ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಜಾತಿ ಹೆಸರಲ್ಲಿ ಸಂಘರ್ಷ ಮಾಡುವುದನ್ನು ಬಿಟ್ಟು, ಹಿಂದೂ ಧರ್ಮದ ಉಳಿವಿಗೆ ಮುಂದಾಗಬೇಕು. ಧರ್ಮ ಉಳಿದರೆ ಮಾತ್ರ ನಮಗೆ ಉಳಿಗಾಲ ಇದೆ ಎಂದು ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ ಕರೆ ನೀಡಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕ ಹಾಗೂ ನಾಟ್ಯಶ್ರೀ ನೃತ್ಯಾಲಯ ವತಿಯಿಂದ ನಗರದ ಗುಂಪಾ ರಸ್ತೆಯಲ್ಲಿನ ನಾಟ್ಯಶ್ರೀ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ‘ರಾಷ್ಟ್ರ ನಿರ್ಮಾಣದಲ್ಲಿ ಸಾಹಿತ್ಯದ ಕೊಡುಗೆ’ ಕುರಿತಾದ ಉಪನ್ಯಾಸ ಹಾಗೂ ಭರತನಾಟ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಪೂರ್ವಜರ ತ್ಯಾಗ, ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಭಾರತೀಯರೆಲ್ಲರೂ ಸಂಘಟಿತರಾಗಬೇಕು. ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದೇ ಸಾಹಿತ್ಯ. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಸಂಚಲನ ಉಂಟು ಮಾಡಿದ್ದ ವೀರ ಸಾವರಕರ್ ಅವರ ಪುಸ್ತಕವನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿದ್ದು ಸಾಹಿತ್ಯದ ಶಕ್ತಿ ಎಂತಹದ್ದು ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದರು.ರಾಮಾಯಣ, ಮಹಾಭಾರತ ದಿಂದ ಆಧುನಿಕ ಸಾಹಿತ್ಯದವರೆಗೂ ಸಾಹಿತ್ಯಗಳು ಮೌಲ್ಯಯುತ ಜೀವನ ಕಟ್ಟಿಕೊಳ್ಳಲು ನೆರವಾಗುತ್ತ ಬಂದಿವೆ. ಹೀಗಾಗಿ ಪಾಲಕರು ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕು ಎಂದು ತಿಳಿಸಿದರು.
ವಿದ್ಯಾರಣ್ಯ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಬಿಜೆಪಿ ಮುಖಂಡ ಈಶ್ವರಸಿಂಗ ಠಾಕೂರ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷೆ ಭಾರತಿ ವಸ್ತ್ರದ, ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕ ಕೆ.ಸತ್ಯಮೂರ್ತಿ, ಪ್ರಮುಖರಾದ ಬಿ.ಜಿ.ಶೆಟಕಾರ್, ರಾಮಕೃಷ್ಣ ಸಾಳೆ, ನಾರಾಯಣ ಮುಖೇಡಕರ್, ಪಾಂಡುರಂಗ ಪಾಂಚಾಳ, ಶಿವಯ್ಯ ಸ್ವಾಮಿ, ರೇಖಾ ಅಪ್ಪಾರಾವ್ ಸೌದಿ, ಉಮಾಕಾಂತ ಮೀಸೆ, ಶಿವಕುಮಾರ ಕಟ್ಟೆ, ಅನೀಲಕುಮಾರ ದೇಶಮುಖ, ಸಂತೋಷಕುಮಾರ ಮಂಗಳೂರೆ, ಜಯದೇವಿ ಯದಲಾಪುರೆ ಮತ್ತಿತರರು ಇದ್ದರು.ನಾಟ್ಯಶ್ರೀ ನೃತ್ಯಾಲಯದ ವಿದ್ಯಾರ್ಥಿಗಳು ಆಕರ್ಷಕ ಭರತ ನಾಟ್ಯ ಹಾಗೂ ಕೋಲಾಟ ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು. ಭಾನುಪ್ರಿಯಾ ಅರಳಿ ಹಾಗೂ ತಂಡದವರು ನಾಡಗೀತೆ ಹಾಡಿದರು. ದೇವಿದಾಸ ಜೋಶಿ ಹಾಗೂ ಬಸವರಾಜ ಮೂಲಗೆ ನಿರೂಪಿಸಿದರು.
ತಾಯಂದಿರು ಮಕ್ಕಳಲ್ಲಿ ರಾಷ್ಟ್ರಭಕ್ತಿ ಬೆಳೆಸಲಿ:ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು. ಅವರಲ್ಲಿ ರಾಷ್ಟ್ರಭಕ್ತಿ ಬೆಳೆಸಬೇಕು. ಪ್ರತಿ ಮನೆಯಲ್ಲೂ ರಾಮ, ಸೀತೆ ತಯಾರಾಗಬೇಕು. ಶಿವಾಜಿ ಮಹಾರಾಜರು ಇತಿಹಾಸ ರಚಿಸಲು ಅವರ ತಾಯಿ ಜೀಜಾಮಾತೆಯ ಸಂಸ್ಕಾರವೇ ಕಾರಣ ಎಂದು ಹೇಳಿದರು.