ದುರಾಸೆ ಬಿಡಿ, ಭೂಮಿ ರಕ್ಷಣೆಗೆ ಪಣ ತೊಡಿ: ಡಾ. ಎಂ.ಎಚ್. ಹೊಳಿಯಣ್ಣನವರ

| Published : Apr 25 2025, 11:46 PM IST

ಸಾರಾಂಶ

ನಮ್ಮದು ಒಂದೇ ಗ್ರಹ ಮತ್ತು ವಾಸಯೋಗ್ಯ ಹವಾಮಾನ, ಆರೋಗ್ಯಕರ ಸಮುದಾಯಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರಕೃತಿಯೊಂದಿಗೆ ಭವಿಷ್ಯವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಹಾನಗಲ್ಲ: ಕಾಡು ಕಡಿದು ನಾಡಾಗಿ, ಅತಿಯಾಸೆ, ಆಧುನಿಕ ಜೀವನ ಶೈಲಿಗೆ ಪರಿಸರವೇ ನಾಶವಾಗಿ ಮಾನವನ ಅಂತ್ಯದ ಮುನ್ಸೂಚನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ಪ್ರಾಚಾರ್ಯ ಡಾ. ಎಂ.ಎಚ್. ಹೊಳಿಯಣ್ಣನವರ ತಿಳಿಸಿದರು.ಪಟ್ಟಣದ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದಿಂದ ಕಾಲೇಜು ಪರಿಸರ ಮಡಿಲಲ್ಲಿ ಆಯೋಜಿಸಿದ್ದ ಭೂ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳ ವಿವಿಧ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ದುರಾಸೆ ಕೇಂದ್ರಿಕೃತವಾಗಿ ಈಗಿನ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ನಮಗೆ ಇದೊಂದೇ ಭೂಮಿ ಸಾಲದು. ಹಾಗಂತ ಮತ್ತೊಂದು ಭೂಮಿಯನ್ನು ಸೃಷ್ಟಿಸಲು ಆಗದು. ಆದ್ದರಿಂದ ಪರಿಸರಸ್ನೇಹಿಗಳಾಗಿ ಭೂಮಿಯನ್ನು ಉಳಿಸುವುದು ಒಂದೇ ಈಗಿರುವ ಮಾರ್ಗವೆಂದರು. ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ ಹೊಳೇರ ಉಪನ್ಯಾಸ ನೀಡಿ, ನಾವೆಲ್ಲರೂ ಒಟ್ಟಾಗಿ ಭೂಮಿಯ ಮೇಲಿದ್ದೇವೆ. ನಮ್ಮದು ಒಂದೇ ಗ್ರಹ ಮತ್ತು ವಾಸಯೋಗ್ಯ ಹವಾಮಾನ, ಆರೋಗ್ಯಕರ ಸಮುದಾಯಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರಕೃತಿಯೊಂದಿಗೆ ಭವಿಷ್ಯವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಭೂಗೋಳ ವಿಭಾಗದಿಂದ ಭೂ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಾದ ರಾಹುಲ್, ಆದರ್ಶ, ಸ್ನೇಹಾ, ಗೌಸ್, ರೇಣುಕಾ, ಮಲ್ಲಿಕಾರ್ಜುನ ಮತ್ತು ವೀರೇಶ ಕಿರು ನಾಟಕ ಪ್ರದರ್ಶಿಸಿ ಜಾಗೃತಿ ಮೂಡಿಸಿದರು. ಸಸಿ ನೆಡುವುದು, ಪ್ರಬಂಧ ಸ್ಪರ್ಧೆ, ಪರಿಸರ ರಕ್ಷಣೆಗೆ ಜಾಗೃತಿ ಮೂಡಿಸುವ ಘೋಷವಾಕ್ಯಗಳ ಮೂಲಕ ಸಂದೇಶ ರವಾನಿಸುವ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಸತ್ಯಸಾವಿತ್ರಿ ವಿ.ಬಿ., ಸೋಮನಕಟ್ಟಿ ಭೀಮಾವತಿ, ಶಿಲ್ಪಾ ಟಿ., ಡಾ. ಬಿ.ಎಸ್. ಲಕ್ಷ್ಮೇಶ್ವರ, ಪಂಪಾಪತಿ ಕಾಗಿನಲ್ಲಿ, ಸುಶೀಲಾ ಬಡಿಗೇರ, ಸುಚಿತ್ರಾ, ಸುಶ್ಮಾ, ಪ್ರಿಯಾ, ಜಗದೀಶ ಜವಳಿ, ಉಮಾ ಮಹೇಶ್ವರಿ ಇದ್ದರು. ಉಪನ್ಯಾಸಕಿ ಸುಶೀಲಾ ಬಡಿಗೇರ ಸ್ವಾಗತಿಸಿದರು. ರಾಜೇಶ್ವರಿ ತಳಗೇರಿ ವಂದಿಸಿದರು, ರಂಜಿತಾ ಚಿಕ್ಕಣ್ಣನವರ ನಿರೂಪಿಸಿದರು. ಪದವಿ ಶಿಕ್ಷಣ ಕೋರ್ಸ್‌ಗೆ ಪ್ರವೇಶ ಆರಂಭ

ಹಾವೇರಿ: ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿರುವ ಪರಿಶಿಷ್ಟ್ಟ ಜಾತಿ, ಪರಿಶಿಷ್ಟ್ಟ ಪಂಗಡ ವಸತಿಯುಕ್ತ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 2025- 26ನೇ ಸಾಲಿನ ಬಿಎ, ಬಿಕಾಂ, ಬಿಎಸ್ಸಿ ಪದವಿ ಕೋರ್ಸ್‌ಗಳಿಗೆ ಪ್ರವೇಶ ಆರಂಭವಾಗಿವೆ ಎಂದು ಕಾಲೇಜು ಪ್ರಾಚಾರ್ಯರು ತಿಳಿಸಿದ್ದಾರೆ.

₹40.75 ಕೋಟಿ ಅನುದಾನದಲ್ಲಿ ಸುಸಜ್ಜಿತವಾದ ನಿರ್ಮಾಣಗೊಂಡ ಕಾಲೇಜು ಕಟ್ಟಡ ಬಾಲಕರ ಮತ್ತು ಬಾಲಕಿಯರ ವಸತಿಗೃಹಗಳ ಸೌಲಭ್ಯ ಹೊಂದಿದೆ. ಎಸ್‌ಇಪಿ ಪಠ್ಯಕ್ರಮದನ್ವಯ ಬಿಎ ವಿಭಾಗಕ್ಕೆ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಹಾಗೂ ಬಿಕಾಂ ವಿಭಾಗಕ್ಕೆ ವಿಶ್ವವಿದ್ಯಾಲಯ ನಿಗದಿಪಡಿಸಿದ ವಿಷಯ ಹಾಗೂ ಬಿಎಸ್ಸಿ ವಿಭಾಗಕ್ಕೆ ಭೌತಶಾಸ್ತ್ರ, ಗಣಿತಶಾಸ್ತ್ರ, ಕಂಪ್ಯೂಟರ್ ವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯ ಡಾ. ಡಿ.ಟಿ. ಪಾಟೀಲ(9449914438) ಹಾಗೂ ಡಾ. ಆರ್.ಜಿ. ಮಾತನವರ(9480749973) ಅವರನ್ನು ಸಂಪರ್ಕಿಸಲು ಕೋರಲಾಗಿದೆ.