ಜಿಲ್ಲಾಧಿಕಾರಿಯವರು ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಪ್ರಕರಣದಲ್ಲಿ ಯಾರ ಪಾತ್ರವಿದೆ ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆರೋಪ ಮಾಡುವವರು ಮೊದಲು ಅದರ ಸತ್ಯಾಂಶವನ್ನು ಸಾಬೀತುಪಡಿಸಲಿ ಎಂದು ಹೇಳಿದರು. ಹಾಸನದ ಜನರು ಹಾಗೂ ಯುವಕರು ಹಲವು ವರ್ಷಗಳಿಂದ ಅವರ ಕುಟುಂಬವನ್ನು ನಂಬಿಕೊಂಡಿದ್ದಾರೆ. ಆ ನಂಬಿಕೆಗೆ ತಕ್ಕಂತೆ ಜಿಲ್ಲೆಗೆ ಎರಡು ಕೈಗಾರಿಕೆಗಳನ್ನು ತಂದು ೧೦ ಸಾವಿರ ಜನರಿಗೆ ಉದ್ಯೋಗ ನೀಡಲಿ. ಕೈಗಾರಿಕೆ ಸ್ಥಾಪಿಸಲು ಎಲ್ಲಿ ಭೂಮಿ ಬೇಕಾದರೂ ಕೇಳಲಿ, ಕೊಡಿಸುವ ಕೆಲಸ ಮಾಡುತ್ತೇವೆ. ಅಭಿವೃದ್ಧಿಯ ವಿಚಾರದಲ್ಲಿ ಸಹಕರಿಸಲು ಸಿದ್ಧರಿದ್ದೇವೆ. ಕೇವಲ ಟೀಕೆ ಮಾಡುವುದರಿಂದ ಜನರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜಕೀಯ ಆರೋಪ-ಪ್ರತ್ಯಾರೋಪ, ಟೀಕೆ-ಟಿಪ್ಪಣಿಗಳಿಂದ ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ. ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಕನಿಷ್ಠ ೧೦ ಸಾವಿರ ಯುವಕರಿಗೆ ಉದ್ಯೋಗ ಕಲ್ಪಿಸುವ ಮೂಲಕ ಜನರ ನಿರೀಕ್ಷೆ ಈಡೇರಿಸುವ ಕೆಲಸ ಮಾಡಲಿ ಎಂದು ಸಚಿವ ಎಚ್.ಸಿ. ಬಾಲಕೃಷ್ಣ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು. ಆರೋಪಗಳನ್ನು ಮಾಡುವುದಕ್ಕಿಂತ ಅವುಗಳ ಹಿಂದಿರುವ ಸತ್ಯಾಸತ್ಯತೆ ಹೊರಬರಬೇಕು. ಜಿಲ್ಲಾಧಿಕಾರಿಯವರು ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಪ್ರಕರಣದಲ್ಲಿ ಯಾರ ಪಾತ್ರವಿದೆ ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆರೋಪ ಮಾಡುವವರು ಮೊದಲು ಅದರ ಸತ್ಯಾಂಶವನ್ನು ಸಾಬೀತುಪಡಿಸಲಿ ಎಂದು ಹೇಳಿದರು. ಹಾಸನದ ಜನರು ಹಾಗೂ ಯುವಕರು ಹಲವು ವರ್ಷಗಳಿಂದ ಅವರ ಕುಟುಂಬವನ್ನು ನಂಬಿಕೊಂಡಿದ್ದಾರೆ. ಆ ನಂಬಿಕೆಗೆ ತಕ್ಕಂತೆ ಜಿಲ್ಲೆಗೆ ಎರಡು ಕೈಗಾರಿಕೆಗಳನ್ನು ತಂದು ೧೦ ಸಾವಿರ ಜನರಿಗೆ ಉದ್ಯೋಗ ನೀಡಲಿ. ಕೈಗಾರಿಕೆ ಸ್ಥಾಪಿಸಲು ಎಲ್ಲಿ ಭೂಮಿ ಬೇಕಾದರೂ ಕೇಳಲಿ, ಕೊಡಿಸುವ ಕೆಲಸ ಮಾಡುತ್ತೇವೆ. ಅಭಿವೃದ್ಧಿಯ ವಿಚಾರದಲ್ಲಿ ಸಹಕರಿಸಲು ಸಿದ್ಧರಿದ್ದೇವೆ. ಕೇವಲ ಟೀಕೆ ಮಾಡುವುದರಿಂದ ಜನರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.ರಾಜಣ್ಣಗೆ ಬಹಿರಂಗ ಚರ್ಚೆಗೆ ಆಹ್ವಾನ:ಮಾಜಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರ ಪಕ್ಷದ ವಿರುದ್ಧದ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಾಲಕೃಷ್ಣ, ಪಕ್ಷದಿಂದ ಎಲ್ಲ ಸೌಲಭ್ಯ ಹಾಗೂ ಅವಕಾಶಗಳನ್ನು ಪಡೆದುಕೊಂಡು ಮತ್ತೆ ಪಕ್ಷದ ವಿರುದ್ಧವೇ ಮಾತನಾಡುವುದು ಸರಿಯಲ್ಲ ಎಂದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ರಾಜಣ್ಣ ಅವರು ಪಕ್ಷದ ವಿರುದ್ಧ ಮಾತನಾಡುತ್ತಿದ್ದರು. ಈಗಲೂ ಅದೇ ಪ್ರವೃತ್ತಿ ಮುಂದುವರಿಸಿದ್ದಾರೆ. ಪಕ್ಷದ ಜವಾಬ್ದಾರಿಯನ್ನು ನಿಭಾಯಿಸುವ ಬದಲು ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ. ಮೊದಲು ನಾವು ಸರಿಯಾಗಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ತಪ್ಪುಗಳನ್ನು ಮರೆಮಾಚಿ ಬೇರೆಯವರ ಮೇಲೆ ಆರೋಪ ಹೊರಿಸುವುದು ಸೂಕ್ತವಲ್ಲ ಎಂದು ಹೇಳಿದರು. ರಾಜಣ್ಣ ಅವರು ಹಾಸನಾಂಬೆ ದೇವಿಯ ಸನ್ನಿಧಿಗೆ ಬರಲಿ. ನಾವೂ ಬರುತ್ತೇವೆ. ದೇವರ ಮುಂದೆ ಪ್ರಮಾಣ ಮಾಡಿ ಚುನಾವಣೆಯಲ್ಲಿ ಯಾರು ಯಾರ ಪರವಾಗಿ ಕೆಲಸ ಮಾಡಿದ್ದಾರೆ ಎಂಬುದನ್ನು ಬಹಿರಂಗವಾಗಿ ಚರ್ಚಿಸೋಣ. ಚರ್ಚೆಗೆ ಯಾವುದೇ ಕಾಲಾವಕಾಶದ ಅಗತ್ಯವಿಲ್ಲ, ಈಗಲೇ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.ಹಾಸನ ಲೋಕಸಭಾ ಚುನಾವಣೆಯಲ್ಲಿ ಸಂಸದರ ಗೆಲುವಿಗೆ ರಾಜಣ್ಣ ಅವರ ಕೊಡುಗೆ ಏನೂ ಇಲ್ಲ. ಆ ಗೆಲುವಿನ ಹಿಂದೆ ಕಾರ್ಯಕರ್ತರು, ಸೋತ ಅಭ್ಯರ್ಥಿಗಳು ಹಾಗೂ ಸ್ಥಳೀಯ ಮುಖಂಡರ ಪರಿಶ್ರಮವಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅವರು ಯಾವ ರೀತಿ ನಡೆದುಕೊಂಡಿದ್ದರು ಎಂಬುದು ಜಿಲ್ಲೆಯ ಕಾರ್ಯಕರ್ತರಿಗೆ ತಿಳಿದಿದೆ. ಗೆಲುವಿನ ಶ್ರೇಯಸ್ಸನ್ನು ತಮ್ಮದಾಗಿಸಿಕೊಳ್ಳುವ ಅಗತ್ಯವಿಲ್ಲ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರಿಗೆ ಮಾತ್ರ ಅದರ ಗೌರವ ಸಲ್ಲಬೇಕು ಎಂದು ಹೇಳಿದರು. ಚುನಾವಣೆಯ ಸಂದರ್ಭದಲ್ಲಿ ಬೆಳಿಗ್ಗೆ ಹೋಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಎರಡು ಗಂಟೆಗಳ ಕಾಲ ಚರ್ಚೆ ನಡೆಸುವ ಅಗತ್ಯವೇನಿತ್ತು? ಇಂತಹ ಭೇಟಿಗಳು ಪಕ್ಷದ ಕಾರ್ಯಕರ್ತರಲ್ಲಿ ಯಾವ ಸಂದೇಶ ರವಾನಿಸುತ್ತವೆ ಎಂಬುದನ್ನು ಯೋಚಿಸಬೇಕಿತ್ತು. ಭೇಟಿ ಮಾಡುವುದಿದ್ದರೆ ಬಹಿರಂಗವಾಗಿಯೇ ಹೋಗಲಿ. ಕದ್ದುಮುಚ್ಚಿ ಭೇಟಿಯಾಗುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ತುಮಕೂರಿಗೆ ಕೈಗಾರಿಕೆ ತರಲು ಹೋಗಿದ್ದರೇ? ಹಾಗಿದ್ದರೆ ಕೈಗಾರಿಕೆ ಸ್ಥಾಪಿಸಿ ತೋರಿಸಲಿ. ಹಿಂದೆ ನಾವು ಜೆಡಿಎಸ್‌ನಲ್ಲಿದ್ದಾಗ ಅಸಮಾಧಾನದಿಂದ ಹೊರಬಂದು ತೀರ್ಮಾನ ಕೈಗೊಂಡಿದ್ದೇವೆ. ಈಗ ಅವರಿಗೂ ಪಕ್ಷದಲ್ಲಿ ಅಸಮಾಧಾನವಿದ್ದರೆ ಅವರೂ ತಮ್ಮ ನಿರ್ಧಾರ ಕೈಗೊಳ್ಳಬಹುದು. ಅವರ ಸಚಿವ ಸ್ಥಾನ ಏಕೆ ಕಳೆದುಹೋಯಿತು ಎಂಬುದನ್ನೂ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ನಾವು ಯಾರನ್ನೂ ಪಕ್ಷದಿಂದ ಹೊರಹಾಕುವುದಿಲ್ಲ. ಪಕ್ಷದಲ್ಲಿ ಇರುವವರು ಇರಬಹುದು, ಹೋಗುವವರು ಹೋಗಬಹುದು. ಆದರೆ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಬಾಲಕೃಷ್ಣ ಹೇಳಿದರು.