ಸಾರಾಂಶ
ಧಾರವಾಡ: ಸಂಗೀತ ಬಹಳ ಕಠಿಣ ವಿದ್ಯೆ, ಅದನ್ನು ಕರಗತ ಮಾಡಿಕೊಳ್ಳಲು ಶ್ರದ್ಧೆ ಮತ್ತು ಪರಿಶ್ರಮ ಅಗತ್ಯ ಎಂದು ಹಿರಿಯ ವಯೋಲಿನ್ ವಾದಕ ಪಂ. ಬಿ.ಎಸ್. ಮಠ ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಶಾರದಾ ಸಂಗೀತ ವಿದ್ಯಾಲಯದ ವತಿಯಿಂದ ಪಂ. ಶಂಕರ ಕಬಾಡಿ ಅವರ ಷಷ್ಟಬ್ದಿ ಮಹೋತ್ಸವ ಮತ್ತು ಗುರುವಂದನೆ ಉದ್ಘಾಟಿಸಿ ಮಾತನಾಡಿದರು.ಬಿ.ಎಸ್. ಮಠ ಗುರು ಮುಖೇನ ಒದಗುವ ಶಿಕ್ಷಣ, ಭಾರತೀಯ ಪರಂಪರೆಯ ಬಹುಮುಖ್ಯವಾದ ಶಿಕ್ಷಣವಾಗಿದೆ. ಆದರೆ, ಬದಲಾದ ಸಂದರ್ಭದಲ್ಲಿ ಗುರು-ಶಿಷ್ಯ ಬಾಂಧವ್ಯ ತನ್ನ ಮಹತ್ವ ಕಳೆದುಕೊಳ್ಳುತ್ತಿರುವುದು ವಿಷಾಧನೀಯ ಎಂದರು.
ಸಂಗೀತ ಕ್ಷೇತ್ರದಲ್ಲಿ ಧಾರವಾಡಕ್ಕೊಂದು ಅಸ್ಮಿತೆ ಇದೆ. ಅನೇಕ ಸಂಗೀತಗಾರರು ತಮ್ಮ ಸಾಧನೆಯ ಮೂಲಕ ಈ ನೆಲಕ್ಕೊಂದು ಘನತೆ ತಂದುಕೊಟ್ಟಿದ್ದಾರೆ. ಅದನ್ನು ಉಳಿಸಿ, ಬೆಳೆಸಿ ಮುಂದುವರೆಸಿಕೊಂಡು ಹೋಗುವ ಬಹುದೊಡ್ಡ ಹೊಣೆಗಾರಿಕೆ ಯುವಪೀಳಿಗೆ ಮೇಲಿದೆ ಎಂದರು.ಹಿರಿಯ ತಬಲಾ ವಾದಕ ಪಂ. ರಘುನಾಥ ನಾಕೋಡ ಮಾತನಾಡಿ, ಇಂದಿನ ಯುವಕರಲ್ಲಿ ರಾತ್ರೋರಾತ್ರಿ ಪ್ರಸಿದ್ಧರಾಗುವ ತವಕ ಹೆಚ್ಚುತ್ತಿದೆ. ಪ್ರಸಿದ್ಧಿಯ ಬೆನ್ನುಬೀಳಬೇಡಿ, ಸಿದ್ದಿಯ ದಾರಿಯಲ್ಲಿ ಗಟ್ಟಿ ಹೆಜ್ಜೆಗಳನ್ನಿಟ್ಟರೆ, ಪ್ರಸಿದ್ದಿ ತಾನಾಗಿಯೇ ಬರುತ್ತದೆ ಎಂದರು.
ಹಿರಿಯ ವಯೋಲಿನ್ ವಾದಕ ಪಂ. ವಾದಿರಾಜ ನಿಂಬರಗಿ ಮಾತನಾಡಿ, ಧಾರವಾಡದ ಸಂಗೀತ ಕ್ಷೇತ್ರಕ್ಕೆ ಕಬಾಡಿ ಕುಟುಂಬದ ಕೊಡುಗೆ ದೊಡ್ಡದು, ಶಂಕರ ಕಬಾಡಿ ಅವರು ಅನೇಕ ಶಿಷ್ಯರಿಗೆ ವಯೋಲಿನ್ ಶಿಕ್ಷಣ ನೀಡಿ ಪರಂಪರೆಯ ಮುಂದುವರಿಕೆಗೆ ಕಾರಣರಾಗಿದ್ದಾರೆ ಎಂದು ಬಣ್ಣಿಸಿದರು.ನಂತರ ಶಂಕರ ಕಬಾಡಿಯವರ ಶಿಷ್ಯ ವೃಂದದಿಂದ ಸ್ವರ ಝೇಂಕಾರ ವಯೋಲಿನ್ ನಾದ ನಮನ ಕಾರ್ಯಕ್ರಮದಲ್ಲಿ ಮಲ್ಲೇಶ ಹೂಗಾರ, ಭಾಗ್ಯಶ್ರೀ ಹೂಗಾರ, ರಘುನಂದನ, ಸಿಂಚನಾ ದಾನಗೇರಿ ವಿವಿಧ ರಾಗಗಳನ್ನು ಪ್ರಸ್ತುತ ಪಡಿಸಿದರು. ನಂತರ ಪಂ. ಶಂಕರ ಕಬಾಡಿ ಹಾಗೂ ಡಾ. ನಾರಾಯಣ ಹಿರೇಕೊಳಚಿ ವಯೋಲಿನ್ ವಾದನಕ್ಕೆ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಡಾ. ರವಿಕಿರಣ ನಾಕೋಡ ತಬಲಾ ಸಾಥ್ ಸಂಗತ ನೀಡಿದರು.
ಇದೇ ಸಂದರ್ಭದಲ್ಲಿ ಪಂ. ಶಂಕರ ಕಬಾಡಿ ಮತ್ತು ನೀತುಶ್ರೀ ಶಂಕರ ಕಬಾಡಿ ದಂಪತಿಗಳನ್ನು ಸನ್ಮಾನಿಸಲಾಯಿತು. ರವಿ ಕುಲಕರ್ಣಿ ನಿರೂಪಿಸಿದರು. ಸೋಮಣ್ಣ ಪ್ರಾರ್ಥಿಸಿದರು. ಧನಂಜಯ ದಾನಗೇರಿ ಸ್ವಾಗತಿಸಿದರು. ಮಳೆಮಲ್ಲೇಶ ಹೂಗಾರ ವಂದಿಸಿದರು. ಡಾ. ಎಚ್.ಎ. ಕಟ್ಟಿ, ಮಲ್ಲಿಕಾರ್ಜುನ ಚಿಕ್ಕಮಠ, ವಿದುಷಿ ರೇಣುಕಾ ನಾಕೋಡ, ಸದಾಶಿವ ಐಹೊಳೆ, ಡಾ. ಗುರುಬಸವ ಮಹಾಮನೆ, ಬಸವರಾಜ ಹೂಗಾರ ಇದ್ದರು.