ದರ್ಗಾದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅಡಿಗಲ್ಲು ಹಾಕ್ತೇವೆ: ಮುತಾಲಿಕ್

| Published : Feb 12 2024, 01:33 AM IST

ಸಾರಾಂಶ

ಆಳಂದ ಪಟ್ಟಣದಲ್ಲಿರುವ ಸೂಫಿ ಹಜರತ್ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಸುತ್ತಮುತ್ತ ದೇವಸ್ಥಾನ ನಿರ್ಮಾಣಕ್ಕೆ ಬರಲಿರುವ ಶಿವರಾತ್ರಿಯಂದು ಅಡಿಗಲ್ಲು ಇಡುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ಸೂಫಿ ಹಜರತ್ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಸುತ್ತಮುತ್ತ ದೇವಸ್ಥಾನ ನಿರ್ಮಾಣಕ್ಕೆ ಬರಲಿರುವ ಶಿವರಾತ್ರಿಯಂದು ಅಡಿಗಲ್ಲು ಇಡುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಾರು ವರ್ಷದ ಹಿಂದಿನ ಪವಿತ್ರ ಕ್ಷೇತ್ರವಾಗಿದೆ. ಕಳೆದ ವರ್ಷ ಕೋರ್ಟ್ ಪೂಜೆ ಮಾಡಲು ಅನುಮತಿ ಕೊಟ್ಟಿದೆ. ಆ ಸ್ಥಳದಲ್ಲಿ ಈಶ್ವರ ಲಿಂಗ ಇದ್ದ ಮೇಲೆ ಜೀರ್ಣೋದ್ಧಾರ, ದೇವಸ್ಥಾನ ಮಾಡೋದು ನಮ್ಮ ಕರ್ತವ್ಯ. ಅದು ಮುಂದುವರೆದ ಭಾಗವಾಗಿದ್ದು, ಶಿವರಾತ್ರಿ ದಿನ ಗುದ್ದಲಿ ಪೂಜೆಯಿಂದ ಪ್ರಾರಂಭ ಮಾಡುತ್ತೇವೆ ಎಂದಿದ್ದಾರೆ.

ರಾಘವ ಚೈತನ್ಯ ಈಶ್ವರ ಲಿಂಗ ಪ್ರತಿಷ್ಠಾಪನೆ ಮಾಡಿದ ಸ್ಥಳ ಇದೆ. ಅದನ್ನು ಅತಿಕ್ರಮಣ ಮಾಡಿಕೊಂಡಿದ್ದು ಮುಸ್ಲಿಂರು ಈಗ ದರ್ಗಾ ಮಾಡಿ ಉರುಸ್ ಮಾಡುತ್ತಿರೋದು ಇತ್ತೀಚೆಗೆ ನಾವು ನಮ್ಮ ಹಕ್ಕು ಇದೆ, ಶಿವರಾತ್ರಿ ದಿನ ಆ ಸ್ಥಳದಲ್ಲಿ ಸಾವಿರಾರು ಜನ ಅಲ್ಲ, ಲಕ್ಷಾಂತರ ಜನ ಬಂದು ಪೂಜೆ ಮಾಡುತ್ತೇವೆ. ನಮಗೆ ರಕ್ಷಣೆ ಕೊಡೋದು ಸರ್ಕಾರದ ಕೆಲಸ , ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಲಿ, ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ ಎಂದಿದ್ದಾರೆ.

ಡಿಕೆಸು ದೇಶದ್ರೋಹಿ ಹೇಳಿಕೆ: ದೇಶ ವಿಭಜನೆ ಕುರಿತು ಡಿ.ಕೆ. ಸುರೇಶ್ ಹೇಳಿಕೆ ಅತ್ಯಂತ ಖಂಡನೀಯ, ಡಿಕೆ ಸುರೇಶ್ ಹೇಳಿಕೆ ದೇಶದ್ರೋಹಿ ಹೇಳಿಕೆ, ದೇಶವನ್ನ ತುಂಡು ಮಾಡೋಕೆ ನಿಮಗ್ಯಾರು ಅಧಿಕಾರ ಕೊಟ್ಟಿದ್ದಾರೆ? ಜಾತಿ ಹೆಸರಿನಲ್ಲಿ ದೇಶವನ್ನ ತುಂಡು ಮಾಡೋದೇ ಆಗಿದ್ದರೆ ಸ್ವಾತಂತ್ರ್ಯ ಹೋರಾಟ ಯಾಕೆ ಮಾಡಿದಿರಿ? ನೀವು ದೇಶ ಒಡೆಯೋಕೆನೆ ಸ್ವಾತಂತ್ರ್ಯ ಹೋರಾಟ ಮಾಡಿದಿರ ಎಂದು ಮುತಾಲಿಕ್‌ ಡಿಕೆ ಸುರೇಶ ಅವರನ್ನು ಖಾರವಾಗಿ ಪ್ರಶ್ನಿಸಿದರು.

ಹಿಂದುಗಳ ತೆರಿಗೆ ಹಿಂದುಗಳಿಗೆ ಹೇಳಿಕೆ ವಿಚಾರವಾಗಿ ಹರಿಶ್ ಪುಂಜಾ ಹೇಳಿಕೆ ವಿಚಾರದ ಬಗ್ಗೆ ಗಮನ ಸೆಳೆದಾಗ ಚರ್ಚೆ ಆಗ್ತಿರೋದು ಸರಿಯಲ್ಲ, ಹಿಂದುಗಳ ತೆರಿಗೆ ಹಿಂದುಗಳಿಗೆ ಮುಸ್ಲಿಂರ ತೆರಿಗೆ ಮುಸ್ಲಿಂರಿಗೆ ಅನ್ನೋದು ಸರಿಯಲ್ಲ. ಮೋದಿಯವರು ರಾಷ್ಟ್ರವನ್ನ ಸಮಾನತೆಯಿಂದ ನೋಡಿಕೊಳ್ಳುತ್ತಿದ್ದೆನೆಂದು ಹೇಳಿದ್ದಾರೆ. ಸಮಾನತೆಯಿಂದ ಯಾವ ಬೇಧ ಭಾವ ಇಲ್ಲದೆ ಹತ್ತು ವರ್ಷ ನಡೆಸಿಕೊಂಡು ಬಂದಿದ್ದಾರೆ ಅಂತಾ ಹೇಳಿದ್ದಾರೆ. ಹೀಗೆ ಪ್ರತಿಯೊಬ್ಬರೂ ತಮ್ಮ ಟ್ಯಾಕ್ಸ್‌ ಮೂಲಕ ಜೀವನ ಮಾಡ್ತೇವೆ ಅಂದ್ರೆ ಮೂರ್ಖತನದ ಹೇಳಿಕೆ, ಅದರ ಬಗ್ಗೆ ಮಾತಾಡೋದು ಮೂರ್ಖತನದ ಚರ್ಚೆ ಎಂದು ಮುತಾಲಿಕ್‌ ಹೇಳಿದರು.