ತಾಲೂಕಿನ ಹಂಡ್ಲಿ ಕ್ಲಸ್ಟರ್‌ನ ೨೦೨೫–೨೬ನೇ ಶೈಕ್ಷಣಿಕ ಸಾಲಿನ ಎಫ್‌ಎಲ್‌ಎನ್ ಕಲಿಕಾ ಹಬ್ಬ ಹಾರೆ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆಯಿತು.

ಸೋಮವಾರಪೇಟೆ: ತಾಲೂಕಿನ ಹಂಡ್ಲಿ ಕ್ಲಸ್ಟರ್‌ನ ೨೦೨೫–೨೬ನೇ ಶೈಕ್ಷಣಿಕ ಸಾಲಿನ ಎಫ್‌ಎಲ್‌ಎನ್ ಕಲಿಕಾ ಹಬ್ಬ ಹಾರೆ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆಯಿತು. ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಶೋಕ್ ಅವರು ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳನ್ನು ಹಬ್ಬದ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳ ಕಲಿಕೆಯನ್ನು ಆನಂದಕರವಾಗಿಸುವ ಇಂತಹ ಪ್ರಯತ್ನಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಆಸಕ್ತಿ ಹೆಚ್ಚಿಸುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸೌಮ್ಯ ಅವರು ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಬಣ್ಣಬಣ್ಣದ ಟೋಪಿಗಳು, ಕಾಗದದಿಂದ ತಯಾರಿಸಿದ ಕ್ರಾಫ್ಟ್ಗಳು ಸೇರಿದಂತೆ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಪ್ರದರ್ಶಿಸುವ ಹಲವು ಪ್ರದರ್ಶನಗಳು ಗಮನ ಸೆಳೆದವು. ಅಂದದ ಬರವಣಿಗೆ, ಗಟ್ಟಿ ಓದು, ಜ್ಞಾಪಕ ಪರೀಕ್ಷೆ, ಕಥೆ ಹೇಳುವುದು, ವಿನೋದ ಗಣಿತ, ಪೋಷಕ ವಿದ್ಯಾರ್ಥಿಗಳ ಸಹಸಂಬಂಧದ ವಿವಿಧ ಸ್ಪರ್ಧೆಗಳನ್ನು ಕ್ಲಸ್ಟರ್‌ನ ಎಲ್ಲ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಹಬ್ಬದ ವಾತಾವರಣದಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕಾರ್ತಿಕ್ ಯಶೋಧ ಪುಟ್ಟಸ್ವಾಮಿ ರೋಹಿಣಿ, ಹಂಡ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗಿರೀಶ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಚೈತ್ರ, ಪ್ರೇಮ, ಶಾಲಾ ಮುಖ್ಯೋಪಾಧ್ಯಾಯರಾದ ಕವಿತಾ, ಕ್ಲಸ್ಟರ್‌ನ ಎಲ್ಲ ಶಾಲಾ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು ಹಾಜರಿದ್ದರು