ಎಸ್‌ಟಿಗೆ ಕುರುಬರ ಸೇರ್ಪಡೆಗೆ ನಾಯಕರ ತೀವ್ರ ವಿರೋಧ

| Published : Sep 19 2025, 01:00 AM IST

ಸಾರಾಂಶ

ಕುರುಬ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ವಿರೋಧಿಸಿ ಕರೆದಿದ್ದ ವಾಲ್ಮೀಕಿ ನಾಯಕ ಸಮಾಜದ ಮುಖಂಡರ ರಾಜ್ಯಮಟ್ಟದ ಸಭೆಯು ಕಾಂಗ್ರೆಸ್‌- ಬಿಜೆಪಿ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾದ ಘಟನೆ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಗುರುವಾರ ನಡೆಯಿತು.

- ಹರಿಹರದ ರಾಜನಹಳ್ಳಿ ಗ್ರಾಮದ ಶ್ರೀ ವಾಲ್ಮೀಕಿ ಪೀಠದಲ್ಲಿ ರಾಜ್ಯಮಟ್ಟದ ಸಭೆ । ಬಂಗಾರು ಹನುಮಂತು- ಬಳ್ಳಾರಿ ತುಕಾರಾಂ ವಾಕ್ಸಮರ!

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕುರುಬ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ವಿರೋಧಿಸಿ ಕರೆದಿದ್ದ ವಾಲ್ಮೀಕಿ ನಾಯಕ ಸಮಾಜದ ಮುಖಂಡರ ರಾಜ್ಯಮಟ್ಟದ ಸಭೆಯು ಕಾಂಗ್ರೆಸ್‌- ಬಿಜೆಪಿ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾದ ಘಟನೆ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಗುರುವಾರ ನಡೆಯಿತು.

ಹರಿಹರ ತಾಲೂಕು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಾಲ್ಮೀಕಿ ಸಮುದಾಯದ ನಾಯಕರ ರಾಜ್ಯ ಮಟ್ಟದ ಸಭೆ ಕರೆಯಲಾಗಿತ್ತು. ವೇದಿಕೆಯಲ್ಲಿದ್ದ ಬಳ್ಳಾರಿ ಸಂಸದ ಇ.ತುಕಾರಾಂ ಹಾಗೂ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಧ್ಯೆ ಸಣ್ಣದಾಗಿ ಉಂಟಾದ ಮಾತಿನ ಚಕಮಕಿ ದೊಡ್ಡ ವಾಗ್ವಾದವಾಗಿ, ಭಾರೀ ಗಲಾಟೆಯಾಗಿ ಮಾರ್ಪಟ್ಟಿತು.

ಬಿಜೆಪಿ ಮುಖಂಡ ಬಂಗಾರು ಹನುಮಂತು ಸಭೆಯಲ್ಲಿ ಮಾತನಾಡಿ, ವಾಲ್ಮೀಕಿ ನಿಗಮದ ಹಣವನ್ನೇ ಬಳಸಿಕೊಂಡು ಕಾಂಗ್ರೆಸ್‌ನವರು ಬಳ್ಳಾರಿಯಲ್ಲಿ ಚುನಾವಣೆ ಗೆದ್ದರು. ಆದರೆ, ನಮ್ಮ ನಾಯಕ ಸಮಾಜದ ಒಬ್ಬ ವ್ಯಕ್ತಿಯ ತಲೆದಂಡವಾಯಿತು ಎಂದರು. ಬಂಗಾರು ಹನುಮಂತು ಅವರ ಈ ಹೇಳಿಕೆ ವಿರೋಧಿಸಿದ ಸಂಸದ ತುಕಾರಾಂ ಸಭೆ ತ್ಯಜಜಿಸಲು ಹೊರಟುನಿಂತರು. ಆಗ ಕೆಲ ಮುಖಂಡರು ಬಂಗಾರು ಹನುಮಂತು ಕೈಯಲ್ಲಿದ್ದ ಮೈಕ್ ಕಸಿದುಕೊಂಡರು.

ಈ ವೇಳೆ ಕಾಂಗ್ರೆಸ್- ಬಿಜೆಪಿ ನಾಯಕರ ಗುಂಪುಗಳ ಮಧ್ಯೆ ಗಲಾಟೆ ತಾರಕಕ್ಕೇರಿತು. ವೇದಿಕೆ ಮತ್ತೊಂದು ಕಡೆ ಮೈಕ್ ಹಿಡಿದು ನಿಂತ ಸಂಸದ ತುಕಾರಾಂ ಮಾತನಾಡಲು ಮುಂದಾದಾಗ ಕೆಲವರು ತಡೆದಿದ್ದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಲುಪಿತು.

ತುಕಾರಾಂ ನೋಡ ನೋಡುತ್ತಲೇ ವೇದಿಕೆಯ ಕೆಳಗಿಳಿದರು. ಸುಮಾರು ಹೊತ್ತಿನ ನಂತರ ತುಕಾರಾಂ ಸೇರಿದಂತೆ ಎರಡೂ ಪಕ್ಷಗಳ ಮುಖಂಡರನ್ನು ಸಮಾಧಾನಪಡಿಸಿದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ವೇದಿಕೆ ಮೇಲಿದ್ದ ಎಲ್ಲ ಬೆಂಬಲಿಗರನ್ನು ಕೆಳಗೆ ಕಳಿಸಿ, ಸಭೆ ಪುನಾರಂಭಿಸಲು ಸೂಚಿಸಿದರು.

ಮತ್ತೆ ಮಾತು ಮುಂದುವರಿಸಿದ ಬಿಜೆಪಿ ಮುಖಂಡ ಬಂಗಾರು ಹನುಮಂತು, ನಾನೇನೂ ವೇದಿಕೆಯಲ್ಲಿ ವೈಯಕ್ತಿಕ ವಿಚಾರವನ್ನೇನು ಮಾತನಾಡುತ್ತಿಲ್ಲ. ಎಚ್.ವಿಶ್ವನಾಥರ ಹೇಳಿಕೆಯನ್ನಷ್ಟೇ ಪ್ರಸ್ತಾಪಿಸಿದ್ದೇನೆ ಎಂದರು.

ನಂತರ ಮಾತನಾಡಿದ ಬಳ್ಳಾರಿ ಸಂಸದ ತುಕಾರಾಂ, ರಾಜಕೀಯ ಸಂಸ್ಕಾರಸ್ಥನಾಗಿ ನಾನು ಶ್ರೀಪೀಠದ ವೇದಿಕೆಯಲ್ಲಿ ಮಾತನಾಡುತ್ತಿದ್ದೇನೆ. ರಾಜಕೀಯ ಸಂಸ್ಕಾರ ಬೇಕು. ನಾನು ನನ್ನ ಜವಾಬ್ದಾರಿ ಅರಿತಿದ್ದೇನೆ. ನಿಮಗೆ ಇಲ್ಲಿ ಸಂದೇಶ ಕೊಡಬೇಕೆಂದು ನಾನು ಬಂದಿದ್ದೇನೆ. ರಾಜಕಾರಣಿಗಳನ್ನು ನೋಡಿ, ಸಮಾಜ ಕಲಿಯಬೇಕು. ಅಂತಹ ರಾಜಕಾರಣಿಗಳು ಇರಬೇಕು ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷವಾದರೂ ಸುಸಂಸ್ಕೃತವಾಗಿ ಸಭೆ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾವು ಹಿಂದೆ ತಪ್ಪನ್ನು ಮಾಡಿರಬಹುದು. ಪ್ರಜ್ಞಾವಂತರಾಗಿಯೇ ನಾವು ಮಾಡಬೇಕಾಗುತ್ತದೆ. ಇಂದು ಸಭೆ ನಡೆದಿದ್ದು, ಸಂವಹನ ಕೊರತೆಯಿಂದಾಗಿ ಗ್ಯಾಪ್ ಆಗಿರಬಹುದು. ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಅನೇಕ ನಾಯಕರು ಸಭೆಗೆ ಬಂದಿಲ್ಲ. ಇಂದು ಸಂಪುಟ ಸಭೆ ಸಹ ಇದೆ. ಬುಧವಾರ, ಗುರುವಾರ ಸಮಿತಿ ಸಭೆಗಳು ಇರುತ್ತವೆ. ಈ ವಿಚಾರವನ್ನು ನಾನು ಸಭೆ ಗಮನಕ್ಕೆ ತರುತ್ತಿದ್ದೇನೆ. ಎಲ್ಲರಿಗೂ ನೋಟಿಸ್ ಕಳಿಸಿ. ಆಗ ಯಾರೂ ಬಾರದಿದ್ದರೆ ಹೇಳಿ. ಎಲ್ಲರನ್ನೂ ಕರೆದು, ಒಂದು ದಿನಾಂಕ ನಿಗದಿಪಡಿಸಿ, ಸಭೆ ಮಾಡುವಂತೆ ಶ್ರೀಗಳಿಗೆ ಸಲಹೆ ನೀಡಿದರು.

ವೇದಿಕೆಯಲ್ಲಿ ....

- - -

(ಬಾಕ್ಸ್‌)

* ಸಂಸದನಾಗಲು ಮೀಸಲಾತಿಯೇ ಕಾರಣ: ತುಕಾರಾಂ ಬಳ್ಳಾರಿ ಕ್ಷೇತ್ರ ಸಂಸದ ತುಕಾರಾಂ ಮಾತನಾಡಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂತಾ ನಾನು ನಮ್ಮ ಸಮಾಜದ ಸಭೆಯಲ್ಲಿ ಮಾತನಾಡಿಲ್ಲ. ನಮ್ಮ ಸಮಾಜದ ಸಭೆಯಲ್ಲಿ ನಾನು ಎಂದಿಗೂ ರಾಜಕಾರಣ ಮಾತನಾಡಿಲ್ಲ. ಆದರೆ, ಇಂದು ಮಾತನಾಡಬೇಕಾದ ಪರಿಸ್ಥಿತಿ ಇದೆ. ಇದೇ ಕಾರಣಕ್ಕೆ ಮಾತನಾಡುತ್ತಿದ್ದೇನೆ. ಇಂದು ಇ.ತುಕಾರಾಂ ಸಂಸದನಾಗಲು ಡಾ.ಮನಮೋಹನ ಸಿಂಗ್‌ ಸರ್ಕಾರ ನೀಡಿದ ಮೀಸಲಾತಿ ಕಾರಣ. ಉಳುವವನೇ ಭೂಮಿ ಒಡೆಯ ಕಾರ್ಯಕ್ರಮ ನೀಡಿದ್ದು ಯಾರು? ಎಸ್‌ಸಿ- ಎಸ್‌ಟಿಗೆ ಹೆಚ್ಚಿನ ಸೌಲಭ್ಯ ನೀಡಿದ್ದು ನಮ್ಮದೇ ಕಾಂಗ್ರೆಸ್‌ ಸರ್ಕಾರ ಎಂದು ತಿಳಿಸಿದರು. ಸಭೆಯಲ್ಲಿದ್ದ ಕೆಲವರು ಇದಕ್ಕೆ ಆಕ್ಷೇಪಿಸುತ್ತಿದ್ದಂತೆ ಮಾತು ಮುಂದುವರಿಸಿದ ತುಕಾರಾಂ, ಎಸ್‌ಟಿ ಮೀಸಲಾತಿ ಶೇ.7.5ರಷ್ಟು ಹೆಚ್ಚಿಸಲು ನಮ್ಮ ಕೊಡುಗೆಯೇ ಇಲ್ಲವೇ? ನಾನು, ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಅನೇಕರು ಪ್ರಯತ್ನಪಟ್ಟಿದ್ದೇವೆ. ಮೌನದಿಂದ ಗಾಂಧೀಜಿ ಸ್ವಾತಂತ್ರ್ಯ ಪಡೆದರು. ಸಮಾಜಕ್ಕೆ ಅನ್ಯಾಯವಾದರೆ ನಾನು ಅರ್ಧ ಗಂಟೆಯೂ ರಾಜಕಾರಣದಲ್ಲಿ ಇರುವುದಿಲ್ಲ. ಸಮಾಜ ನನಗೆ ಕೊಟ್ಟಿದೆ. ನಾನು ಸಮಾಜಕ್ಕೆ ಏನಾದರೂ ಕೊಡಬೇಕು ಎಂದು ಹೇಳಿದರು. ಕೆ.ಎನ್‌.ರಾಜಣ್ಣ, ಸತೀಶಣ್ಣ, ನಾಗೇಂದ್ರ ಎಲ್ಲರೂ ಸೇರಿ, ಜೊತೆಗೇ ಇರುತ್ತೇವೆ. ನಮ್ಮ ಸಮಾಜಕ್ಕೆ ಅನ್ಯಾಯ ಆಗುವುದಕ್ಕೆ ನಾವಂತೂ ಬಿಡುವುದಿಲ್ಲ. ಜಿಲ್ಲಾವಾರು ನಕಲಿ ಪ್ರಮಾಣ ಪತ್ರ ಪಡೆದ ಬಗ್ಗೆ ದಾಖಲೆ ಸಂಗ್ರಹಿಸಿ, ಅಂಕಿ ಸಂಖ್ಯೆ ಸಮೇತ ನಾವು ಮಾತನಾಡಬೇಕಾಗುತ್ತದೆ. ತೋಳ್ಬಲವೆಲ್ಲಾ ನಡೆಯುವುದಿಲ್ಲ. ಮೀಸೆ ತಿರುಗಿಸಿಕೊಂಡವರೆಲ್ಲಾ ಮಣ್ಣಾದರು. ನಾನು ಏನಾದರೂ ತಪ್ಪು ಮಾತನಾಡಿದ್ದರೆ ಕ್ಷಮೆ ಇರಲಿ ಎಂದು ಬಳ್ಳಾರಿ ಸಂಸದ ತುಕಾರಾಂ ತಮ್ಮ ಭಾಷಣ ಮುಗಿಸಿ, ಕುರ್ಚಿಯಲ್ಲಿ ಆಸೀನರಾದರು.

- - -

-18 ಹೆಚ್.ಆರ್.ಆರ್ 05, 05ಎ 05ಬಿ: ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ರಾಜ್ಯ ಮಟ್ಟದ ಮಹತ್ವದ ಸಭೆಯಲ್ಲಿ ಭಾರಿ ಗದ್ದಲ ಗಲಾಟೆ ನಡೆಯುತ್ತಿರುವ ವಿವಿಧ ಫೋಟೋಗಳು.