ಸಾರಾಂಶ
ಧಾರವಾಡ: ರಾಜಕೀಯ ಬಿಟ್ಟು, ಸರಿಯಾಗಿ ಕೆಲಸ ಮಾಡಿದರೆ ಸರ್ಕಾರಿ ಶಾಲೆಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದಿರಲು ನಾವು- ನೀವೆಲ್ಲರೂ ಕಾರಣ ಎಂದು ಜಿಲ್ಲಾ ಉಸ್ತುವಾರಿ, ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಇಲ್ಲಿಯ ಜೆಎಸ್ಸೆಸ್ ಸನ್ನಿಧಿ ಸಭಾಭವನದಲ್ಲಿ ಮಂಗಳವಾರ ಶೈಕ್ಷಣಿಕ ಕಾರ್ಯಾಗಾರ ಸಮಾರೋಪ ಹಾಗೂ ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.ಶಾಲೆ, ಮನೆ ಹಾಗೂ ಸಮಾಜದಲ್ಲಿ ಮಗುವಿಗೆ ಉತ್ತಮ ಸಂಸ್ಕಾರದ ಬಗ್ಗೆ ಚರ್ಚಿಸುವ ಹಾಗೂ ಇದಕ್ಕೆ ಪೂರಕ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಯಬೇಕು. ಆದರೆ, ಪ್ರಸ್ತುತ ರಾಜಕೀಯ, ಜಾತಿ, ಮೇಲು-ಕೀಳು ವಿಷಯಗಳ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡಿ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದ್ದೇವೆ. ಮಕ್ಕಳ ಭವಿಷ್ಯದ ಕುರಿತು ನಾವೆಲ್ಲರೂ ಎಚ್ಚರಿಕೆ ಮಹಿಸಬೇಕು. ಅವರ ಚಲನ ವಲನದ ಬಗ್ಗೆ ನಿತ್ಯ ಕಾಳಜಿ ವಹಿಸಿ ಅವರನ್ನು ತಿದ್ದುವ ಕೆಲಸ ಮಾಡಬೇಕು ಎಂಬ ಸಲಹೆ ನೀಡಿದರು.
ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಯು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಾಗೂ ಅವರ ಶೈಕ್ಷಣಿಕ ಪ್ರಗತಿ ಸಾಧಿಸಲು ಹಾಗೂ ಅವರ ಶ್ರೇಯೊಭಿವೃದ್ದಿಗಾಗಿ ಉತ್ತಮ ಕೆಲಸ ಮಾಡಬೇಕು. ನಮ್ಮ ಶಾಲೆಗಳ ಬಗ್ಗೆ ನಮಗೆ ಹೆಮ್ಮೆ, ಗರ್ವ ಮೂಡುವಂತಾಗಬೇಕು. ಸರ್ಕಾರದ ಸಾಕಷ್ಟು ಯೋಜನೆಗಳಿದ್ದು, ಎಲ್ಲ ಸಮಸ್ಯೆಗಳನ್ನು ನಿವಾರಿಸಲು ನಾವೆಲ್ಲರೂ ಇರುವಾಗ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಇಂದಿನ ಶಿಕ್ಷಕರು, ನಾವು ಮಕ್ಕಳಿಗೆ ಜ್ಞಾನ ಒದಗಿಸುವಲ್ಲಿ ವಿಫಲರಾಗುತ್ತಿದ್ದು, ಅವರನ್ನು ಪ್ರೀತಿಯಿಂದಲೇ ಜ್ಞಾನದ ಮಾರ್ಗದಲ್ಲಿ ಕರೆದುಕೊಂಡು ಹೋಗಬೇಕು. ಮನೆಯಿಂದಲೇ ಮಕ್ಕಳಿಗೆ ಗೌರವ ಮನೋಭಾವ, ಪ್ರಾಮಾಣಿಕತೆ, ಸಜ್ಜನಿಕೆ, ಸರಳತೆ ಕಲಿಸಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಗುಣಮಟ್ಟದ ಶಿಕ್ಷಣ ಕಡೆಗೆ ಗಮನ ಹರಿಸಿ, ಮಿಷನ್ ವಿದ್ಯಾಕಾಶಿಯನ್ನು ಅನುಷ್ಠಾನಕ್ಕೆ ತಂದಾಗ ಎಲ್ಲರೂ ಸಹಕಾರ ನೀಡಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಇದ್ದರೂ ಸುಧಾರಣೆ ಆಗಿದೆ. ಅದರಂತೆ ಈ ವರ್ಷವೂ ಇನ್ನಷ್ಟು ಪ್ರಯತ್ನ ಮೂಲಕ ವಿದ್ಯಾಕಾಶಿ ಗತವೈಭವ ಮರಳಿ ತರಲು ಪ್ರಯತ್ನಿಸುತ್ತೇವೆ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಬದ್ಧ. ಶಿಕ್ಷಕರು ಉತ್ತಮ ಶಿಕ್ಷಣ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಮಕ್ಕಳಿಗೆ ಮೊಬೈಲ್‌ಗಳ್ನು ನೀಡಬೇಡಿ. ಪೋಷಕರು ಮಕ್ಕಳ ಬಗ್ಗೆ ಜವಾಬ್ದಾರಿ ವಹಿಸಿ ಎಂದರು.ಶೇ. ೧೦೦ ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರನ್ನು ಹಾಗೂ ಜಿಲ್ಲೆಗೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಜಿಲ್ಲೆಗೆ ಅತಿ ಹೆಚ್ವು ಅಂಕಪಡೆದ ವಿದ್ಯಾರ್ಥಿಗಳಿಗೆ ಸಚಿವ ಸಂತೋಷ ಲಾಡ್ ಸಂತೋಷ ಲಾಡ್ ಪೌಂಡೇಶನ್ ವತಿಯಿಂದ ತಲಾ ₹10 ಸಾವಿರ ಪ್ರೋತ್ಸಹಧನ ನೀಡಿದರು. ಡಿಡಿಪಿಐ ಎಸ್.ಎಸ್. ಕೆಳದಿಮಠ, ಎಲ್ಲ ಕ್ಷೇತ್ರಶಿಕ್ಷಣಾಧಿಕಾರಿಗಳು, ಪ್ರಾಥಮಿಕ, ಪ್ರೌಢಶಾಲೆಗಳ ಪ್ರಧಾನ ಗುರುಗಳು, ಮುಖ್ಯೋಪಾಧ್ಯಾಯರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಇದ್ದರು.