ನ್ಯೂ ಶಮ್ಸ್ ಶಾಲೆಯಲ್ಲಿ ಹಿಫ್ಜ್-ಕುರಾನ್ ಸಮಾರಂಭ

ಕನ್ನಡಪ್ರಭ ವಾರ್ತೆ ಭಟ್ಕಳ

ಆಧುನಿಕ ಶಿಕ್ಷಣದ ಜತೆಗೆ ಹಿಫ್ಜ್-ಎ-ಕುರ್‌ಆನ್ (ಕುರಾನ್ ಕಂಠಪಾಠ) ವಿಭಾಗವನ್ನು ಆರಂಭಿಸಿ ಕೇವಲ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಕುರಾನ್ ಕಂಠಪಾಠ ಪೂರ್ಣಗೊಳಿಸುವ ಅವಕಾಶ ಕಲ್ಪಿಸಿರುವುದು ಮಹತ್ತರ ಸಾಧನೆಯಾಗಿದ್ದು, ಈ ಕಾರ್ಯವನ್ನು ಇನ್ನಷ್ಟು ವ್ಯವಸ್ಥಿತವಾಗಿ ಬೆಳೆಸುವ ಅಗತ್ಯವಿದೆ ಎಂದು ಜಾಮಿಯಾ ಇಸ್ಲಾಮಿಯಾ ಭಟ್ಕಳದ ಉಪನ್ಯಾಸಕ ಮೌಲಾನಾ ಇಕ್ಬಾಲ್ ನಾಯ್ತೆ ನದ್ವಿ ಹೇಳಿದರು.

ನಗರದ ನ್ಯೂ ಶಮ್ಸ್ ಶಾಲೆಯ ಡಾ. ಎಂ.ಟಿ. ಹಸನ್ ಬಾಪಾ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಫ್ಜ್-ಎ-ಕುರಾನ್ ಸಮಾರೋಪ ಸಮಾರಂಭದಲ್ಲಿ ಕುರಾನ್ ಕಂಠಪಾಠ ಪೂರ್ಣಗೊಳಿಸಿದ ವಿದ್ಯಾರ್ಥಿ ಅಬ್ದುಲ್ ಮಾಜೀದ್ ಗೆ ಕುರಾನ್ ಸೋಕ್ತಗಳನ್ನು ಬೋಧಿಸಿ ಅವರು ಮಾತನಾಡಿದರು.

ಕುರಾನ್ ಕಂಠಪಾಠ ಮಾಡುವುದು ಸುನ್ನತ್ ಆಗಿದ್ದರೆ, ಅದರ ಅರ್ಥವನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆ. ಆಧುನಿಕ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಕುರಾನ್ ಅರ್ಥ ಮತ್ತು ಸಂದೇಶವನ್ನು ಅರ್ಥೈಸಿಕೊಳ್ಳುವಂತೆ ಪಠ್ಯಕ್ರಮ ರೂಪುಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.


ಈ ಸಂದರ್ಭ ಅವರು ಖತ್ಮುಲ್ ಕುರಾನ್ ನೆರವೇರಿಸಿ, ಹಿಫ್ಜ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಮೌಲ್ವಿ ಅಹ್ಮದ್ ಫುರ್ಕಾನ್ ರುಕ್ನುದ್ದೀನ್ ಅವರ ಮಾರ್ಗದರ್ಶನದಲ್ಲಿ ಹಿಫ್ಜ್ ಪೂರ್ಣಗೊಳಿಸಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಜೀರ್ ಅಹ್ಮದ್ ಖಾಝಿ ಮಾತನಾಡಿ, ಕುರಾನ್ ಕೇವಲ ಆಶೀರ್ವಾದದ ಮತ್ತು ಪುಣ್ಯ ಗಳಿಸಿಕೊಡುವ ಗ್ರಂಥವಲ್ಲ; ಅದು ಮಾನವ ಬದುಕಿಗೆ ದಿಕ್ಕು ತೋರುವ ಹಾಗೂ ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ತರಬಲ್ಲ ಜೀವನ ಮಾರ್ಗದರ್ಶಕ ಗ್ರಂಥವಾಗಿದೆ ಎಂದರು. ಹಾಫಿಜ್ ಅಬ್ದುಲ್ ಮಜೀದ್ ಅವರ ತಾಯಿ ಪುತ್ರನು ಹಾಫಿಜ್-ಎ-ಕುರಾನ್ ಆಗಿರುವ ಕುರಿತು ಸಂತಸ ವ್ಯಕ್ತಪಡಿಸಿದರು.

ಜಿಯಾ ಉರ್ ರಹ್ಮಾನ್ ರುಕ್ನುದ್ದೀನ್ ಸ್ವಾಗತಿಸಿದರು. ಅಬ್ದುಲ್ಲಾ ರಬಿ ಖಲೀಫಾ ನದ್ವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಮೌಲಾನಾ ಸಯ್ಯದ್ ಕುತುಬ್ ಬರ್ಮಾವರ್ ನದ್ವಿ, ಅಲ್‌ಕೌಸರ್ ಗರ್ಲ್ಸ್ ಕಾಲೇಜಿನ ಅಧ್ಯಕ್ಷ ಸಯ್ಯದ್ ಶಕೀಲ್ ಎಸ್.ಎಂ., ದಾವತ್ ಸೆಂಟರ್ ಅಧ್ಯಕ್ಷ ಸಯ್ಯದ್ ಸಲಾಹುದ್ದೀನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪಾಲಕರು, ಅತಿಥಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

------

13ಬಿಕೆಲ್4: ಭಟ್ಕಳದ ಹೆಬಳೆಯ ನ್ಯೂ ಶಮ್ಸ್‌ ಶಾಲೆಯಲ್ಲಿ ಹಿಫ್ಜ್-ಎ-ಕುರಾನ್ ಸಮಾರಂಭದಲ್ಲಿ ಕುರಾನ್ ಕಂಠಪಾಠ ಪೂರ್ಣಗೊಳಿಸಿದ ವಿದ್ಯಾರ್ಥಿ ಅಬ್ದುಲ್ ಮಾಜೀದ್‌ಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು.