ಬೇಜವಾಬ್ದಾರಿ ತೊರೆದು ಕಾರ್ಯಪ್ರವೃತ್ತರಾಗಿ: ಡಾ. ಪ್ರಕಾಶ ಸಂಕನೂರ

| Published : Feb 07 2024, 01:47 AM IST

ಬೇಜವಾಬ್ದಾರಿ ತೊರೆದು ಕಾರ್ಯಪ್ರವೃತ್ತರಾಗಿ: ಡಾ. ಪ್ರಕಾಶ ಸಂಕನೂರ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳುವ ಮನೋಭಾವ ಹೆಚ್ಚುತ್ತಿದೆ. ಆದರೆ ಇಂಥ ಬೇಜವಾಬ್ದಾರಿಗಳನ್ನು ತೊರೆದು ಇದೇ ನಮ್ಮ ಕೊನೆ ದಿನ ಎಂದು ಕಾರ್ಯಪ್ರವೃತ್ತರಾದಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಎಲುವು-ಕೀಲು ತಜ್ಞ ಡಾ. ಪ್ರಕಾಶ ಸಂಕನೂರ ಹೇಳಿದರು.

ಗದಗ: ಇತ್ತೀಚಿನ ದಿನಗಳಲ್ಲಿ ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳುವ ಮನೋಭಾವ ಹೆಚ್ಚುತ್ತಿದೆ. ಆದರೆ ಇಂಥ ಬೇಜವಾಬ್ದಾರಿಗಳನ್ನು ತೊರೆದು ಇದೇ ನಮ್ಮ ಕೊನೆ ದಿನ ಎಂದು ಕಾರ್ಯಪ್ರವೃತ್ತರಾದಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಎಲುವು-ಕೀಲು ತಜ್ಞ ಡಾ. ಪ್ರಕಾಶ ಸಂಕನೂರ ಹೇಳಿದರು.

ನಗರದ ತೋಂಟದಾರ್ಯ ವಿದ್ಯಾಪೀಠದ ತೋಂಟದ ಸಿದ್ಧೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಮಹಾವಿದ್ಯಾಲಯದಲ್ಲಿ ಜರುಗಿದ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಉತ್ತಮ ಆಭರಣ ತಯಾರಾಗಲು ಲೋಹಕ್ಕೆ ಸಾಕಷ್ಟು ಸುತ್ತಿಗೆಯ ಏಟುಗಳು ಬಿದ್ದಿರುತ್ತವೆ, ಅದೇ ರೀತಿ ಜೀವನದಲ್ಲಿ ಹಲವು ಪೆಟ್ಟುಗಳನ್ನು ಅನುಭವಿಸಿದವರೇ ಸಾಧಕರಾಗಿರುತ್ತಾರೆ. ಅಂಥ ಸಾಧಕರು ನಮಗೆ ಆದರ್ಶವಾಗಬೇಕೇ ವಿನಃ ಸಿನಿಮಾ ತಾರೆಗಳಷ್ಟೇ ನಮಗೆ ಮಾದರಿಯಾಗಬಾರದು ಎಂದರು.

ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಸತತ ಪರಿಶ್ರಮವಿದ್ದರೆ ಅದೃಷ್ಟ ತಾನಾಗಿಯೇ ಒಲಿದು ಬರುತ್ತದೆ. ಪ್ರಯತ್ನ ಮತ್ತು ಪರಿಶ್ರಮಗಳೆಂಬ ಎರಡು ಚಕ್ರಗಳು ಇದ್ದಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸಿನ ಕಡೆಗೆ ಸಾಗಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಕ್ರಮಿಸುವ ಯಶಸ್ಸು ಇತರರಿಗೆ ಮೈಲಿಗಲ್ಲಾಗಬೇಕು ಎಂದರು.

ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಗುರಿ ಹೊಂದುವುದು ಅವಶ್ಯಕವಾಗಿದ್ದು, ಸತತ ಪರಿಶ್ರಮ ಹಾಗೂ ಶ್ರದ್ಧೆ ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ. ವಿಶ್ವಗುರು ಬಸವೇಶ್ವರರ ವಚನ ಸಾಹಿತ್ಯ ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಇಂದಿನ ಪಾರ್ಲಿಮೆಂಟ್ ವ್ಯವಸ್ಥೆಗೆ ಬಸವೇಶ್ವರರ ಅನುಭವ ಮಂಟಪವೇ ತಳಹದಿಯಾಗಿದೆ. ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳು ಬಸವ ತತ್ವಗಳನ್ನು ಕೇವಲ ನುಡಿಯಲ್ಲಿ ತೋರದೇ ನಡೆಯಲ್ಲಿ ತೋರಿದ ಮಹಾನ್ ಸಂತರಾಗಿದ್ದು, ಶ್ರೀಗಳು ಲಿಂಗೈಕ್ಯರಾದ ಸಮಯದಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ ಅವರು ಶ್ರೀಗಳನ್ನು ಅಂತಾರಾಷ್ಟ್ರೀಯ ಸಂತ ಎಂದು ಕರೆದಿದ್ದು ಸ್ಮರಣೀಯವಾಗಿದೆ ಎಂದರು.

ಈ ವೇಳೆ ಲಕ್ಕುಂಡಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವೈ.ಎಚ್. ತಕ್ಕಲಕೋಟಿ ಹಾಗೂ ಸಿ.ಎಸ್. ಪಾಟೀಲ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಜಿ. ಕೊಲ್ಮಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತೋಂ.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಚ್.ಎಸ್. ಕಿಂದ್ರಿ, ವಿದ್ಯಾರ್ಥಿ ಪ್ರತಿನಿಧಿ ಚೇತನ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾ. ವೈ.ಎಸ್.ಮತ್ತೂರ ಸ್ವಾಗತಿಸಿದರು. ಎನ್.ವಿ.ಕಡಗದ ನಿರೂಪಿಸಿದರು. ಶಿವಪ್ಪ ಎಂ. ವಂದಿಸಿದರು.