ಸಾರಾಂಶ
ಬರ ಅಧ್ಯಯನ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಸಿದ್ದರಾಮಯ್ಯಗೆ ಆಗ್ರಹ
ಕನ್ನಡಪ್ರಭ ವಾರ್ತೆ ದಾವಣಗೆರೆಹೊಸ ವರ್ಷದ ಹಿನ್ನೆಲೆಯಲ್ಲಿ ಬೂಟಾಟಿಕೆಗಾಗಿ ನಾನು ಬರ ಅಧ್ಯಯನ ಪ್ರವಾಸ ಕೈಗೊಂಡಿಲ್ಲ. ರೈತರ ಬಗ್ಗೆ ಕಾಳಜಿಯಿಂದ ಬರ ಅಧ್ಯಯನ ಮಾಡುತ್ತಿದ್ದು, ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಸರ್ಕಾರದ ಗಮನ ಸೆಳೆದು, ನ್ಯಾಯಕೊಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಜಮ್ಮಾಪುರ ಗ್ರಾಮದ ದಲಿತ ರೈತ ಕುಟುಂಬವಾದ ಮರುಳಪ್ಪ, ಸಿದ್ದಮ್ಮನವರ ಮೆಕ್ಕೆಜೋಳ ಕೈಕೊಟ್ಟಿದ್ದ ಹೊಲಕ್ಕೆ ಭೇಟಿ ನೀಡಿದ್ದ ವೇಳೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಅಂದರೆ ಬರೀ ಲಿಂಗಾಯತರಷ್ಟೇ ಇಲ್ಲ. ದಲಿತರು, ಹಿಂದುಳಿದವರು ಹೀಗೆ ಎಲ್ಲಾ ಜಾತಿ, ಧರ್ಮದವರೂ ಇದ್ದಾರೆ ಎಂದರು.ದಲಿತ ಕುಟುಂಬದ ರೈತರ ಜಮೀನಿಗೆ ಇಲ್ಲಿ ಭೇಟಿ ನೀಡಿದ್ದೇನೆ. ಬಡ ರೈತ ದಂಪತಿ ಕಣ್ಣೀರು ನಮ್ಮ ಮನಸ್ಸಿಗೂ ನೋವುಂಟು ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆ ಶುರು ಮಾಡಿದ್ದಾರೆ. ಅಲ್ಪ ಸಂಖ್ಯಾತರಿಗೆ ₹10 ಸಾವಿರ ಕೋಟಿ ಅನುದಾನ ನೀಡುವ ಘೋಷಿಸಿದ್ದಾರೆ. ಹೀಗೆ ಸಾವಿರಾರು ಕೋಟಿ ಅನುದಾನ ನೀಡುತ್ತಿರುವ ಸಿದ್ದರಾಮಯ್ಯ ರೈತರ ಬಗ್ಗೆಯೂ ಗಮನಹರಿಸಲಿ, ಅನ್ನದಾತರ ಸಂಕಷ್ಟಕ್ಕೂ ಸ್ಪಂದಿಸಲಿ ಎಂದು ಹೇಳಿದರು.
ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಕೊಡುತ್ತೇವೆನ್ನುವಾಗ ಕೇಂದ್ರದ ಕಡೆಗೆ ಸಿದ್ದರಾಮಯ್ಯ ಕೈ ತೋರಿಸುವುದಿಲ್ಲ. ಬರದ ಬಗ್ಗೆ, ಸಂಕಷ್ಟಕ್ಕೆ ತುತ್ತಾದ ರೈತರಿಗೆ ಬೆಳೆ ಹಾನಿ ಪರಿಹಾರದ ಬಗ್ಗೆ ಕೇಳಿದಾಗ ಮಾತ್ರ ತಪ್ಪದೇ ಕೇಂದ್ರದತ್ತ ಬೊಟ್ಟು ಮಾಡುತ್ತಾರೆ. ಸಿದ್ದರಾಮಯ್ಯನವರಿಗೆ ಒಂದು ಮಾತು ಹೇಳಲಿಚ್ಛಿಸುತ್ತೇನೆ. ಮುಖ್ಯಮಂತ್ರಿಗಳೇ ನೀವು ಚುನಾವಣಾ ರಾಜಕಾರಣವನ್ನು ನಂತರ ಮಾಡಿಕೊಳ್ಳಿ. ಸದ್ಯಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ, ಬರ ಹೊಡೆತದಿಂದ ತತ್ತರಿಸಿರುವ ರೈತರಿಗೆ ಮೊದಲು ಪರಿಹಾರ ನೀಡುವ ಕೆಲಸ ಮಾಡಿ ಎಂದು ತಿಳಿಸಿದರು.ರೈತರ ಬಳಿ ನಾವು ಹೋದಾಗ ಅನ್ನದಾತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಬೆಳೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ನೀವು ರೈತರ ಬಗ್ಗೆ ಬರೀ ಮಾತನಾಡುವುದಷ್ಟೇ ಅಲ್ಲ, ಅದನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಮಾಡಿದಂತೆ ನೇರವಾಗಿ ರೈತರ ಖಾತೆಗೆ ಬರ ಪರಿಹಾರ, ಬೆಳೆ ನಷ್ಟ ಪರಿಹಾರ ಜಮಾ ಮಾಡಬೇಕು ಎಂದು ವಿಜಯೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲಹೆ ನೀಡಿದರು.
ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಹರಿಹರ ಶಾಸಕ ಬಿ.ಪಿ.ಹರೀಶ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಉಪಾಧ್ಯಕ್ಷರಾದ ಟಿ.ಶ್ರೀನಿವಾಸ ದಾಸಕರಿಯಪ್ಪ, ಮಂಜಾನಾಯ್ಕ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಮಾಜಿ ಶಾಸಕರಾದ ಪ್ರೊ.ಎನ್.ಲಿಂಗಣ್ಣ, ಎಂ.ಬಸವರಾಜ ನಾಯ್ಕ, ಯಶವಂತರಾವ್ ಜಾಧವ್, ಜಿ.ಎಸ್.ಅನಿತ್‌ಕುಮಾರ, ಪಿ.ಸಿ.ಶ್ರೀನಿವಾಸ ಭಟ್, ಡಾ.ಟಿ.ಜಿ.ರವಿಕುಮಾರ, ರಾಜನಹಳ್ಳಿ ಶಿವಕುಮಾರ, ಜಿ.ಎಸ್.ಶ್ಯಾಮ ಮಾಯಕೊಂಡ, ಬಿ.ಎಂ.ಸತೀಶ ಕೊಳೇನಹಳ್ಳಿ, ಲೋಕಿಕೆರೆ ನಾಗರಾಜ, ಬಿ.ಟಿ.ಸಿದ್ದಪ್ಪ, ಕೆ.ಪ್ರಸನ್ನಕುಮಾರ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ, ಹೆಬ್ಬಾಳ್ ಮಹೇಂದ್ರ, ಶ್ಯಾಗಲೆ ದೇವೇಂದ್ರಪ್ಪ, ಇತರರಿದ್ದರು.ಸಿಎಂರಿಂದ ಅಲ್ಪಸಂಖ್ಯಾತರ ಕಡೆಗೆ ಆದ್ಯತೆ
ಜಮ್ಮಾಪುರದ ಬಡ ರೈತರಾದ ಮರುಳಪ್ಪ, ಸಿದ್ದಮ್ಮ ದಂಪತಿಗೆ 4 ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಯೇ ಆಧಾರ. ಮಳೆ ಇಲ್ಲದೇ ಬೆಳೆ ಕೈಕೊಟ್ಟಿದೆ. ಇಂತಹ ಲಕ್ಷಾಂತರ ರೈತ ಕುಟುಂಬಗಳು ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಆ ರೈತರ ಬಗ್ಗೆಯೂ ಗಮನಹರಿಸಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಆದ್ಯತೆ ಕೇವಲ ಅಲ್ಪಸಂಖ್ಯಾತರ ಕಡೆಗೆ ಮಾತ್ರ ಇದೆ. ಹಿಂದೂಗಳ ಬಗ್ಗೆ ಯಾವುದೇ ಆದ್ಯತೆ ನೀಡುತ್ತಿಲ್ಲ. ಹಿಂದೂಗಳೆಂದರೆ ಕೇವಲ ಲಿಂಗಾಯತ, ಬ್ರಾಹ್ಮಣರಷ್ಟೇ ಅಲ್ಲ, ಎಲ್ಲಾ ಪರಿಶಿಷ್ಟರು, ಹಿಂದುಳಿದವರೂ ಸೇರುತ್ತಾರೆ.ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ದಲಿತ ರೈತ ದಂಪತಿ ಕಣ್ಣೀರಿಗೆ ಮರುಗಿದ ವಿಜಯೇಂದ್ರಬರದಿಂದ ಮೆಕ್ಕೆಜೋಳ ಬೆಳೆ ಕೈಕೊಟ್ಟಿದ್ದಕ್ಕೆ ಮರುಳಪ್ಪ-ಸಿದ್ದಮ್ಮ ರೈತ ದಂಪತಿ ಅಳಲುಬರ ಪೀಡಿತ ದಾವಣಗೆರೆ ತಾಲೂಕಿನ ಜಮ್ಮಾಪುರ ಗ್ರಾಮಕ್ಕೆ ಬರ ಅಧ್ಯಯನ ಪ್ರವಾಸ ಕೈಗೊಂಡ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ಬೆಳೆ ಹಾನಿಗೆ ತುತ್ತಾಗಿ ರೈತರು ಕಣ್ಣೀರು ಹಾಕುವ ಮೂಲಕ ತಮ್ಮ ಅಳಲು ತೋಡಿಕೊಂಡರು. ಮಾಯಕೊಂಡ ಕ್ಷೇತ್ರದ ಜಮ್ಮಾಪುರ ಗ್ರಾಮದ ಪರಿಶಿಷ್ಟ ರೈತ ದಂಪತಿ ಮರುಳಪ್ಪ, ಸಿದ್ದಮ್ಮ ಜಮೀನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿದ್ದ ವೇಳೆ ರೈತ ದಂಪತಿ ಕಣ್ಣೀರು ಹಾಕಿದರು. ರೈತ ಮಹಿಳೆ ಸಿದ್ದಮ್ಮ ಮಾತನಾಡಿ, ತಮ್ಮ ಕುಟುಂಬದ 4 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದೆವು. ಆದರೆ, ಮಳೆ ಕೈಕೊಟ್ಟಿದ್ದರಿಂದ ಸಾಲದ ಸುಳಿಗೆ ಸಿಲುಕಿದ್ದೇ ವೆ. ಇಡೀ ಮನೆ ಮಂದಿ ಆಸೆಯಿಂದ ಹೊಲದಲ್ಲಿ ಕೆಲಸ ಮಾಡಿ, ಮೆಕ್ಕೆಜೋಳ ಬಿತ್ತಿದ್ದೆವು. ಈಗ ಮಳೆ ಕೈಕೊಟ್ಟಿದ್ದರಿಂದ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ ಎಂದು ವಿಜಯೇಂದ್ರಗೆ ವಿವರಿಸಿದರು.ಮತ್ತೆ ಮಳೆ ಕೈಕೊಟ್ಟು ಸಾಲದ ಸುಳಿಗೆ ಸಿಲುಕಿರುವ ಮರುಳಪ್ಪ, ಸಿದ್ದಮ್ಮ ದಂಪತಿ ಪರಿಸ್ಥಿತಿಗೆ ಮರುಗಿದ ವಿಜಯೇಂದ್ರ ಕಣ್ಣೀರು ತುಂಬಿಕೊಂಡಿದ್ದ ಬಡ ರೈತನಿಗೆ ಹಸಿರು ಶಾಲು ಹಾಕಿ, ಆ ದಂಪತಿಗೆ ಹಣ್ಣಿನ ಪುಟ್ಟಿ ನೀಡಿ, ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸಿದರು.
ಈ ವೇಳೆ ಪಕ್ಕದಲ್ಲೇ ಇದ್ದ ಸಂಸದ ಡಾ.ಜಿ.ಎಂ.ಸಿದ್ದೇಶ್ವರರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ವಿಜಯೇಂದ್ರ ಮನವಿ ಮಾಡಿದರು. ಬರ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಧಾವಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೂ ಮನವಿ ಮಾಡುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದರು.ಪ್ರತಾಪಸಿಂಹ ತಮ್ಮನ ಪ್ರಕರಣ ರಾಜಕೀಯ ಪ್ರೇರಿತ
ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಹತಾಶೆ ಭಾವನೆಯಲ್ಲಿ ಮೈಸೂರು ಸಂಸದ ಪ್ರತಾಪ ಸಿಂಹ ಸಹೋದರನ ಮೇಲೆ ರಾಜಕೀಯ ಪ್ರೇರಿತ ಪ್ರಕರಣ ದಾಖಲಿಸಿದ್ದು, ಈ ವಿಚಾರ ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಮೈಸೂರಿನಲ್ಲಿ ಚುನಾವಣಾ ರಾಜಕಾರಣ ನಡೆಯುತ್ತಿದ್ದು, ಪ್ರತಾಪ್ ಸಿಂಹ ತಮ್ಮನ ಪರವಾಗಿ ನಾವು ಇದ್ದೇವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಸಂಸದ ಪ್ರತಾಪ ಸಿಂಹ ಹೆಸರು ಕೆಡಿಸಲು ಇಂತಹದ್ದೆಲ್ಲಾ ಮಾಡುತ್ತಿದ್ದಾರೆ. ಹತಾಶೆಯಿಂದ ಕಾಂಗ್ರೆಸ್ ಏನೆಲ್ಲಾ ಮಾಡುತ್ತಿದೆಯೆಂಬುದು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.