಲೆದಾಟ ತಪ್ಪಿಸಿ, ರಾಜೀ ಮೂಲಕ ಸಂಧಾನವಾದರೆ ಸಮಾಜದಲ್ಲಿ ಉತ್ತಮ ಬಾಂಧವ್ಯವೂ ವೃದ್ಧಿಯಾಗುತ್ತದೆ ಎಂದು ಜನತೆಗೆ ಅರಿವು ಮೂಡಿಸಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರೇ ಹೆಚ್ಚು ಪಾಲ್ಗೊಂಡಿದ್ದರ ನಿದರ್ಶನವಿದೆ, ಇಂತಹ ವೃತ್ತಿಗೆ ಕಳಂಕ ತರುವ ಕೆಲಸ ಮಾಡಬಾರದು, ಉತ್ತಮ ವಕೀಲರಾಗಿ ಕಕ್ಷಿದಾರರ ಹಿತ ಕಾಯುವ ಕೆಲಸ ಮಾಡಬೇಕು, ಕಾನೂನು ಸೇವಾ ಪ್ರಾಧಿಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಕಕ್ಷಿದಾರರಿಗೆ ಮಾರ್ಗದರ್ಶನ ನೀಡಿ ಎಂದರು. ಅಧ್ಯಯನ ನಿರಂತರ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಹಳ್ಳಿ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್. ಅಂಬೇಡ್ಕರ್ ಮಾತನಾಡಿ, ಕಾನೂನು ಶಿಕ್ಷಣ ಆಯ್ಕೆ ಮಾಡಿಕೊಂಡವರು ಶಿಕ್ಷಣ ಮುಗಿಸಿದರೆ ಅವರ ಅಧ್ಯಯನ ಮುಗಿಯಲ್ಲ, ಅದು ಆರಂಭ ಮಾತ್ರ, ಮುಂದೆ ದೇಶದ ಕಾನೂನುಗಳ ಅಪಾರ ಗ್ರಂಥ ಭಂಡಾರವನ್ನು ನೀವು ಓದಬೇಕಾಗುತ್ತದೆ ಆಗ ಮಾತ್ರ ಉತ್ತಮ ವಕೀಲರಾಗಲು ಸಾಧ್ಯ ಎಂದರು.ಹಿರಿಯ ವಕೀಲ ಹಾಗೂ ಕಾನೂನು ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಕೆ.ಪ್ರಶಾಂತ್, ಉಪಾಧ್ಯಕ್ಷ ಜಾಕೀರ್ ಹುಸೇನ್, ಪ್ರಧಾನ ಕಾರ್ಯದರ್ಶಿ ಚೌಡೇಗೌಡ ಇದ್ದರು.