ಶೈಕ್ಷಣಿಕ ಸಮಸ್ಯೆ ಬಿಟ್ಟು ಪಕ್ಷದ ಸಿಸಿದ್ಧಾಂತಗಳಿಗೆ ಮಣೆ

| Published : May 20 2024, 01:35 AM IST

ಶೈಕ್ಷಣಿಕ ಸಮಸ್ಯೆ ಬಿಟ್ಟು ಪಕ್ಷದ ಸಿಸಿದ್ಧಾಂತಗಳಿಗೆ ಮಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಶಿಕ್ಷಣ, ಶಿಕ್ಷಕ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಎಂಎಲ್‌ಸಿ ಗಳ ಕಾರ್ಯವೈಖರಿ ಎಂಬ ವಿಷಯದ ಸಂವಾದ ಕಾರ್ಯಕ್ರಮನ್ನು ಬಿ.ಪಿ.ತಿಪ್ಪೇಸ್ವಾಮಿ ಉದ್ಘಾಟಿಸಿದರು.

ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ತಿಪ್ಪೇಸ್ವಾಮಿ ವಿಷಾಧ

ಹಣ, ಪ್ರಚಾರದ ಕೌಶಲ್ಯವಿದ್ದರೆ ವಿಪ ಚುನಾವಣೆ ಗೆಲ್ಲೋದು ಸುಲಭ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಹಣ ಮತ್ತು ಪ್ರಚಾರದ ಕೌಶಲ್ಯವಿದ್ದರೆ ವಿಧಾನಪರಿಷತ್ ಚುನಾವಣೆ ಗೆಲ್ಲುವುದು ಸುಲಭ. ಶಿಕ್ಷಣ ಮತ್ತು ಶಿಕ್ಷಕರು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಿಟ್ಟು, ತಮ್ಮ ಪಕ್ಷದ ಸಿದ್ಧಾಂತ ಕಾರ್ಯಕ್ರಮಗಳಿಗೆ ಹೋರಾಡುವುದೇ ಶಿಕ್ಷಕ ಕ್ಷೇತ್ರದ ಎಂಎಲ್‍ಸಿಗಳ ಕಾಯಕ ವಾಗಿರುವುದು ದುರಂತದ ಸಂಗತಿ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಶಿಕ್ಷಣ, ಶಿಕ್ಷಕ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಎಂಎಲ್‌ಸಿ ಗಳ ಕಾರ್ಯವೈಖರಿ ಎಂಬ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಕ್ಷೇತ್ರದ ಚುನಾವಣೆ ಭರಾಟೆ ಭಯಾನಕ ಸನ್ನಿವೇಷ ಸೃಷ್ಟಿಸಿದೆ. ಶೈಕ್ಷಣಿಕ ಸಮಸ್ಯೆಗಳ ಹೊರತಾಗಿ ಹಣ ಮತ್ತು ವೈಯುಕ್ತಿಕ ಪ್ರಾಭಲ್ಯ ಪ್ರಧಾನವಾಗಿದೆ. ಅಚ್ಚರಿ ಎಂದರೆ ಇಲ್ಲಿಯವರೆಗೆ ವಿಪ ಸದಸ್ಯರಾಗಿದ್ದವರು ಆರೋಗ್ಯ ಸಂಜೀವಿನಿ ಸೌಲಭ್ಯವನ್ನು ಸರಕಾರಿ ನೌಕರರಿಗೆ ನೀಡುವಂತೆ ಅನುದಾನಿತ ಶಾಲಾ ಕಾಲೇಜು ನೌಕರರಿಗೂ ದೊರಕದೇ ಇರುವುದರ ಬಗ್ಗೆ ಒಂದು ದಿನವೂ ತಲೆಕೆಡಿಸಿಕೊಂಡಿಲ್ಲ. ವಯೋನಿವೃತ್ತಿಯಾದಾಗ ಜೀವನ ಭದ್ರತೆಗೆ ಅವಶ್ಯಕವಾದ ಓಪಿಎಸ್ ಪಿಂಚಣಿ ನೀಡುವುದಿಲ್ಲವೆಂದು ಬಿಜೆಪಿ ಸರಕಾರ ಹೇಳಿದಾಗಲೂ ನಮ್ಮ ಶಿಕ್ಷಕ ಕ್ಷೇತ್ರದ ಎಂಎಲ್‍ಸಿಗಳು ಮೌನವಾಗಿ ಬಿಡುತ್ತಾರೆ ಎಂದರು.

ಸಮಾಜದ ಪ್ರಬಲ ಜಾತಿಯ ಈಡಬ್ಲ್ಯೂಎಸ್ ವರ್ಗದ ವಿದ್ಯಾರ್ಥಿಗಳಿಗೆ ಆದಾಯ ಮಿತಿ 10 ರು. ಲಕ್ಷ ಕ್ಕೆ ಹೆಚ್ಚಿಸಿ ಶತಮಾನಗಳಿಂದ ವಿದ್ಯಾಭ್ಯಾಸಕ್ಕೆ ವಂಚಿತರಾದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಆದಾಯ ಮಿತಿ 2.50 ರು. ಲಕ್ಷಕ್ಕೆ ಮಿತಿಗೊಳಿಸಿದಾಗಲೂ ದಲಿತ ವಿದ್ಯಾರ್ಥಿಗಳಿಗೆ ಆದ ಅನ್ಯಾಯ ಖಂಡಿಸಲಿಲ್ಲ. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಸಂವಿಧಾನಾತ್ಮಕ ಜಾತಿ ಪ್ರಮಾಣ ಹೊಂದಿದ್ದರೂ ಶಾಲಾ ಕಾಲೇಜು ಪ್ರವೇಶ ಪಡೆಯುವಾಗ ಕಡ್ಡಾಯವಾಗಿ ಪೂರ್ಣ ಶುಲ್ಕ ಕಟ್ಟಬೇಕೆಂಬ ಶಿಕ್ಷಣ ವಿರೋಧಿ ಕಾಯ್ದೆ ಬಗ್ಗೆ ಧ್ವನಿಯೆತ್ತಲಿಲ್ಲ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಾಗ 5 ರೂಪಾಯಿ ದೇಣಿಗೆ ರೂಪದಲ್ಲಿ ನೀಡಬೇಕೆಂಬ ಸಂವಿಧಾನಾತ್ಮಕ ಕಡ್ಡಾಯ ಶಿಕ್ಷಣ ನೀತಿಗೆ ವಿರೋಧವಾದ ಕಾನೂನು ರಚಿಸಿದಾಗಲೂ ಮೌನವಾಗಿರುತ್ತಾರೆ ಎಂದರು.

ಮಕ್ಕಳು ಹಿಜಾಬ್ ಧರಿಸಿ ಬರಬಾರದೆನ್ನುವ, ಪಠ್ಯಪುಸ್ತಕದಲ್ಲಿ ಜಾತ್ಯತೀತ ವಿಚಾರಗಳನ್ನು ಕಿತ್ತು ಹಾಕುವ, ಮಂದಿರ ಮಸೀದಿ ಕಿತ್ತಾಟದ ಬಗ್ಗೆ, ಶಾಲಾಮಕ್ಕಳಿಗೆ ಮೊಟ್ಟೆ ಕೊಡಬೇಡಿ ಎನ್ನುವ, ಶೈಕ್ಷಣಿಕ ವಿರೋಧಿ ವಿಚಾರಗಳಿಗೆ ಹೆಚ್ಚು ತಲೆ ಕೆಡಿಸಿ ಕೊಳ್ಳುತ್ತಿದ್ದಾರೆ. ತಮ್ಮ ಪಕ್ಷದ ತತ್ವ ಸಿದ್ಧಾಂತಗಳ ಅನುಷ್ಟಾನಕ್ಕಾಗಿಯೇ ಪ್ರತಿದಿನವೂ ಹೋರಾಟ ಮಾಡುತ್ತಿದ್ದಾರೆ. ಪ್ರಜ್ಞಾವಂತ ಶಿಕ್ಷಕ ಮತದಾರರು ಕ್ರಿಯಾಶೀಲರಾದ, ಜಾತ್ಯತೀತ ಮನೋಭಾವದ, ಸಂವಿಧಾನ ಪರ ಇರುವಂತಹ ಶಿಕ್ಷಣ ಪ್ರೇಮಿಗಳನ್ನು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲಿಸುವಂತಾಗಬೇಕು. ಪ್ರಜಾಪ್ರಭುತ್ವ ಗೆಲ್ಲಿಸ ಬೇಕಾದದ್ದು ಸಾಮಾನ್ಯ ನಾಗರೀಕರಿಗಿಂತ ಶಿಕ್ಷಕರ ಜವಾಬ್ದಾರಿಯೇ ಹೆಚ್ಚಾಗಿದೆ ಎಂಬುದನ್ನು ಮರೆಯಬಾರದು ಎಂದರು.

ಈ ವೇಳೆ ಪ್ರಾಂಶುಪಾಲ ಜೆ.ಸಿದ್ದಲಿಂಗಮ್ಮ, ನಿವೃತ್ತ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಬಿ.ಪಿ.ಪ್ರೇಮ್‍ನಾಥ್ ಮಾತನಾಡಿದರು. ಲಾಯರ್ ಬೆನಕನಹಳ್ಳಿ ಚಂದ್ರಪ್ಪ, ಬೆಸ್ಕಾಂ ತಿಪ್ಪೇಸ್ವಾಮಿ, ಬಿಎಸ್‍ಐ ನನ್ನಿವಾಳ ರವಿಕುಮಾರ್, ಚಳ್ಳಕೆರೆ ಹರೀಶ್, ಶಿಕ್ಷಕಿ ಗಿರಿಜಾ, ಬನ್ನಿ ಕೋಡ್ ರಮೇಶ್ ಇತರರಿದ್ದರು.