ಸಾರಾಂಶ
ಸರ್ಕಾರ ನೆಪ ಮಾತ್ರಕ್ಕೆ ಹಸಿರು ಪಟಾಕಿ ಸಿಡಿಸಿ ಎನ್ನುತ್ತಿದೆ. ಮಾರುಕಟ್ಟೆಯಲ್ಲಿ ರಾಸಾಯನಿಕ ವಸ್ತು ಬಳಸಿದ ಪಟಾಕಿಗಳೇ ಮಾರಾಟವಾಗುತ್ತಿವೆ. ಇದರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಪಟಾಕಿಗಳು ಪರಿಸರಕ್ಕೆ ಹಾನಿ ಮತ್ತು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಅವುಗಳಿಂದ ದೂರ ಉಳಿದು ಮಣ್ಣಿನ ಹಣತೆಯನ್ನು ಹಚ್ಚಿ ದೀಪಾವಳಿ ಆಚರಿಸುವಂತೆ ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ನಾರಾಯಣ್ ತಿಳಿಸಿದರು.ನಗರದ ಬಾಲಭವನದಲ್ಲಿ ಜೈ ಕರ್ನಾಟಕ ಪರಿಷತ್ ವತಿಯಿಂದ ‘ಪಟಾಕಿ- ಬಿಟ್ಹಾಕಿ’ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪಟಾಕಿಗಳನ್ನು ಸಿಡಿಸುವುದರಿಂದ ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ಉಂಟಾಗುತ್ತದೆ. ರಾಸಾಯನಿಕ ವಸ್ತು ಬಳಕೆಯಿಂದ ಭೂಮಿಗೂ ಹಾನಿ ಉಂಟಾಗುತ್ತದೆ. ಶಬ್ದಮಾಲಿನ್ಯದಿಂದ ಪಕ್ಷಿಗಳಿಗೆ ತಮ್ಮ ಗೂಡಿನಲ್ಲಿ ಮೊಟ್ಟೆ, ಮರಿಗಳನ್ನು ಬಿಟ್ಟು ಬೇರೆ ಕಡೆ ಅನಿವಾರ್ಯವಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಾರ್ವಜನಿಕರು ಈ ಬಗ್ಗೆ ಹೆಚ್ಚು ಜಾಗೃತರಾಗಿ ಪರಿಸರ ಉಳಿವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸರ್ಕಾರ ನೆಪ ಮಾತ್ರಕ್ಕೆ ಹಸಿರು ಪಟಾಕಿ ಸಿಡಿಸಿ ಎನ್ನುತ್ತಿದೆ. ಮಾರುಕಟ್ಟೆಯಲ್ಲಿ ರಾಸಾಯನಿಕ ವಸ್ತು ಬಳಸಿದ ಪಟಾಕಿಗಳೇ ಮಾರಾಟವಾಗುತ್ತಿವೆ. ಇದರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ವಾಯುಮಾಲಿನ್ಯದಿಂದ ಉಸಿರಾಟದ ಸಮಸ್ಯೆಗಳಿಗೆ ವಯಸ್ಸಿನ ಅಂತರವಿಲ್ಲದೆ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪಟಾಕಿ ಸಿಡಿತದಿಂದ ಹಲವು ಜನರ ಕಣ್ಣುಗಳಿಗೆ ಹಾನಿ ಉಂಟಾಗುತ್ತಿದೆ. ಜನರು ಜಾಗೃತರಾಗಿ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು ಎಂದರು.ಬಾಲ ಭವನದ ಆವರಣದಲ್ಲಿ ಜೈ ಕರ್ನಾಟಕ ಪರಿಷತ್ ಕಾರ್ಯಕರ್ತರು ಹೂವಿನ ಅಲಂಕಾರ ಮಾಡಿ ಮಣ್ಣಿನ ಹಣತೆ ಹಚ್ಚುವ ಮೂಲಕ ದೀಪಾವಳಿ ಜಾಗೃತಿ ಕಾರ್ಯಕ್ರಮ ಆಚರಿಸಿದರು.
ಪರಿಷತ್ತಿನ ಇಂದಿರಾ, ಸವಿತಾ, ಮಂಜುಳಾ, ತನುಜಾ, ಸುಶೀಲಮ್ಮ, ವಿಜಯಲಕ್ಷ್ಮಿ, ಕೆಂಪೇಗೌಡ, ಪ್ರಸಾದ್, ನಾರಾಯಣಸ್ವಾಮಿ, ಸತೀಶ್, ಪುಟ್ಟಸ್ವಾಮಿ, ರಾಜು, ಲಲಿತ ರಾಜಕುಮಾರ್, ಬಸವರಾಜ್ ಭಾಗವಹಿಸಿದ್ದರು.