ಸಾರಾಂಶ
ಹಸಿರು ಕ್ರಾಂತಿಯ ಮೂಲಕ ದೇಶದಲ್ಲಿ ಉಂಟಾಗಿದ್ದ ಆಹಾರ ಕೊರತೆಯನ್ನು ನೀಗಿಸಿದರು. ಅಲ್ಲದೇ ಇಡೀ ಮಾನವರ ಅಭ್ಯುದಯಕ್ಕಾಗಿ ಯೋಜನೆಗಳನ್ನು ರೂಪಿಸಿದ್ದರು.
ಕನ್ನಡಪ್ರಭ ವಾರ್ತೆ ಹಾರೋಹಳ್ಳಿ
ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಂ ಹಸಿರು ಕ್ರಾಂತಿಯ ಮೂಲಕ ದೇಶದ ಆಹಾರ ಕೊರತೆಯನ್ನು ನೀಗಿಸಿದ ಮಹಾನ್ ನಾಯಕ ಎಂದು ತಹಸೀಲ್ದಾರ್ ವಿಜಿಯಣ್ಣ ಹೇಳಿದರು.ತಾಲೂಕು ಆಡಳಿತದ ವತಿಯಿಂದ ಚಾಮುಂಡೇಶ್ವರಿ ದೇವಸ್ಥಾನದ ಬಳಿ ನಡೆದ ಬಾಬು ಜಗಜೀವನ ರಾಂ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆ ಕಾಲದಲ್ಲೇ ಮುಂದಾಲೋಚನೆ ಇಟ್ಟುಕೊಂಡು ಬಾಬು ಜಗಜೀವನ ರಾಂ ಕಾರ್ಯ ನಿರ್ವಹಿಸಿದ್ದರು. ಹಸಿರು ಕ್ರಾಂತಿಯ ಮೂಲಕ ದೇಶದಲ್ಲಿ ಉಂಟಾಗಿದ್ದ ಆಹಾರ ಕೊರತೆಯನ್ನು ನೀಗಿಸಿದರು. ಅಲ್ಲದೇ ಇಡೀ ಮಾನವರ ಅಭ್ಯುದಯಕ್ಕಾಗಿ ಯೋಜನೆಗಳನ್ನು ರೂಪಿಸಿದ್ದರು ಎಂದರು.
ಸಮತಾ ಸೈನಿಕ ದಳ ಯುವ ಘಟಕ ಅಧ್ಯಕ್ಷ ಜಿ.ಗೋವಿಂದಯ್ಯ ಮಾತನಾಡಿ, ಬಾಬು ಜಗಜೀವನ ರಾಂ ಈ ದೇಶದ ಶಕ್ತಿ, ಇವರು ದೇಶದ ಉದ್ದಗಲಕ್ಕೂ ಸ್ವತಂತ್ರ ಸೇನಾನಿಯಾಗಿ ಹೋರಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅಸ್ಪೃಶ್ಯತೆ ವಿರುದ್ಧ ಹೋರಾಡಿ, ಮಹಾತ್ಮಾ ಗಾಂಧಿಯವರ ಜೊತೆಗೂಡಿ ಎಲ್ಲರ ಸರ್ವತೋಮುಖ ಬೆಳವಣಿಗೆಗೆ ದುಡಿದಿದ್ದರು ಎಂದರು.ಬಾಬು ಜಗಜೀವನ ರಾಂ ರವರ 117ನೇ ಜಯಂತಿ ಪ್ರಯುಕ್ತ ಬೆಳ್ಳಿ ರಥದ ಮೂಲಕ ಅವರ ಭಾವಚಿತ್ರವನ್ನು ಹಾರೋಹಳ್ಳಿ ಸರ್ಕಲ್ ನಿಂದ ಆಂಜನೇಯ ದೇವಸ್ಥಾನದವರೆಗೆ ತಮಟೆ, ವಾದ್ಯಗಳ ಮುಖಾಂತರ ಮೆರವಣಿಗೆಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸೈನಿಕ ದಳದ ಜಿಲ್ಲಾಧ್ಯಕ್ಷ ಕೋಟೆ ಕುಮಾರ್, ಪಪಂ ಮುಖ್ಯಾಧಿಕಾರಿ ಶ್ವೇತಬಾಯಿ, ಚಂದ್ರು, ರಾಮಕೃಷ್ಣ, ಮೇಡಮಾರನಹಳ್ಳಿ ಶಿವರಾಜು, ಬೆನಚುಕಲ್ದೊಡ್ಡಿ ರುದ್ರೇಶ್, ಕೋಟೆ ಪ್ರಕಾಶ್, ಶಶಿಭಾರ್ಗವ್, ಸುರೇಶ್, ಲಕ್ಷ್ಮಣ್ ಕಲ್ಬಾಳ್, ಚಂದ್ರು, ನವೀನ್ಕುಮಾರ್, ಕಾಳಮ್ಮ, ಶೇಷಾದ್ರಿ ರಾಮು, ಶ್ರೀನಿವಾಸ್ ಸೇರಿ ಹಲವರು ಹಾಜರಿದ್ದರು.