ಸಾರಾಂಶ
ಹಾವೇರಿ: ನಿರಂತರ ಮಳೆಯಿಂದ ಇಲ್ಲಿಯ ತಹಸೀಲ್ದಾರ್ ಕಾರ್ಯಾಲಯದಲ್ಲಿರುವ ಭೂದಾಖಲೆ ವಿಭಾಗ ಸೋರುತ್ತಿದ್ದು, ತಾಡಪಾಲ್ ಕಟ್ಟಿ ನೂರಾರು ವರ್ಷ ಹಳೆಯ ಕಂದಾಯ ದಾಖಲೆಗಳನ್ನು ಸಂರಕ್ಷಿಸಲು ಸಿಬ್ಬಂದಿ ಹೆಣಗಾಡುತ್ತಿದ್ದಾರೆ. ಗೋಡೆ, ಚಾವಣಿಯಿಂದ ಸೋರುವ ನೀರನ್ನು ಹೊರಹಾಕುವುದೇ ಸಿಬ್ಬಂದಿ ಕೆಲಸವಾಗಿದೆ.ತಹಸೀಲ್ದಾರ್ ಕಚೇರಿ ಇರುವ ಮಿನಿ ವಿಧಾನಸೌಧವೇ ಸೋರುತ್ತಿದ್ದು, ಮೊದಲ ಅಂತಸ್ತಿನಲ್ಲಿರುವ ಭೂದಾಖಲೆಗಳ ವಿಭಾಗದಲ್ಲಿ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಗೆ ಗೋಡೆ, ಆರ್‌ಸಿಸಿಯಿಂದ ನೀರು ತೊಟ್ಟಿಕ್ಕುತ್ತಿದೆ. ಮಳೆ ನೀರಿನಿಂದ ಕಂದಾಯ ದಾಖಲೆಗಳನ್ನು ರಕ್ಷಿಸಲು ತಾಡಪಾಲ್ ಕಟ್ಟಲಾಗಿದೆ. ತಾಡಪಾಲ್‌ನಿಂದ ಇಳಿಯುವ ನೀರನ್ನು ಸಂಗ್ರಹಿಸಲು ಅಲ್ಲಲ್ಲಿ ಬಕೆಟ್ ಇಡಲಾಗಿದೆ. ರಾತ್ರಿ ಇಟ್ಟು ಹೋಗುವ ಬಕೆಟ್ ಬೆಳಗ್ಗೆ ಕಚೇರಿಗೆ ಬರುವ ವೇಳೆಗೆ ತುಂಬಿ ನೀರು ಹೊರಚೆಲ್ಲಿರುತ್ತದೆ. ಆ ನೀರನ್ನು ಹೊರಹಾಕಲು ಸಿಬ್ಬಂದಿ ಸಾಹಸಪಡುತ್ತಿದ್ದಾರೆ. ಹಾವೇರಿ ನಗರ ಮತ್ತು ಗ್ರಾಮೀಣ ಭಾಗಗಳ ಲಕ್ಷಾಂತರ ಕುಟುಂಬಗಳ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಇಲ್ಲಿವೆ. ಬ್ರಿಟಿಷ್ ಕಾಲದಿಂದ ಹಿಡಿದು ಇಲ್ಲಿಯವರೆಗಿನ ಸುಮಾರು ೧೫೦ಕ್ಕೂ ಹೆಚ್ಚು ವರ್ಷಗಳ ಭೂದಾಖಲೆಗಳನ್ನು ಸಂರಕ್ಷಿಸಲಾಗಿದೆ. ಆರ್‌ಟಿಸಿ ಉತಾರ್, ಕಂದಾಯ ನಕಾಶೆ, ಪೋಡಿ, ಬರಕಾಸ್ತು ಪೋಡಿ, ಬಿನ್ ಶೇತ್ಕಿ ಹೀಗೆ ಸುಮಾರು ೨೦ಕ್ಕೂ ಹೆಚ್ಚಿನ ರೀತಿಯ ಲಕ್ಷಕ್ಕೂ ಅಧಿಕ ದಾಖಲೆಗಳು ಇಲ್ಲಿವೆ. ನಾಲ್ಕೈದು ವರ್ಷಗಳಿಂದ ಮಳೆಗಾಲದಲ್ಲಿ ನೀರು ಸೋರುತ್ತಿದೆ. ಆದರೂ ದುರಸ್ತಿ ಮಾಡದ್ದರಿಂದ ಈ ಮಳೆಗಾಲದಲ್ಲಿ ಸಮಸ್ಯೆ ಬಿಗಡಾಯಿಸಿದೆ. ಹಸಿಯಾದ ನೆಲ, ನೀರಿಳಿಯುವ ಗೋಡೆ ಮಧ್ಯೆಯಿಂದ ತೇವಗೊಂಡ ಕಚೇರಿಯಲ್ಲಿ ಇಡೀ ದಿನ ಸಿಬ್ಬಂದಿ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ನಮಗೆ ಕುಳಿತುಕೊಳ್ಳಲೂ ಜಾಗವಿಲ್ಲದಂತಾಗಿದೆ. ಕುರ್ಚಿ ಮೇಲೂ ನೀರು ಸೋರುತ್ತಿದೆ. ದಾಖಲೆಗಳು ಹಾಳಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಅದಕ್ಕಾಗಿ ಪ್ಲಾಸ್ಟಿಕ್ ಹಾಕಿ ಸಂರಕ್ಷಿಸಿದ್ದೇವೆ ಎಂದು ಕಚೇರಿಯ ಸಿಬ್ಬಂದಿಯೊಬ್ಬರು ಹೇಳಿದರು.ಸರ್ವೇ ಕಚೇರಿ ಮೇಲೆ ಶೀಟ್.....ತಹಸೀಲ್ದಾರ್ ಕಚೇರಿಯಲ್ಲಿರುವ ಸರ್ವೇ ಕಚೇರಿಯೂ ಕಳೆದ ವರ್ಷ ಸೋರುತ್ತಿತ್ತು. ಈ ವರ್ಷದ ಮಳೆಗಾಲದ ಆರಂಭದಲ್ಲಷ್ಟೇ ಸರ್ವೇ ಕಚೇರಿಯ ಮೇಲ್ಭಾಗದಲ್ಲಿ ಶೀಟ್ ಅಳವಡಿಸಿದ್ದರಿಂದ ಈ ಕಚೇರಿ ಈಗ ಸೋರುತ್ತಿಲ್ಲ, ತಹಸೀಲ್ದಾರ್ ಕಚೇರಿ ಒಳ ಹಾಗೂ ಹೊರಭಾಗದಲ್ಲಿ ಸ್ವಚ್ಛತೆಯೂ ಮರೀಚಿಕೆಯಾಗಿದೆ. ಕಚೇರಿಯ ಮುಂಭಾಗದಲ್ಲೂ ಸರಿಯಾದ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲದಂತಾಗಿದೆ. ಹೀಗಾಗಿ ತಹಸೀಲ್ದಾರ್ ಕಚೇರಿ ಅವ್ಯವಸ್ಥೆಯ ಆಗರವಾಗಿದೆ. ನಿತ್ಯ ನೂರಾರು ಜನರು ಕೆಲಸ ಕಾರ್ಯಗಳಿಗೆ ಇಲ್ಲಿಗೆ ಬರುತ್ತಾರೆ. ಆದರೆ ಒಂದು ಶೌಚಾಲಯ ಕೂಡ ಇಲ್ಲದಿರುವುದು ಇಲ್ಲಿಯ ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ತಹಸೀಲ್ದಾರ್ ಕಚೇರಿ ಸ್ಥಳಾಂತರಕ್ಕೆ ಆಗ್ರಹ: ಈಗಿರುವ ತಹಸೀಲ್ದಾರ್ ಕಚೇರಿ ಬಸ್‌ನಿಲ್ದಾಣದಿಂದ ದೂರ ಇದೆ. ಗ್ರಾಮೀಣ ಭಾಗದ ಜನತೆ ಇಲ್ಲಿಗೆ ಬಂದು-ಹೋಗಲು ಸಾಕಷ್ಟು ಸಮಸ್ಯೆ ಆಗುತ್ತಿದೆ. ಅಲ್ಲದೇ ಈ ಕಚೇರಿಯೂ ಸೋರುತ್ತಿದೆ. ಇದರಿಂದ ಇಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲು, ದಾಖಲೆಗಳನ್ನು ಸಂರಕ್ಷಿಸಿಡಲು ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾರಣ ತಹಸೀಲ್ದಾರ್ ಕಚೇರಿಯನ್ನು ಗಾಂಧಿ ವೃತ್ತದಲ್ಲಿರುವ ಹಳೆ ಎಸ್ಪಿ ಕಚೇರಿಗೆ ಸ್ಥಳಾಂತರಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಕೂಡಲೇ ಸ್ಥಳಾಂತರಕ್ಕೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ. ಕಳಪೆ ಕಾಮಗಾರಿ ಆರೋಪ: ೧೫-೧೬ ವರ್ಷಗಳ ಹಿಂದೆ ನಿರ್ಮಿಸಿದ ತಹಸೀಲ್ದಾರ್ ಕಚೇರಿ ಇಷ್ಟು ಬೇಗ ಶಿಥಿಲಗೊಂಡಿರುವುದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಬ್ರಿಟಿಷರ ಕಾಲದ ಅನೇಕ ಕಟ್ಟಡಗಳು ಇನ್ನೂ ಸದೃಢವಾಗಿದ್ದರೂ ಇತ್ತೀಚೆಗೆ ಕಟ್ಟಿದ ಸರ್ಕಾರಿ ಕಟ್ಟಡಗಳು ಹಾಳಾಗುತ್ತಿವೆ. ತಹಸೀಲ್ದಾರ್ ಕಚೇರಿ ಶಿಥಿಲಗೊಂಡಿದ್ದು, ಆದಷ್ಟು ಬೇಗ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಕಂದಾಯ ಇಲಾಖೆಯಲ್ಲಿನ ದಾಖಲೆಗಳು ಹಾಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಈ ತಹಸೀಲ್ದಾರ್ ಕಚೇರಿಯನ್ನು ಗಾಂಧಿ ವೃತ್ತದಲ್ಲಿರುವ ಹಳೆ ಎಸ್ಪಿ ಕಚೇರಿಗೆ ಸ್ಥಳಾಂತರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹುಬ್ಬಳ್ಳಿ ಆಗ್ರಹಿಸಿದ್ದಾರೆ.ತಹಸೀಲ್ದಾರ್ ಕಾರ್ಯಾಲಯದ ಮೇಲ್ಭಾಗದಲ್ಲಿರುವ ನಗರ ಭೂದಾಖಲೆ ವಿಭಾಗದಲ್ಲಿ ಮಳೆ ನೀರು ಸೋರುತ್ತಿದೆ. ದಾಖಲೆಗಳು ಹಾಳಾಗದಂತೆ ನೋಸಿಕೊಳ್ಳಲು ಸರ್ವೇ ಕಚೇರಿ ಮೇಲೆ ತಗಡಿನ ಶೀಟ್ ಅಳವಡಿಸಲಾಗಿದೆ. ನಗರ ಭೂದಾಖಲೆ ವಿಭಾಗದ ಕೊಠಡಿ ಮೇಲೂ ಸೀಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಶಂಕರ ಜಿ.ಎಸ್.ಹೇಳಿದರು.