ಸಾರಾಂಶ
ಮುಂಡಗೋಡದಲ್ಲಿ ರಾಮಮಂದಿರ ನಿರ್ಮಾಣ ಇದು ಕೇವಲ ಆರಂಭವಷ್ಟೆ. ಇದರ ಹಿಂದೆ ಸಾವಿರಾರು ವರ್ಷ ಇತಿಹಾಸದ ಹಿನ್ನೆಲೆ ಇದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಮುಂಡಗೋಡ: ರಾಮಮಂದಿರ ನಿರ್ಮಾಣ ಇದು ಕೇವಲ ಆರಂಭವಷ್ಟೆ. ಇದರ ಹಿಂದೆ ಸಾವಿರಾರು ವರ್ಷ ಇತಿಹಾಸದ ಹಿನ್ನೆಲೆ ಇದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳಿಂದ ಹಿಂದೂಗಳನ್ನು ತುಳಿಯುವ ಕೆಲಸ ಮಾಡಲಾಗಿದೆ. ಅದನ್ನು ಯಾವ ಪದಗಳಲ್ಲೂ ವರ್ಣಿಸಲು ಸಾಧ್ಯವಿಲ್ಲ. ಕೇವಲ ರಾಮ ಜನ್ಮ ಭೂಮಿ ಹೋರಾಟದಲ್ಲಿ ಎಷ್ಟು ಜನ ಜೀವ ಕಳೆದುಕೊಂಡಿದ್ದಾರೆ ಎಂಬುವುದಕ್ಕೆ ಲೆಕ್ಕವಿಲ್ಲ.
ದೇಶದಲ್ಲಿ ಹಿಂದೂ ಧರ್ಮ ಮಟ್ಟ ಹಾಕಬೇಕೆಂಬ ಪ್ರಯತ್ನ ನಡೆಯಿತು. ಅನ್ಯಾಯ, ಹಿಂಸೆ, ದೌರ್ಜನ್ಯ, ಅತ್ಯಾಚಾರ, ಲೂಟಿ ಹಾಗೂ ಮತಾಂತರ ಇವೆಲ್ಲದರಿಂದ ಹೊರಗಡೆ ಬಂದು ಹಿಂದೂ ಸಮಾಜ ಜಾಗ್ರತವಾಗಿ ತಲೆ ಎತ್ತಿ ನಿಲ್ಲುತ್ತಿದೆ.
ರಾಮ ಜನ್ಮ ಭೂಮಿಯ ಆದೋಲನ ನಿರ್ಣಾಯಕ ಹಂತ ತಲುಪಿದ್ದು, ಈ ಸಂದರ್ಭದಲ್ಲಿ ದೇಶ ವಾಸಿಗಳನ್ನು ತಲುಪಬೇಕೆಂಬುವುದು ಸಂಘಟನೆಯ ಅಪೇಕ್ಷೆಯಾಗಿದೆ. ಹಿಂದೂಗಳನ್ನು ಒಗ್ಗೂಡಿಸಿಕೊಂಡು ಹೋಗುವ ಉದ್ದೇಶದಿಂದ ಮನೆ-ಮನೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ದೇಶಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಜಾಗರಣದ ಅಭಿಯಾನಕ್ಕೆ ಹೊಸ ತಿರುವು ಮತ್ತು ವೇಗ ನೀಡಿದ್ದಾರೆ. ವಾಜಪೇಯಿ ಹಾಗೂ ಎಲ್.ಕೆ. ಅಡ್ವಾಣಿ ಅವರು ಇದನ್ನು ಪ್ರಾರಂಭಿಸಿದರು. ಆದರೆ ಅದಕ್ಕೆ ರೂಪ ನೀಡಿದ್ದು ಮೋದಿ. ಅಯೋಧ್ಯೆಯಲ್ಲಿ ಮಂದಿರ ಆಗಿದೆ ಎಂಬುವುದಲ್ಲ.
ಇದು ನಮ್ಮ ರಕ್ತದ ಜಾಗರಣೆ. ರಾಮ ಜನ್ಮ ಭೂಮಿಯೊಂದಿಗೆ ಇನ್ನೂ ಅನೇಕ ಬೆಳವಣಿಗೆ ಆಗಲಿವೆ. ಇತಿಹಾಸ ಎಂಬುವುದು ಆಕಾಶದಿಂದ ಉದುರಿ ಬಿಳುವುದಲ್ಲ. ಬದಲಾಗಿ ನಮಗೆ ಗೊತ್ತಿಲ್ಲದೇ ರೂಪುಗೊಳ್ಳುವಂತಹದ್ದು. ಏನೂ ಶಬ್ದವಿಲ್ಲದ್ದೇನೆ ಇತಿಹಾಸ ನಿರ್ಮಾಣವಾಗಿ ಬಿಡುತ್ತದೆ. ಇತಿಹಾಸದ ಒಂದು ಪರ್ವ ಕಾಲದಲ್ಲಿ ನಾವಿದ್ದೇವೆ. ಈ ಅಭಿಯಾನದಲ್ಲಿ ನಾವು ಪಾಲ್ಗೊಳ್ಳಬೇಕು. ಅದು ನಮ್ಮ ಕರ್ತವ್ಯ ಎಂದು ಹೇಳಿದರು.
ರಾಜಕೀಯ ಭಿನ್ನಾಭಿಪ್ರಾಯ ಹೊರತುಪಡಿಸಿ ಧರ್ಮದೊಟ್ಟಿಗೆ ರಾಷ್ಟ್ರೀಯ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ರಾಮಮಂದಿರ ಉದ್ಘಾಟನೆಯಿಂದ ಒಂದು ಮೈಲಿಗಲ್ಲು ಸ್ಥಾಪನೆಯಾಗುತ್ತದೆ ಎಂದ ಅವರು, ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದು ನಿಶ್ಚಿತ.
ಚುನಾವಣೆಯಲ್ಲಿ ಎಷ್ಟು ಸ್ಥಾನ ಬರುತ್ತವೆ ಎಂಬುವುದು ಅಪ್ರಸ್ತುತ. ಅದು ಕಾಂಗ್ರೆಸ್‌ನವರಿಗೂ ಗೊತ್ತಾಗಿದೆ. ಆದರೆ ಈ ಬಾರಿ ಸ್ಥಾನಗಳ ಗೆಲುವಲ್ಲ, ಬದಲಾಗಿ ವೈಚಾರಿಕವಾಗಿ ಹಿಂದುತ್ವ ವಿರೋಧ ಹಾಗೂ ಅವಹೇಳನ ಮಾಡುವ ರಾಷ್ಟ್ರೀಯತೆಯ ಹಿತದ ಜತೆಗೆ ರಾಜಿ ಮಾಡಿಕೊಳ್ಳುವವರಿಗೆ ತಕ್ಕ ಪಾಠ ಕಲಿಸುವ ಚುನಾವಣೆ ಇದಾಗಬೇಕು.
ವೈಚಾರಿಕ ಸಂಘರ್ಷಕ್ಕೆ ನಿರ್ಣಾಯಕ ಗೆಲುವು ನಮ್ಮದಾಗಬೇಕಷ್ಟೇ. ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅಭಿಯಾನ ನಡೆಸುವ ಕಾಂಗ್ರೆಸ್ ನಾಯಕರೇ ಮೋದಿಯವರೆ ಪ್ರಧಾನಿಯಾಗಬೇಕೆಂದು ಅಪೇಕ್ಷೆಪಡುತ್ತಾರೆ ಎಂದರು.
ಜಿಲ್ಲೆಯಲ್ಲಿ ಸಂಘದ ಪ್ರಚಾರಕನಾಗಿ ಕಾಲಿಟ್ಟಾಗ ಮೊಟ್ಟ ಮೊದಲ ಬಾರಿಗೆ ತೆಗೆದುಕೊಂಡ ಹೋರಾಟ ರಾಮ ಜನ್ಮ ಭೂಮಿ ಹೋರಾಟ. ಅಂದು ಇಟ್ಟಿಗೆ ಪೂಜೆ ಮುಖಾಂತರವೇ ಹಿಂದೂ ಸಂಘಟನೆ ಹೋರಾಟ ಪ್ರಾರಂಭವಾಯಿತು ಎಂದು ಹೇಳಿದರು.
ಈ ವೇಳೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ನಾಗಭೂಷಣ ಹಾವಣಗಿ, ನಾಗರಾಜ ಕುನ್ನೂರ, ಮಹೇಶ ಹೊಸಕೊಪ್ಪ, ಅಶೋಕ ಚಲವಾದಿ, ಸಂತೋಷ ತಳವಾರ ಉಪಸ್ಥಿತರಿದ್ದರು.
ನನ್ನನ್ನು ಕ್ಷಮಿಸಿ: ಕೆಲ ವರ್ಷಗಳಿಂದ ಅನಾರೋಗ್ಯ ಮುಂತಾದ ಕಾರಣಗಳಿಂದ ನಾನು ಕಾಣಿಸಿಕೊಂಡಿರಲಿಲ್ಲ. ರಾಜಕೀಯದಿಂದ ದೂರ ಉಳಿಯುವ ತೀರ್ಮಾನ ಕೈಗೊಂಡಿದ್ದೆ. ಆದರೆ ನಾವು ಅಂದುಕೊಂಡಂತೆ ಆಗುವುದಿಲ್ಲ.
ಕಳೆದ ೬ ತಿಂಗಳಿಂದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಇಷ್ಟು ದಿನ ತಮ್ಮ ಸಂಪರ್ಕಕ್ಕೆ ಸಿಗದಿದ್ದಕ್ಕೆ ಬೇಸರವಾದರೆ ಕ್ಷಮಿಸಿ ಎಂದು ಕಾರ್ಯಕರ್ತರಲ್ಲಿ ಸಂಸದ ಅನಂತಕುಮಾರ ಹೆಗಡೆ ಮನವಿ ಮಾಡಿದರು.