ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.25 ರಿಂದ 30ರವರೆಗೆ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಹಾಗೂ ಡಾ. ಶಾಮನೂರು ಶಿವಶಂಕರಪ್ಪ ಸವಿನೆನಪಿನ ಅಂಗವಾಗಿ 19ನೇ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.
- ಶ್ರೀಮತಿ ಪಾರ್ವತಮ್ಮ, ಡಾ.ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ ಆಯೋಜನೆ: ದಿನೇಶ್ ಮಾಹಿತಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.25 ರಿಂದ 30ರವರೆಗೆ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಹಾಗೂ ಡಾ. ಶಾಮನೂರು ಶಿವಶಂಕರಪ್ಪ ಸವಿನೆನಪಿನ ಅಂಗವಾಗಿ 19ನೇ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರದಿಂದ ಆರಂಭ ಆಗಲಿರುವ ಕ್ರಿಕೆಟ್ ಪಂದ್ಯಾವಳಿಗೆ ನ.25ರ ಸಂಜೆ 6 ಗಂಟೆಗೆ ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಎಸ್ಪಿ ಎಚ್.ಟಿ.ಶೇಖರ್, ಸಚಿವ ಕೆ.ಎಸ್. ಬಸವಂತಪ್ಪ, ಶಾಸಕರಾದ ಸಮರ್ಥ್ ಶಾಮನೂರು, ಶಿವಗಂಗಾ ಬಸವರಾಜ್, ಡಿ.ಜಿ. ಶಾಂತನಗೌಡ, ದೇವೇಂದ್ರಪ್ಪ, ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಶ್ರೀನಿವಾಸ ಶಿವಗಂಗಾ, ಮಹದೇವ, ಮುಸ್ತಾಫ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಶ್ರೀಲಂಕಾ, ಮಹಾರಾಷ್ಟ್ರ, ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಒಟ್ಟು 60 ತಂಡಗಳು ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲಿವೆ. ಪಂದ್ಯಾವಳಿಯಲ್ಲಿ ಒಟ್ಟಾರೆ 950 ಆಟಗಾರರು ಪಾಲ್ಗೊಳ್ಳಲಿದ್ದು, ಎಲ್ಲರಿಗೂ ಟೀ ಶರ್ಟ್, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. 5 ದಿನಗಳ ಕ್ರಿಕೆಟ್ ಹಬ್ಬದಲ್ಲಿ ಒಟ್ಟು 108 ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ 2 ಪಿಚ್ಗಳನ್ನು ಸಿದ್ಧಪಡಿಸಲಾಗಿದೆ ಎಂದರು.ಮಹಿಳಾ ತಂಡಗಳು ಭಾಗಿ:
ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ತಂಡಗಳಿಗೆ ಆಡಲು ಅವಕಾಶ ಕಲ್ಪಿಸಲಾಗಿದೆ. ದಾವಣಗೆರೆ, ಬೆಂಗಳೂರು, ಉಡುಪಿ ಹಾಗೂ ಮಂಗಳೂರಿನ ಮಹಿಳಾ ಕ್ರಿಕೆಟ್ ತಂಡಗಳು ಮಹಿಳಾ ವಿಭಾಗದ ಟ್ರೋಫಿಗಾಗಿ ಸೆಣಸಲಿವೆ. ಮಹಿಳಾ ಕ್ರಿಕೆಟ್ ಪಂದ್ಯ ಶನಿವಾರ ನಡೆಯಲಿದೆ ಎಂದು ತಿಳಿಸಿದರು.ಡಿಪಿಎಲ್ ಮಾದರಿ ಚಿಂತನೆ:
ದಾವಣಗೆರೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಮಾದರಿಯಲ್ಲಿ ವಾಲಿಬಾಲ್, ಕಬಡ್ಡಿ, ಖೋ ಖೋ ಸೇರಿ ಇತರ ಕ್ರೀಡೆಗಳಲ್ಲೂ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಇದರಿಂದ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ದೊರೆಯಲಿದೆ ಎಂದು ದಿನೇಶ್ ಕೆ. ಶೆಟ್ಟಿ ಹೇಳಿದರು.ಟೂರ್ನಿಯಲ್ಲಿ ವಿಜೇತರಾದವರಿಗೆ ಪ್ರಥಮ ಸ್ಥಾನವಾಗಿ ₹6,00,555 ನಗದು ಮತ್ತು ಶಾಮನೂರು ಡೈಮಂಡ್ ಕಪ್, ದ್ವಿತೀಯ ಸ್ಥಾನಕ್ಕೆ ₹4,00,555 ನಗದು ಮತ್ತು ಶಿವಗಂಗಾ ಕಪ್ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ₹2,00,555 ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಎಲ್ಲ ಪಂದ್ಯಾವಳಿಗಳನ್ನು ಯೂಟ್ಯೂಬ್ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದರು.
ಅಫೀಶಿಯಲ್ ಕಪ್ನಲ್ಲಿ 16 ತಂಡ:ಈ ಬಾರಿ ಅಫೀಶಿಯಲ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ಪ್ರೆಸ್ ಕ್ಲಬ್ನ 2 ತಂಡಗಳು, ಮಹಾನಗರ ಪಾಲಿಕೆ, ಪೊಲೀಸ್ ತಂಡ, ದೂಡಾ, ಜಿಲ್ಲಾಧಿಕಾರಿ ತಂಡ, ಆರೋಗ್ಯ ತಂಡ, ಬೆಸ್ಕಾಂ ತಂಡ, ವೈದ್ಯರ ತಂಡ, ಡ್ಯಾನ್ಸರ್ ಮತ್ತು ಮರ್ಚೆಂಟ್ಸ್ ಸೇರಿ 16 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಹ ಕಾರ್ಯದರ್ಶಿ ಜಯಪ್ರಕಾಶ್ ಗೌಡ, ಕಾರ್ಯದರ್ಶಿ ಕುರುಡಿ ಗಿರೀಶ್ (ಸ್ವಾಮಿ), ಹಾಲಪ್ಪ, ಚಂದ್ರು, ಪ್ರಕಾಶ್ ಇತರರಿದ್ದರು.- - -
-23ಕೆಡಿವಿಜಿ49: ಸುದ್ದಿಗೋಷ್ಠಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆ ತಂಡಗಳ ಟೀ ಶರ್ಟ್ಗಳನ್ನು ಬಿಡುಗಡೆ ಮಾಡಲಾಯಿತು.