ಮೈತ್ರಿಕೂಟದ ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಘೋಷಿಸಿದರು.
ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ । ಬಿಜೆಪಿ ಜೆಡಿಎಸ್ ಸಮನ್ವಯ ಸಭೆ । ಒಟ್ಟಾಗಿ ಕೆಲಸ ಮಾಡಿ ಯಶಸ್ಸು ಗಳಿಸುತ್ತೇವೆ: ಓಂಶಕ್ತಿ ಚಲಪತಿ
ಕನ್ನಡಪ್ರಭ ವಾರ್ತೆ ಕೋಲಾರಮುಂಬರುವ ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ನಗರದ ಹೊರವಲಯದ ರತ್ನ ಕನ್ವೆನ್ಷನ್ ಹಾಲ್‌ನಲ್ಲಿ ಬಿಜೆಪಿ- ಜೆಡಿಎಸ್ ಸಂಯುಕ್ತ ಸಮನ್ವಯ ಹಾಗೂ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಘೋಷಿಸಿದರು.
ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಎಲ್.ಎನ್.ರೇಣುಪ್ರಸಾದ್ ಹಾಗೂ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಅನುಭವ ಮತ್ತು ಹಿರಿಯ ನಾಯಕರ ಸಹಕಾರದೊಂದಿಗೆ ಸಭೆಯನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು.ಶ್ರೀನಿವಾಸಪುರ ಶಾಸಕ ವೆಂಕಟಶಿವರೆಡ್ಡಿ ಮಾತನಾಡಿ, ಇಂದಿನ ಈ ಕಾರ್ಯಕ್ರಮ ಅತ್ಯಂತ ಪ್ರಮುಖವಾದುದಾಗಿದ್ದು, ತಾವೆಲ್ಲರೂ ಒಟ್ಟಾಗಿ ಬಂದು ಯಶಸ್ವಿಗೊಳಿಸಬೇಕು. ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಒಗ್ಗಟ್ಟಾಗಿ ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಪ್ರಸ್ತುತ ಮುಂಬರುವ ಗ್ರಾಪಂ, ತಾಪಂ, ಜಿಪಂ ಹಾಗೂ ಎಂಎಲ್‌ಎ ಚುನಾವಣೆಯಲ್ಲೂ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕು. ಪ್ರಧಾನಿ ಮೋದಿಯವರ ಆಶೀರ್ವಾದದೊಂದಿಗೆ ಪಕ್ಷವನ್ನು ಬೆಳೆಸಬೇಕಿದ್ದು, ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕೆಂದು ಮನವಿ ಮಾಡಿದರು.ಮಾಜಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಸುಮಾರು ೩೩ ರಿಂದ ೩೪ ಸಾವಿರ ಪದವೀಧರ ಮತದಾರರಿದ್ದು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು ೬೦ ಸಾವಿರ ಮತದಾರರಿದ್ದಾರೆ. ಇಡೀ ಕ್ಷೇತ್ರದಲ್ಲಿ ೨ ಲಕ್ಷ ಮತದಾರರಿದ್ದು, ಶೇ. ೩೩ರಷ್ಟು ಮತದಾರರು ನಮ್ಮ ಜಿಲ್ಲೆಯಲ್ಲಿದ್ದಾರೆ ಎಂದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ಆಗ್ನೇಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಲ್ಲಿ ಶೇ.೯೦ರಷ್ಟು ಬಾರಿ ಬಿಜೆಪಿ ಮತ್ತು ಜೆಡಿಎಸ್ ಗೆದ್ದಿವೆಯೇ ಹೊರತು ಕಾಂಗ್ರೆಸ್ ಗೆದ್ದಿಲ್ಲ. ಕಾಂಗ್ರೆಸ್ ಸರ್ಕಾರದ ಧೋರಣೆ ಯುವಕರು, ಮಹಿಳೆಯರು, ಶಿಕ್ಷಕರು ಹಾಗೂ ಅಧಿಕಾರಿಗಳ ವಿರುದ್ಧವಿದ್ದು, ಸರ್ಕಾರದಿಂದ ಶಿಕ್ಷಕರಿಗೆ ಮೋಸವಾಗಿದೆ. ಪಂಚಾಯತ್ ಹಾಗೂ ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಿ, ಸರ್ಕಾರದ ವೈಫಲ್ಯಗಳನ್ನು ಮತದಾರರಿಗೆ ತಿಳಿಸಿ ಮೈತ್ರಿ ಅಭ್ಯರ್ಥಿಯನ್ನು ಭರ್ಜರಿ ಅಂತರದಿಂದ ಗೆಲ್ಲಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಇಂದು ಸಭೆ ನಡೆಸಿ ಪ್ರಚಾರದ ರೂಪುರೇಷೆಗಳನ್ನು ಚರ್ಚಿಸಿವೆ, ಎನ್.ಡಿ.ಎ ಕಡೆಯಿಂದ ನಾಲ್ಕು ಜನರೂ ಗೆಲ್ಲಬೇಕು, ಅದರಲ್ಲೂ ಕೋಲಾರ ಜಿಲ್ಲೆಯಲ್ಲಿ ಸುರೇಶ್ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರಮುಖ ಮುಖಂಡರನ್ನು ಒಟ್ಟುಗೂಡಿಸಿ ಸಂದೇಶ ತಲುಪಿಸುತ್ತಿದ್ದೇವೆ ಎಂದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಎನ್.ಡಿ.ಎ. ಮೈತ್ರಿಕೂಟದ ಎಲ್ಲಾ ನಾಯಕರು ಇಂದು ಸಭೆ ನಡೆಸಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ದಿನಕ್ಕೊಂದು ಹಗರಣಗಳು ನಡೆಯುತ್ತಿವೆ ಎಂದು ಟೀಕಿಸಿದರು.ಕೋಲಾರ ಜಿಲ್ಲೆಯಲ್ಲಿ ರೈತರಿಗೆ ಮತ್ತು ಜನರಿಗೆ ತೊಂದರೆ ಕೊಡುತ್ತಿದ್ದು ಅಭಿವೃದ್ಧಿ ಶೂನ್ಯ. ಜೆಡಿಎಸ್-ಬಿಜೆಪಿಯ ಎಲ್ಲಾ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ’ನಾನೇ ಸುರೇಶ್’ (ನಾನೇ ಅಭ್ಯರ್ಥಿ) ಎನ್ನುವ ರೀತಿಯಲ್ಲಿ ಹೆಚ್ಚಿನ ಮತಗಳನ್ನು ಕೊಡಿಸುವುದರ ಮೂಲಕ ಗೆಲುವಿಗೆ ದಾರಿ ಮಾಡಿಕೊಡಬೇಕು ಎಂದು ಕರೆ ನೀಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ ನಾಯಕರ ನೇತೃತ್ವದಲ್ಲಿ ೧೪೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಎನ್.ಡಿ.ಎ ಸರ್ಕಾರ ತರಲು ಶಪಥ ಮಾಡಿದ್ದೇವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಬಿ.ಪಿ.ವೆಂಕಟಮುನಿಯಪ್ಪ, ಬ್ಯಾಟರಂಗೇ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಮುಖಂಡರಾದ ರಾಮಚಂದ್ರಗೌಡ, ರಮೇಶ್ ಬಾಬು, ಸಿಎಂಆರ್ ಶ್ರೀನಾಥ್, ಅರುಣಮ್ಮ, ವಿಜಯಕುಮಾರ್, ಡಾ.ವೇಣುಗೋಪಾಲ್, ಕೆಂಬೋಡಿ ನಾರಾಯಣಸ್ವಾಮಿ, ಶಿಳ್ಳಂಗೆರೆ ಮಹೇಶ್ ಇದ್ದರು.