ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯಪಾಲರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಹಾದಿ ಬೀದಿಯಲ್ಲಿ ನಿಂತು ಏಕವಚನದಲ್ಲಿ ಮಾತನಾಡುವುದನ್ನು ಬಿಟ್ಟು ಮಳವಳ್ಳಿ ತಾಲೂಕಿನ ರೈತರು ಬೆಳೆ ಬೆಳೆಯಲು ನೀರನ್ನು ಒದಗಿಸಿ ತಾಲೂಕಿನ ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಮಾಜಿ ಶಾಸಕ ಅನ್ನದಾನಿ ಸಲಹೆ ನೀಡಿದರು.ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗಿ ನೂರಾರು ಟಿಎಂಸಿ ನೀರು ತಮಿಳುನಾಡಿಗೆ ಹರಿದು ಮೆಟ್ಟೂರು ಜಲಾಶಯವೂ ತುಂಬಿ ಹೆಚ್ಚುವರಿ ನೀರು ಸಮುದ್ರ ಸೇರುತ್ತಿದೆ. ಆದರೆ, ಮಳವಳ್ಳಿ ತಾಲೂಕಿನಲ್ಲಿರುವ ನೂರಾರು ಕೆರೆಗಳಿಗೆ ನೀರೇ ತಲುಪಿಲ್ಲ. ಈ ಭಾಗದ ರೈತರು ಎರಡು ವರ್ಷದಿಂದ ಬೆಳೆ ಬೆಳೆದಿಲ್ಲ. ಈ ಅಣೆಕಟ್ಟು ಭರ್ತಿಯಾಗಿರುವ ಹೊತ್ತಿನಲ್ಲೂ ರೈತರಿಗೆ ನೀರು ಕೊಡಿಸುವ ಜವಾಬ್ದಾರಿಯನ್ನು ಮರೆತು ಸಂವಿಧಾನ ರಕ್ಷಣೆಯ ಹೊಣೆ ಹೊತ್ತವರಿಗೆ ನಿಂದಿಸುತ್ತಿರುವ ಶಾಸಕರಿಗೆ ಕಿಂಚಿತ್ತಾದರೂ ಗೌರವ ಇದೆಯೇ ಎಂದು ಸುದ್ದಿಗೋಷ್ಠಿಯಲ್ಲಿ ಖಾರವಾಗಿ ಪ್ರಶ್ನಿಸಿದರು.
ಯಾರನ್ನೋ ಮೆಚ್ಚಿಸುವ ಉದ್ದೇಶದಿಂದ ಸಂವಿಧಾನದ ರಕ್ಷಣೆಗೆ ನಿಂತಿರುವ ರಾಜ್ಯಪಾಲರ ಬಗ್ಗೆ ಬೀದಿಯಲ್ಲಿ ನಿಂತು ಏಕವಚನದಲ್ಲಿ ಸಂಭೋಧಿಸುವ ನಿಮಗೆ ನಾಚಿಕೆಯಾಗುವುದಿಲ್ಲವೇ, ಪರಿಶಿಷ್ಟ ಜಾತಿಗೆ ಸೇರಿರುವ ರಾಜ್ಯಪಾಲರನ್ನು ಅಗೌರವವಾಗಿ ನಿಂದಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಮತ್ತೊಮ್ಮೆ ಪ್ರಶ್ನಿಸಿದರು.ರಾಜ್ಯಪಾಲರ ಬಗ್ಗೆ ಅತ್ಯಂತ ನೀಚ ಪದಗಳನ್ನು ಬಳಸಿರುವ ಶಾಸಕರ ಹಿಂದಿನ ಇತಿಹಾಸವನ್ನು ಒಮ್ಮೆ ತಿರುಗಿ ನೋಡುವಂತೆ ಸಲಹೆ ನೀಡಿರುವ ಅವರು, ನಿಮ್ಮ ರಾಜಕಾರಣದ ಹಾದಿಯಲ್ಲಿ ಬಿಕರಿಯಾದ ಸರಕಾಗಿ, ಅನರ್ಹ ಶಾಸಕರಾಗಿ ಇಡೀ ಮಳವಳ್ಳಿ ಕ್ಷೇತ್ರದ ಮತದಾರರಿಗೆ ಅಪಮಾನವೆಸಗಿರುವುದನ್ನು ಮರೆತಿದ್ದಾರೆ. ಮುಡಾ ಹಗರಣದ ಆರೋಪ ಹೊತ್ತಿರುವ ಸ್ವಯಂ ಮುಖ್ಯಮಂತ್ರಿಯವರೇ ರಾಜ್ಯಪಾಲರನ್ನು ಅವಹೇಳನಕಾರಿಯಾಗಿ ನಿಂದಿಸಿರುವುದಿಲ್ಲ. ಅಂತಹದರಲ್ಲಿ ಶಾಸಕನಾಗಿರುವ ನೀವು ಶಾಸಕ ಸ್ಥಾನಕ್ಕೆ ಯೋಗ್ಯರೇ ಎಂದಿರುವ ಅವರು, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಲಘು ಪದ ಬಳಕೆ ಮಾಡಿದ್ದೀರಿ. ನೀವು ಶಾಸಕರಾಗಿ ಅನರ್ಹರಾದ ಸಮಯದಲ್ಲಿ ಕುಮಾರಸ್ವಾಮಿ ಅವರ ಬಳಿ ಬಂದು ಕೈಕಟ್ಟಿ ನಿಂತಿದ್ದರು. ಅಂದು ನಿಮ್ಮ ರಕ್ಷಣೆಗೆ ನಿಂತು ಕಾಪಾಡಿದವರನ್ನು ಈಗ ಏಕವಚನದಲ್ಲಿ ನಿಂದಿಸುತ್ತಿರುವ ನಿಮಗೆ ಕೃತಜ್ಞತೆಯೇ ಇಲ್ಲ ಎಂದು ಟೀಕಿಸಿದರು.ಮಳವಳ್ಳಿ ತಾಲೂಕಿನಲ್ಲಿ ದೊಡ್ಡ ಕ್ರಾಂತಿಯನ್ನೇ ನಿರ್ಮಿಸಿದ್ದೇನೆ ಎಂದು ಬಡಾಯಿಕೊಚ್ಚುವ ನಿಮ್ಮ ಕನಸಿನ ಕೂಸು ಪೂರಿಗಾಲಿ ಹನಿನೀರಾವರಿ ಯೋಜನೆ ನೀರಿನಲ್ಲಿ ಕೊಚ್ಚಿ ಹೋಗಿ ಸರ್ಕಾರದ ನೂರಾರು ಕೋಟಿ ರು. ನೀರು ಪಾಲಾಗಿದೆ. ಕೆಆರ್‌ಎಸ್‌ನ ಕಾವೇರಿ ಜಲಾನಯನ ಪ್ರದೇಶನದ ಕೊನೆ ಭಾಗದಲ್ಲಿರುವ ಮಳವಳ್ಳಿ ಕ್ಷೇತ್ರದ ರೈತರ ಬದುಕು ಬರಡಾಗಿದೆ ಎಂದು ಕಿಡಿಕಾರಿದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಳವಳ್ಳಿ ಕ್ಷೇತ್ರಕ್ಕೆ ಏನೆಲ್ಲಾ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ನೀವು ಶಾಸಕನಾಗಿ, ಸಚಿವನಾಗಿ ಏನೆಲ್ಲಾ ಮಾಡಿದ್ದೀರಿ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಪಂಥಾಹ್ವಾನ ನೀಡಿದರು.ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಹಣ ದುರ್ಬಳಕೆಯಾಗಿದ್ದರೂ ಸಹ ಸ್ವತಃ ಎಸ್ಸಿ, ಎಸ್ಟಿ ಆಯೋಗದ ಅಧ್ಯಕ್ಷರಾಗಿರುವ ನೀವು ಒಂದೇ ಒಂದು ಮಾತನ್ನೂ ಆಡಿಲ್ಲ. ಇನ್ನು ನಿಮ್ಮಿಂದ ದಲಿತರ ಉದ್ಧಾರವಾದರೂ ಹೇಗೆ ಸಾಧ್ಯ. ನೀವು ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರ ಜಂತಕಲ್ ಮೈನಿಂಗ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿದ್ದ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಇದುವರೆಗೂ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿಲ್ಲ. ಏಕೆಂದರೆ, ವರದಿ ಸಲ್ಲಿಸುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಎಲ್ಲಾ ಸುಳ್ಳು ಆರೋಪಗಳು. ಕುಮಾರಸ್ವಾಮಿ ಅವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಬಳಿ ಯಾವುದೂ ಬಾಕಿ ಇಲ್ಲ ಎಂದು ಸ್ಪಷ್ಟಪಡಿಸಿದರು.ಮುಖಂಡರಾದ ಕಂಸಾಗರ ರವಿ, ಡಿ.ಜಯರಾಂ, ಪುಟ್ಟಬುದ್ಧಿ, ಕಾಂತರಾಜು, ಸಾತನೂರು ಜಯರಾಂ, ಸದಾನಂದ್, ಸಿದ್ದಾಚಾರಿ, ಪ್ರಕಾಶ್ ಇತರರು ಗೋಷ್ಠಿಯಲ್ಲಿದ್ದರು.