ಲೆದರ್ ಬಾಲ್ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ : ಕೂರ್ಗ್ ಬ್ಲಾಸ್ಟರ್ಸ್ ಚಾಂಪಿಯನ್

| Published : May 13 2024, 12:05 AM IST

ಲೆದರ್ ಬಾಲ್ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ : ಕೂರ್ಗ್ ಬ್ಲಾಸ್ಟರ್ಸ್ ಚಾಂಪಿಯನ್
Share this Article
  • FB
  • TW
  • Linkdin
  • Email

ಸಾರಾಂಶ

ಕೂರ್ಗ್‌ ಬ್ಲಾಸ್ಟರ್ಸ್‌ ತಂಡ 28 ರನ್‌ಗಳ ಜಯ ಸಾಧಿಸಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ. ಕೂರ್ಗ್ ಯುನೈಟೆಡ್‌ ತಂಡ ದ್ವಿತೀಯ ಸ್ಥಾನ ಪಡೆದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಲೆದರ್ ಬಾಲ್ ‘ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್’ ಅಂತಿಮ ಪಂದ್ಯಾಟದಲ್ಲಿ ಕೂರ್ಗ್ ಬ್ಲಾಸ್ಟರ್ಸ್ ತಂಡ 28 ರನ್‌ಗಳ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಕೂರ್ಗ್ ಯುನೈಟೆಡ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಟಾಸ್ ಗೆದ್ದ ಕೂರ್ಗ್ ಯುನೈಟೆಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ಬ್ಲಾಸ್ಟರ್ಸ್ ತಂಡ 10 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 117 ರನ್ ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಯುನೈಟೆಡ್ ತಂಡ 10 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 89 ರನ್ ಗಳನ್ನು ಗಳಿಸಿ ಸೋಲು ಒಪ್ಪಿಕೊಂಡಿತು.

ಕೂರ್ಗ್ ಬ್ಲಾಸ್ಟರ್ಸ್ ತಂಡದ ಆಟಗಾರ ಸಿ.ಎ.ಕಾರ್ತಿಕ್ 35 ಬಾಲ್ ಗಳಲ್ಲಿ 95 ರನ್ ಗಳನ್ನು ಸಿಡಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಚಾಂಪಿಯನ್ ತಂಡ ಕೂರ್ಗ್ ಬ್ಲಾಸ್ಟರ್ಸ್ ಗೆ 1.50 ಲಕ್ಷ ರು. ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಕೂರ್ಗ್ ಯುನೈಟೆಡ್ ತಂಡಕ್ಕೆ 75 ಸಾವಿರ ರು. ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು.

ಕೂರ್ಗ್ ಯುನೈಟೆಡ್ ತಂಡದ ಚೋನೀರ ಆರ್. ಅಯ್ಯಪ್ಪ 315 ರನ್, 6 ವಿಕೆಟ್ ಸಾಧನೆಯೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಉತ್ತಮ ಬ್ಯಾಟರ್ ಪ್ರಶಸ್ತಿಗೂ ಭಾಜನರಾದರು. ಕೂರ್ಗ್ ಬ್ಲಾಸ್ಟರ್ಸ್ ತಂಡದ ಕೋದಂಡ ಎ.ಕಾರ್ತಿಕ್ ಅಂತಿಮ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು. ರಾಯಲ್ ಟೈಗರ್ಸ್ ಆಟಗಾರ ಧ್ಯಾನ್ ಅಯ್ಯಪ್ಪ ಭವಿಷ್ಯದ ಆಟಗಾರ, 8 ವಿಕೆಟ್ ಸಾಧನೆಯೊಂದಿಗೆ ಕೊಡವ ವಾರಿಯರ್ಸ್‌ ತಂಡದ ಪಿ. ಟಿ. ಪೂವಯ್ಯ ಉತ್ತಮ ಬೌಲರ್, ಕೂರ್ಗ್ ಬ್ಲಾಸ್ಟರ್ಸ್ ತಂಡದ ಎಂ.ಎ.ತಿಮ್ಮಯ್ಯ ಉತ್ತಮ ವಿಕೆಟ್ ಕೀಪರ್, ಎಂಟಿಬಿ ತಂಡದ ಶ್ರಿಪ್ರೆಜ್ ಸೋಮಣ್ಣ ಬೆಸ್ಟ್ ಕ್ಯಾಚ್, ವೈಲ್ಡ್ ಫ್ಲವರ್ ತಂಡ ಶಿಸ್ತಿನ ತಂಡ ಪ್ರಶಸ್ತಿ ಪಡೆದುಕೊಂಡಿತು.

ಸಾಮರಸ್ಯ ಬೆಳೆಸಲು ಕರೆ : ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಅಂತಿಮ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕ್ರೀಡಾಕೂಟಗಳಲ್ಲಿ ಕಾಣುವ ಸಾಮರಸ್ಯ ಸಮಾಜದಲ್ಲೂ ಕಾಣಬೇಕು, ಸಾಮರಸ್ಯವನ್ನು ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಕೊಡಗು ಜಿಲ್ಲೆಯಲ್ಲಿ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹದಾಯಕವಾಗಿ ಹೆಚ್ಚು ಹೆಚ್ಚು ಕ್ರೀಡಾಕೂಟಗಳು ನಡೆಯುತ್ತಿರುವುದು ಶ್ಲಾಘನೀಯವೆಂದ ಶಾಸಕರು ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಬಹುಮಾನ ವಿತರಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಪ್ರೋತ್ಸಾಹ ಅಗತ್ಯ ಎಂದರು.

ತಾವು ಕೂಡ ಒಳ್ಳೆಯ ಕ್ರಿಕೆಟ್ ಆಟಗಾರನಾಗಿದ್ದು, ಲೆದರ್ ಬಾಲ್ ಪಂದ್ಯವನ್ನು ಹೆಚ್ಚು ಇಷ್ಟ ಪಡುತ್ತಿದೆ. ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉತ್ತೇಜಿಸುತ್ತಿರುವ ಕೂರ್ಗ್ ಕ್ರಿಕೆಟ್ ಫೌಂಡೇಷನ್ ನ ಪ್ರಯತ್ನ ಶ್ಲಾಘನೀಯ. ನಾನು ವೈಯುಕ್ತಿವಾಗಿ ಮತ್ತು ಸರ್ಕಾರದಿಂದಲೂ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ ಶಾಸಕರು, ಕೊಡಗಿನ ಯುವ ಕ್ರಿಕೆಟ್ ಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಲೆದರ್ ಬಾಲ್ ಕ್ರಿಕೆಟ್ ನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬೆಳೆಗಾರರಾದ ಮಂಡೇಪಂಡ ರತನ್ ಕುಟ್ಟಯ್ಯ, ರಿಪಬ್ಲಿಕ್ ಟಿವಿ ಮುಖ್ಯಸ್ಥ ಚೇರಂಡ ಕಿಶನ್ ಮಾದಪ್ಪ, ಕೂರ್ಗ್ ಕ್ರಿಕೆಟ್ ಫೌಂಡೇಷನ್ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಮುಖ್ಯ ಸಂಚಾಲಕ ಪೊರುಕೊಂಡ ಸುನಿಲ್, ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ, ನಿರ್ದೇಶಕರಾದ ಚಂಡಿರ ರಚನ್ ಚಿಣ್ಣಪ್ಪ, ಪುಲ್ಲೇಟಿರ ಶಾಂತಾ ಕಾಳಪ್ಪ, ಮಡ್ಲಂಡ ದರ್ಶನ್ ಪೆಮ್ಮಯ್ಯ, ಚೆರುಮಂದಂಡ ಡಾ.ಸೋಮಣ್ಣ, ಟಿ.ಬಿ.ಕಿರಣ್, ಬಲ್ಲಂಡ ರೇಣಾ ದೇವಪ್ಪ, ಮಣ್ಣವಟ್ಟಿರ ಲಿಖಿತಾ ರಾಯ್, ಉದ್ಯಮಿ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ನಾಪೋಕ್ಲು ಗ್ರಾ.ಪಂ. ಮಾಜಿ ಅಧ್ಯಕ್ಷ ಇಸ್ಮಾಯಿಲ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.