ವಕೀಲರು ವರ್ಸಸ್‌ ಪೊಲೀಸರು: ಸಿಐಡಿಯಿಂದ ವಕೀಲರ ವಿಚಾರಣೆ

| Published : Dec 08 2023, 01:45 AM IST

ಸಾರಾಂಶ

ವಕೀಲರು ವರ್ಸಸ್‌ ಪೊಲೀಸರು: ಸಿಐಡಿಯಿಂದ ವಕೀಲರ ವಿಚಾರಣೆ

ನ.30 ರಂದು ನಡೆದ ಘಟನೆಯ ಬಗ್ಗೆ ಮಾಹಿತಿ ಸಂಗ್ರಹ । ಸಿಐಡಿ ಡಿಐಜಿಪಿ ವಂಶಿಕೃಷ್ಣ ನೇತೃತ್ವದಲ್ಲಿ ವಿಚಾರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಟೌನ್‌ ಪೊಲೀಸ್ ಠಾಣೆಯಲ್ಲಿ ವಕೀಲರ ಮೇಲೆ ಪೊಲೀಸರು ನಡೆಸಿರುವ ಹಲ್ಲೆಯಿಂದಾಗಿ ರಾಜ್ಯಾದ್ಯಂತ ಪ್ರತಿಭಟನೆ ಕಿಚ್ಚು ಹೊತ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾ ಸತ್ಯತೆ ಅರಿಯಲು ಸಿಐಡಿ ತನಿಖೆ ಆರಂಭಗೊಂಡಿದೆ.ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠದ ನಿರ್ದೇಶನದ ಮೇರೆಗೆ ಸಿಐಡಿ ಡಿಐಜಿಪಿ ವಂಶಿಕೃಷ್ಣ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗುರುವಾರ ತನಿಖೆ ಆರಂಭಿಸಿತು.ಟೌನ್‌ ಪೊಲೀಸ್‌ ಠಾಣೆಯ ಗುರುಪ್ರಸಾದ್‌ ಸೇರಿದಂತೆ ಇತರೆ ಪೊಲೀಸರಿಂದ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ದೂರು ಸಲ್ಲಿಸಿರುವ ವಕೀಲ ಪ್ರೀತಂ ಅವರನ್ನು ಗುರುವಾರ ಸಿಐಡಿ ಅಧಿಕಾರಿಗಳು ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದರು. ಇದನ್ನು ಲಿಖಿತ ರೂಪದಲ್ಲಿ ದಾಖಲಿಸಿದರು.ಈ ಸಂದರ್ಭದಲ್ಲಿ ಸಿಐಡಿ ಎಸ್ಪಿ ವೆಂಕಟೇಶ್‌, ಡಿವೈಎಸ್ಪಿ ಉಮೇಶ್‌, ಕಾನೂನು ಸಲಹೆಗಾರರಾದ ಆರ್‌.ಕೆ. ಕಾಳೆ ಹಾಜರಿದ್ದು, ವಕೀಲರ ಪ್ರೀತಂ ಅವರಿಂದ ಮಾಹಿತಿಯನ್ನು ಪಡೆದುಕೊಂಡರು.ನ. 30 ರಂದು ಪ್ರೀತಂ ಅವರು ಮಾರ್ಕೇಟ್‌ ರಸ್ತೆಯಲ್ಲಿ ಹೋಗುವಾಗ ಟೌನ್‌ ಪೊಲೀಸ್‌ ಠಾಣೆ ಎದುರು ಪ್ರೀತಂ ಅವರ ಬೈಕನ್ನು ನಿಲ್ಲಿಸಿ ಹೆಲ್ಮೆಟ್‌ ಕೇಳಿ ನಂತರದಲ್ಲಿ ಬೈಕಿನ ಕೀ ತೆಗೆದುಕೊಂಡು ಠಾಣೆಯೊಳಗೆ ಹೋಗಿದ್ದ ಸಂದರ್ಭದಲ್ಲಿ ಪೊಲೀಸರು ಪ್ರೀತಂ ಮೇಲೆ ಹಲ್ಲೆ ನಡೆಸಿದ್ದು, ಅವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದವು.ಪ್ರೀತಂ ನೀಡಿರುವ ದೂರಿನನ್ವಯ ಪಿಎಸ್‌ಐ, ಎಎಸ್‌ಐ, ಮುಖ್ಯ ಪೇದೆ ಹಾಗೂ ಮೂವರು ಪೊಲೀಸ್‌ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ಅವರನ್ನು ಬಂಧಿಸುವಂತೆ ಆಗ್ರಹಿಸಿ ವಕೀಲರು ಪ್ರತಿಭಟನೆ ನಡೆಸಿದರು. ಪೇದೆ ಗುರುಪ್ರಸಾದ್‌ ಅವರನ್ನು ಹಿರಿಯ ಅಧಿಕಾರಿಗಳು ವಶಕ್ಕೆ ತೆಗೆದು ಕೊಂಡಿದ್ದಾರೆಂಬ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಅಹೋ ರಾತ್ರಿ ಧರಣಿ ನಡೆಸಿದ್ದರು. ಇದರಿಂದಾಗಿ ಬಿಕ್ಕಟ್ಟು ಉಲ್ಬಣಗೊಂಡಿತ್ತು.ವಕೀಲರು ಹಾಗೂ ಪೊಲೀಸರ ನಡುವೆ ಸೌಹಾರ್ದತೆಗಾಗಿ ಹೈಕೋರ್ಟ್‌ನ ವಿಭಾಗೀಯ ಪೀಠ ಮಧ್ಯ ಪ್ರವೇಶಿಸಿ ಘಟನೆ ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆ ನಡೆಸಲು ಸಮ್ಮತಿ ಸೂಚಿಸಿತು. ರಾಜ್ಯ ಸರ್ಕಾರ ರಚನೆ ಮಾಡಿರುವ ಸಿಐಡಿ ತಂಡ ಬುಧವಾರ ಚಿಕ್ಕಮಗಳೂರಿಗೆ ಆಗಮಿಸಿದ್ದು, ಗುರುವಾರ ತನಿಖೆ ಆರಂಭಗೊಂಡಿತು.ವಕೀಲ ಪ್ರೀತಂ ಅವರಿಂದ ಮಾಹಿತಿ ಕಲೆ ಹಾಕಿರುವ ಸಿಐಡಿ ತಂಡ, ಶುಕ್ರವಾರ ಟೌನ್‌ ಪೊಲೀಸ್‌ ಠಾಣೆಯ ಸಿಬ್ಬಂದಿಯಿಂದ ನ. 30 ರಂದು ನಡೆದಿರುವ ಮಾಹಿತಿಯನ್ನು ಕಲೆ ಹಾಕಲಿದೆ.--- ಬಾಕ್ಸ್‌ ----ಪೊಲೀಸರಿಗೆ ನೈತಿಕ ಬೆಂಬಲ ನೀಡಬೇಕು: ನಿವೃತ್ತ ಪೊಲೀಸ್‌ ಅಧಿಕಾರಿಗಳ ಮನವಿಚಿಕ್ಕಮಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ವಕೀಲರು ಮತ್ತು ಪೋಲೀಸರ ಘಟನೆ ಹಿನ್ನೆಲೆಯಲ್ಲಿ ಪೋಲೀಸರಿಗೆ ಕಾನೂನಾತ್ಮಕ ಕರ್ತವ್ಯ ನಿರ್ವಹಿಸಲು ಆತ್ಮಸ್ಥೈರ್ಯ ತುಂಬಿ ನೈತಿಕ ಬೆಂಬಲ ನೀಡುವಂತೆ ಒತ್ತಾಯಿಸಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ರಕ್ಷಣಾಧಿ ಕಾರಿಗಳಿಗೆ ಮನವಿ ಮಾಡಿದೆ.ಈ ಸಂಬಂಧ ಗುರುವಾರ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪಂಚಾಕ್ಷರಯ್ಯ, ಕಾನೂನಿನ ಅರಿವಿದ್ದರೂ ಸಹ ವಕೀಲರಾಗಿ ಕಾನೂನು ಉಲ್ಲಂಘನೆ ಮಾಡಿ ವಿನಾಕಾರಣ ಕರ್ತವ್ಯ ನಿರತ ಪೊಲೀಸರ ಮೇಲೆ ಪ್ರಕರಣ ದಾಖಲಿಸಿ ಅಮಾನತು ಮಾಡಿರುವುದು ಸರಿಯಲ್ಲ ಎಂದರು.ಮೋಟಾರು ವಾಹನ ಕಾಯ್ದೆಯನ್ವಯ ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡುವುದು ಅಪರಾಧ ಎಂದು ತಿಳಿದಿರುವ ವಕೀಲರು ಅಪರಾಧವೆಸಗಿದ ವ್ಯಕ್ತಿಗೆ ನ್ಯಾಯಾಲಯ ದಂಡ ಕಟ್ಟುವಂತೆ ತೀರ್ಪು ನೀಡಿರುವ ಅರಿವಿದ್ದರೂ ಅದನ್ನೆಲ್ಲಾ ಧಿಕ್ಕರಿಸಿ ಬೈಕ್ ಚಾಲನೆ ಮಾಡುತ್ತಿರುವುದನ್ನು ಕಂಡ ಪೊಲೀಸರು ಪ್ರಶ್ನಿಸಿದ್ದಕ್ಕೆ ವಾಗ್ವಾದಕ್ಕಿಳಿದಿದ್ದು ಘಟನೆಗೆ ಕಾರಣವಾಗಿದೆ. ಆದ್ದರಿಂದ ಯಾವುದೇ ತಪ್ಪು ಮಾಡದ ಪೊಲೀಸರಿಗೆ ನೈತಿಕ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. 7 ಕೆಸಿಕೆಎಂ 3ಟೌನ್‌ ಪೊಲೀಸ್‌ ಠಾಣೆಯ ಪೊಲೀಸರನ್ನು ಅಮಾನತು ಮಾಡಿರುವ ಆದೇಶವನ್ನು ಹಿಂದಕ್ಕೆ ಪಡೆಯು ವಂತೆ ಆಗ್ರಹಿಸಿ ಜಿಲ್ಲಾ ನಿವೃತ್ತ ಪೊಲೀಸ್‌ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಎಸ್ಪಿ ಡಾ. ವಿಕ್ರಂ ಅಮಟೆ ಅವರಿಗೆ ಮನವಿ ಸಲ್ಲಿಸಿದರು.