ಕನ್ನಡಪ್ರಭ ವಾರ್ತೆ ಹೊನ್ನಾವರ
ವ್ಯಕ್ತಿ ನಿಷ್ಠೆಗಿಂತ ವೃತ್ತಿ ನಿಷ್ಠೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕಿದ್ದು ಶಿಕ್ಷಕರು ಅರ್ಪಣಾ ಮನೋಭಾವದಿಂದ ಅಧ್ಯಾಪನದಲ್ಲಿ ತೊಡಗಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಎಚ್.ಎನ್. ಪೈ ಸಲಹೆ ನೀಡಿದರು.ಪಟ್ಟಣದ ಎಂಪಿಇ ಸೊಸೈಟಿಯ ಎಸ್.ಡಿ.ಎಂ.ಕಾಲೇಜು ಮತ್ತು ಪೂರ್ವ ವಿದ್ಯಾರ್ಥಿ ಸಂಘ ಎಸ್.ಡಿ.ಎಂ.ಕಾಲೇಜಿನ ಡಾ. ಎನ್.ಆರ್.ನಾಯಕ್ ಬಯಲು ರಂಗ ಮಂದಿರದಲ್ಲಿ ನಡೆದ ಎಂ.ಪಿ.ಇ.ಎಸ್ .ಎಸ್ ಡಿ.ಎಂ.ಸಂಭ್ರಮ -೨೦೨೬ರ ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಅಧ್ಯಯನ ಹಾಗೂ ಅಧ್ಯಾಪನ ಇವುಗಳನ್ನು ಆಧರಿಸಿ ಶಿಕ್ಷಣ ಸಂಸ್ಥೆಯ ಗುಣಮಟ್ಟ ನಿರ್ಧಾರವಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತಾವು ಕಲಿತ ಶಿಕ್ಷಣ ಸಂಸ್ಥೆಯನ್ನು ಪ್ರಗತಿಪಥದಲ್ಲಿ ಮುನ್ನಡೆಸುವಲ್ಲಿ ಪೂರ್ವ ವಿದ್ಯಾರ್ಥಿಗಳ ಸೇವೆ ಕೂಡ ಮುಖ್ಯವಾಗುತ್ತದೆ. ಕಿರಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶ ಒದಗಿಸಲು ಹಿರಿಯ ವಿದ್ಯಾರ್ಥಿಗಳು ಸಹಕರಿಸಬೇಕು. ಕೌಶಲ್ಯ, ಉದ್ಯಮ ಕಾರ್ಯಾಗಾರ, ಸಂದರ್ಶನ ಕಲೆ , ಇಂಟರ್ನಶಿಪ್, ಅನುಭವ ಹಂಚಿಕೆ, ಸ್ಕಾಲರ್ ಶಿಪ್ ನೀಡುವಂತಹ ಕೆಲಸವನ್ನು ಪೂರ್ವ ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಾರ್ಥಿಗಳಿಗೆ ಮಾಡಬೇಕು.ಇದು ಕಷ್ಟದ ಯುಗ. ಉತ್ತಮರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಮಾತೃ ಸಂಸ್ಥೆ ತಾರುಣ್ಯದಲ್ಲಿ ಇರಲು ಪೂರ್ವ ವಿದ್ಯಾರ್ಥಿ ಸಂಘ ಜೊತೆಯಾಗಬೇಕು ಎಂದು ನುಡಿದರು.
ಎಂಪಿಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಂಪಿಇ ಸೊಸೈಟಿ ಉಪಾಧ್ಯಕ್ಷ ನಾಗರಾಜ ಕಾಮತ, ಜಂಟಿ ಕಾರ್ಯದರ್ಶಿ ಜಿ.ಪಿ. ಹೆಗಡೆ, ಸದಸ್ಯ ರಾಜು ಭಂಡಾರಿ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ್ ಕಾಮತ, ಕಾರ್ಯದರ್ಶಿ ಡಿ.ಎಲ್. ಹೆಬ್ಬಾರ, ಪಿ.ಎಂ. ಹೊನ್ನಾವರ, ಡಾ. ಶಿವರಾಮ ಶಾಸ್ತ್ರಿ, ಸತೀಶ ಭಟ್ಟ, ಕಾವೇರಿ ಮೇಸ್ತ, ಉದ್ಯಮಿ ಪ್ರೀತಮ್ ಶೇಟ್, ಪದವಿ ಕಾಲೇಜು ಪ್ರಾಚಾರ್ಯ ಡಾ. ಜಿ.ಎನ್. ಭಟ್ಟ, ಪದವಿ ಪೂರ್ವ ಕಾಲೇಜು ಹಂಗಾಮಿ ಪ್ರಾಚಾರ್ಯ ಡಾ. ರಾಜು ಮಾಳಗಿಮನೆ, ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯೆ ವಿಜಯಲಕ್ಷ್ಮಿ ನಾಯ್ಕ, ಎಸ್.ಜಿ. ಹೆಗಡೆ ಭಾಗವಹಿಸಿದ್ದರು.ಇದಕ್ಕೂ ಮೊದಲು ಬೆಳಗ್ಗಿನ ಅವಧಿಯಲ್ಲಿ ವಿಶ್ರಾಂತ ಉಪನ್ಯಾಸಕರು, ವಿವಿಧ ಸಾಧನೆ ಮಾಡಿದ ಪೂರ್ವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಲ್ಲದೆ ಪೂರ್ವ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಈಗಿನ ವಿದ್ಯಾರ್ಥಿಗಳ ಜೊತೆ ಹಂಚಿಕೊಳ್ಳುತ್ತಾ ಹಳೆಯ ದಿನಗಳನ್ನು ಮೆಲಕು ಹಾಕಿದರು. ಸಂಗೀತ ಉಪನ್ಯಾಸಕಿ ಸಂಗೀತ ನಾಯ್ಕ ಪ್ರಾರ್ಥಿಸಿದರು.ಡಾ.ಡಿ.ಎಲ್.ಹೆಬ್ಬಾರ್ ಸ್ವಾಗತಿಸಿದರು. ಪ್ರಕಾಶ್ ಕಾಮತ್ ಹಾಗೂ ಉಪನ್ಯಾಸಕ ವಿನಾಯಕ್ ಭಟ್ ಅತಿಥಿ ಪರಿಚಯಿಸಿದರು. ಪ್ರಶಾಂತ್ ಹೆಗಡೆ ನಿರೂಪಿಸಿದರು. ನಂತರ ಪೂರ್ವ ವಿದ್ಯಾರ್ಥಿಗಳಿಂದ ಯಕ್ಷಗಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.