ಸಾರಾಂಶ
ಈ ಸಮಾಜಕ್ಕೆ ನಗರಸಭೆಯ ವತಿಯಿಂದ ದೇವಸ್ಥಾನದ ಸುತ್ತ ಕಾಂಪೌಂಡ್, ಶೌಚಾಲಯವನ್ನು ಕಟ್ಟಿಸಿಕೊಟ್ಟಿದ್ದು, ಮುಂದಿನ ೨ ತಿಂಗಳ ಒಳಗೆ ಅಡುಗೆ ಮನೆ ಸೇರಿ ರಸ್ತೆಯ ಸೌಲಭ್ಯವನ್ನು ಕಲ್ಪಿಸಲಾಗುವುದು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ತನ್ನದೇ ಆದ ಪರಂಪರೆ ಇದ್ದು, ಈ ಸಮಾಜದ ಏಳಿಗೆಗೆ ಸಮುದಾಯದ ಮುಖಂಡರು ಶ್ರಮಿಸುವ ಅಗತ್ಯತೆ ಇದೆ ಎಂದು ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲಾ ಹೇಳಿದರು.ನಗರದ ಹೊಯ್ಸಳ ನಗರದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸವಿತಾ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿಯವರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರ ಶಾಸನಗಳಲ್ಲಿ ಸವಿತಾ ಸಮಾಜದ ಬಗ್ಗೆ ಉಲ್ಲೇಖವಿದೆ. ಅಲ್ಲದೇ ಸಮಾಜದ ಸಾಧನಗಳ ಕೆತ್ತನೆಯನ್ನೂ ಸಹ ಮೂಡಿಸಲಾಗಿದೆ. ಎರಡು ಸಾವಿರ ವರ್ಷಗಳ ಇತಿಹಾಸವಿರುವ ಈ ಸಮಾಜವು ತನ್ನದೇ ಆದ ಗೌರವ, ಘನತೆ ಹೊಂದಿದೆ ಎಂದರು.ಅನುದಾನ: ಈ ಸಮಾಜಕ್ಕೆ ನಗರಸಭೆಯ ವತಿಯಿಂದ ದೇವಸ್ಥಾನದ ಸುತ್ತ ಕಾಂಪೌಂಡ್, ಶೌಚಾಲಯವನ್ನು ಕಟ್ಟಿಸಿಕೊಟ್ಟಿದ್ದು, ಮುಂದಿನ ೨ ತಿಂಗಳ ಒಳಗೆ ಅಡುಗೆ ಮನೆ ಸೇರಿ ರಸ್ತೆಯ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಕುಮಾರ್ ಮಾತನಾಡಿ, ದೇವಸ್ಥಾನದ ಜಾಗವನ್ನು ತಮ್ಮ ಸಮಾಜಕ್ಕೆ ಮಾಡಿಕೊಡುವ ಮೂಲಕ ಶಾಸಕರು, ನಗರಸಭೆ ಅಧ್ಯಕ್ಷರು ಸ್ಪಂದಿಸುವ ಕಾರ್ಯವನ್ನು ಮಾಡುವಂತೆ ಮನವಿ ಮಾಡಿದರು.ನಗರಸಭೆ ಉಪಾಧ್ಯಕ್ಷ ಮನೋಹರ್, ಸದಸ್ಯ ದರ್ಶನ್, ಮುಖಂಡರಾದ ಹರೀಶ್, ಶ್ರೀಹರಿ, ಸೆಸ್ಕಾಂ ಸಲಹಾ ಸಮಿತಿ ನಾಮನಿರ್ದೇಶಕ ವಿಜಯಕುಮಾರ್, ಸಮಾಜದ ವಿ. ರಾಜು, ರಾಜುಮಣಿ, ನಾರಾಯಣಸ್ವಾಮಿ, ನಾಗರಾಜು, ಗೋವಿಂದಸ್ವಾಮಿ, ಧರ್ಮಣ್ಣ ಉಪಸ್ಥಿತರಿದ್ದರು.