ಡಿಜೆ ಸಂಸ್ಕೃತಿ ಬಿಟ್ಟು ಜಾನಪದ ಕಲೆಗಳಿಗೆ ಪ್ರೋತ್ಸಾಹಿಸಿ-ಗಿರೀಶ

| Published : Sep 02 2024, 02:07 AM IST

ಡಿಜೆ ಸಂಸ್ಕೃತಿ ಬಿಟ್ಟು ಜಾನಪದ ಕಲೆಗಳಿಗೆ ಪ್ರೋತ್ಸಾಹಿಸಿ-ಗಿರೀಶ
Share this Article
  • FB
  • TW
  • Linkdin
  • Email

ಸಾರಾಂಶ

ಹಬ್ಬ ಹರಿದಿನಗಳು ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿ ಕೊಡುವಂತಿರಬೇಕು, ಆ ನಿಟ್ಟಿನಲ್ಲಿ ಈ ವರ್ಷದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಇಲಾಖೆಯ ನಿಯಮದಂತೆ ವಿಜೃಂಭಣೆಯಿಂದ ಆಚರಿಸಿ ಎಂದು ಡಿವೈಎಸ್‌ಪಿ ಗಿರೀಶ ಬೋಜಣ್ಣನವರ ಮನವಿ ಮಾಡಿದರು.

ರಟ್ಟೀಹಳ್ಳಿ: ಹಬ್ಬ ಹರಿದಿನಗಳು ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿ ಕೊಡುವಂತಿರಬೇಕು, ಆ ನಿಟ್ಟಿನಲ್ಲಿ ಈ ವರ್ಷದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಇಲಾಖೆಯ ನಿಯಮದಂತೆ ವಿಜೃಂಭಣೆಯಿಂದ ಆಚರಿಸಿ ಎಂದು ಡಿವೈಎಸ್‌ಪಿ ಗಿರೀಶ ಬೋಜಣ್ಣನವರ ಮನವಿ ಮಾಡಿದರು.

ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಶನಿವಾರ ಸಂಜೆ ನಡೆದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಇತ್ತೀಚಿಗೆ ನಡೆದ ಕೆಲ ಅಹಿತಕರ ಘಟನೆಗಳಿಂದ ಎಡಿಜಿಪಿ ಮಟ್ಟದಲ್ಲಿ ಚರ್ಚೆಯಾಗಿ ಪಟ್ಟಣಕ್ಕೆ ಬರುವಂತಾಗಿದ್ದು ಅತ್ಯಂತ ನೋವಿನ ಸಂಗತಿ. ಆದರೆ ಕೆಲವು ವರ್ಷಗಳಿಂದ ಗಣೇಶ ವಿಸರ್ಜನೆ ಅತ್ಯಂತ ಯಶಸ್ವಿಯಾಗಿ ಶಾಂತಿಯುತವಾಗಿ ವಿಸರ್ಜೆನೆ ಮಾಡಿದ್ದು, ಪ್ರಸ್ತುತ ವರ್ಷವು ಇಲಾಖೆಯ ನಿಯಮಗಳನ್ನು ಪಾಲಿಸಿ ಯಾವುದೇ ಸಹಿತಕರ ಘಟನೆಗಳು ನಡೆಯದಂತೆ ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸಿ, ಗಣೇಶ ಮಂಡಳಿಯವರು ಹೆಚ್ಚಿನ ಮುತುವರ್ಜಿವಹಿಸಿ ವಿಸರ್ಜನೆ ಮಾಡಿ ಆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಎಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಹಬ್ಬಗಳು ರಾಜಕೀಯ ಪ್ರೇರಿತಗೊಂಡು ಪ್ರತಿಷ್ಠೆಗಾಗಿ ಗಣೇಶ ಮಂಡಳಿಗಳು ಇನ್ನಿಲ್ಲದ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದು, ಮೆರವಣಿಗೆಯಲ್ಲಿ ಡಿ.ಜೆ. ಸಂಸ್ಕೃತಿ ಬಿಟ್ಟು ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡಿ ಆ ಮೂಲಕ ಬಡ ಕಲಾವಿದರಿಗೂ ಕೆಲಸ ನೀಡಿದಂತಾಗುತ್ತೆ ಎಂದರು.

ತಹಸೀಲ್ದಾರ್‌ ಕೆ. ಗುರುಬಸವರಾಜ ಮಾತನಾಡಿ, ಗೌರಿ ಗಣೇಶ ಹಬ್ಬ ಹಾಗೂ ಈದ್ ವಿಲಾದ್ ಹಬ್ಬಗಳನ್ನು ತಾಲೂಕಾಡಳಿತ ವತಿಯಿಂದ ಶಾಂತಿಯುತವಾಗಿ ಆಚರಣೆಗೆ ಸರ್ವ ಸನ್ನದ್ಧವಾಗಿದ್ದು ಸಾರ್ವಜನಿಕರು ಪೊಲೀಸ್ ಇಲಾಖೆ ಜೊತೆ ಸಹಕರಿಸಿ ಸರಕಾರದ ಆದೇಶಗಳನ್ನು ಪಾಲಿಸಿ ಆ ಮೂಲಕ ಜನ ಸಾಮಾನ್ಯರಿಗೆ, ವಾಹನ ಸವಾರರಿಗೆ ತೊಂದರೆಯಾಗದಂತೆ ಗಣೇಶ ಮಂಟಪ ನಿರ್ಮಾಣ ಮಾಡಬೇಕು, ಮೈಕ್ ಬಳಕೆಯ ಸಮಯ ಪಾಲನೆ ಹಾಗೂ ಸೌಂಡ್ ಡಿಸೆಬಲ್‌ ಮಿತಿ ಪಾಲನೆ, ರಾತ್ರಿ 10.30 ಒಳಗೆ ಗಣೇಶ ವಿಸರ್ಜನೆ ಮಾಡಬೇಕು, ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸಣ್ಣ ಪುಟ್ಟ ಘಟನೆಗಳನ್ನು ನಿರ್ಲಕ್ಷ್ಯ ಮಾಡದೇ ಮಂಡಳಿಯವರು ನಿಗಾವಹಿಸಿ ಇಲ್ಲವಾದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಹಾಗೂ ಸರಕಾರದ ಆದೇಶಗಳನ್ನು ಪಾಲಿಸಿ ಶಾಂತಿಯುತವಾಗಿ ವಿಜೃಂಭಣೆಯಿಂದ ಹಬ್ಬ ಆಚರಿಸಿ ಎಂದರು.

ಪಟ್ಟಣ ಪಂಚಾಯತ್ ವತಿಯಿಂದ 9, 11, 15ನೇ ತಾರೀಖಿನಂದು ಗಣೇಶ ವಿಸರ್ಜನೆಗಾಗಿ ಟ್ರ್ಯಾಕ್ಟರ್‌ನಲ್ಲಿ ನೀರಿನ ತೊಟ್ಟಿ ವ್ಯವಸ್ಥೆ ಮಾಡಲಾಗುವುದು. ಕಾರಣ ಸಾರ್ವಜನಿಕರು ತಮ್ಮ ಮನೆಯ ಹತ್ತಿರದಲ್ಲೇ ಗಣೇಶ ವಿಸರ್ಜನೆಗೆ ಅವಕಾಶ ಮಾಡಲಾಗಿದೆ ಹಾಗೂ ಪಟ್ಟಣದ ಸಾರ್ವಜನಿಕ ದೊಡ್ಡ,ದೊಡ್ಡ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಲೈಟ್ ವ್ಯವಸ್ಥೆ ಮಾಡಲಾಗುವುದು ಎಂದರು.

ಜಿಲ್ಲಾಡಳಿತದಿಂದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗುತ್ತದೆ. ಆದರೆ ಮದ್ಯ ಮಾರಾಟ ನಿರ್ಬಂಧದ ಹಿಂದಿನ ದಿನವೇ ಕೆಲ ಅಕ್ರಮ ಮದ್ಯ ವ್ಯಾಪಾರಿಗಳು ಮದ್ಯಗಳನ್ನು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಜಾಲ ಪಟ್ಟಣದಲ್ಲಿ ಇದ್ದು, ಪೊಲೀಸ್ ಇಲಾಖೆ ಅಂತಹ ಮದ್ಯ ಮಾರಾಟಗಾರರನ್ನು ಕಡಿವಾಣ ಹಾಕಬೇಕು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇದೇ ಸಂದರ್ಭದಲ್ಲಿ ಸಿಪಿಐ ಬಸವರಾಜ, ಎಎಸ್‌ಐ ರಮೇಶ ಪಿ.ಎಸ್., ಕೃಷ್ಣಪ್ಪ ತೋಪಿನ, ಅಗ್ನಿ ಶಾಮಕ ಠಾಣಾಧಿಕಾರಿ ಕೆ.ಎಂ. ಕಲ್ಲೇದಾರ, ಪಟ್ಟಣ ಪಂಚಾಯತ್ ಅಧಿಕಾರಿ ಪ್ರಕಾಶ ಮಲ್ಲನಗೌಡ್ರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಾಲತೇಶಗೌಡ ಗಂಗೋಳ, ಹನುಮಂತಪ್ಪ ಗಾಜೇರ, ಈರಣ್ಣ ಎಡಚಿ, ಬಸವರಾಜ ಆಡಿನವರ, ಸುನೀಲ ಸರಶೆಟ್ಟರ, ಆನಂದ ಪುಟ್ಟಣ್ಣನವರ, ಮುತ್ತು ಬೆಣ್ಣಿ, ರವಿ ಹದಡೇರ, ಸುನೀಲ ನಾಯಕ, ಸಿದ್ದಪ್ಪ ಹರಿಜನ, ರಾಜು ನಾಯಕ, ಅಬ್ದುಲ್ ಸೈಕಲ್ಗಾರ, ಜಾಕೀರ ಮುಲ್ಲಾ, ಮಕಬುಲ್‌ಸಾಬ ಮುಲ್ಲಾ, ಅಬ್ಬಾಸ್ ಗೋಡಿಹಾಳ್, ಮುಸ್ತಾಕಸಾಬ ಎಲಿವಾಳ, ಹಾಗೂ ಮಕರಿ, ಯಲಿವಾಳ, ಹಳ್ಳೂರ, ಕುಡುಪಲಿ, ಕಡೂರ, ಗಲಗಿನಕಟ್ಟಿ, ಚಿಕ್ಕಕಬ್ಬಾರ ಸೇರಿದಂತೆ ವಿವಿಧ ಗಣೇಶ ಮಂಡಳಿಯವರು ಇದ್ದರು. ಎ.ಎಸ್.ಐ. ಅಶೋಕ ಕೊಂಡ್ಲಿ ಕಾರ್ಯಕ್ರಮ ನಿರ್ವಹಿಸಿದರು.