ಕೀಳರಿಮೆ ಬಿಟ್ಟು ಪ್ರಬುದ್ಧ ಕನ್ನಡ ಭಾಷೆ ಪ್ರೀತಿಸಿ

| Published : Jun 30 2024, 12:51 AM IST

ಕೀಳರಿಮೆ ಬಿಟ್ಟು ಪ್ರಬುದ್ಧ ಕನ್ನಡ ಭಾಷೆ ಪ್ರೀತಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಕನ್ನಡದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ. ಕನ್ನಡದ ಬಗ್ಗೆ ಕೀಳರಿಮೆ ಬಿಟ್ಟು ಪ್ರಬುದ್ಧವಾದ ಕನ್ನಡ ಭಾಷೆಯನ್ನು ಪ್ರೀತಿಸಬೇಕು ಎಂದು ನಿವೃತ್ತ ಬೆಳಗಾವಿ ಪ್ರಾದೇಶಿಕ ಆಯುಕ್ತ ಮಹಾಂತೇಶ ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕನ್ನಡದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ. ಕನ್ನಡದ ಬಗ್ಗೆ ಕೀಳರಿಮೆ ಬಿಟ್ಟು ಪ್ರಬುದ್ಧವಾದ ಕನ್ನಡ ಭಾಷೆಯನ್ನು ಪ್ರೀತಿಸಬೇಕು ಎಂದು ನಿವೃತ್ತ ಬೆಳಗಾವಿ ಪ್ರಾದೇಶಿಕ ಆಯುಕ್ತ ಮಹಾಂತೇಶ ಹಿರೇಮಠ ಹೇಳಿದರು.

ನಗರದ ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆ ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು, ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದುಕೊಂಡಿದೆ. 2005ರವರೆಗೂ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾರತೀಯ ಭಾಷೆಗಳಲ್ಲಿ ಒಂದಾಗಿದೆ. ಕನ್ನಡದ ಗತ ಪರಂಪರೆ ಹಾಗೂ ಸಂಸ್ಕೃತಿಯನ್ನು ಅರಿಯುವುದು ಅಗತ್ಯವಾಗಿದೆ. ಇಂದು ಕನ್ನಡ ಕ್ರಿಯಾಶೀಲ ಭಾಷೆಯಾಗಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ಪ್ರಬುದ್ಧ ಭಾಷಾ ಸಂಪತ್ತನ್ನು ಹೊಂದಿರುವ ಕನ್ನಡದಲ್ಲಿಯೇ ಐಎಎಸ್, ಕೆಎಎಸ್ ಹಾಗೂ ಮತ್ತಿತರ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ. ಇಂದು ಸೇವೆ ಸಲ್ಲಿಸುತ್ತಿರುವ ರಾಜ್ಯದ ಅನೇಕ ಐಎಎಸ್ ಅಧಿಕಾರಿಗಳು ಕನ್ನಡದಲ್ಲಿಯೇ ಪರೀಕ್ಷೆ ಬರೆದು ಆಯ್ಕೆಯಾಗಿರುವ ಉದಾಹರಣೆಗಳು ಇವೆ. ಕನ್ನಡ ಭಾಷೆಯನ್ನು ಪ್ರೀತಿಸುವ ಗೌರವಿಸುವ ಸೌಜನ್ಯತೆ ಬೆಳೆಸಿಕೊಂಡಾಗ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಸರ್ಕಾರದ ಎಲ್ಲ ವ್ಯವಹಾರಗಳು ಕನ್ನಡದಲ್ಲಿಯೇ ನಡೆಯುವುದನ್ನು ಗಮನಿಸಬೇಕು. ಇಂದು ದೇಶದಲ್ಲಿಯೇ ಮಹಿಳೆಯರಿಗೆ ಸರ್ಕಾರಿ ನೌಕರಿಯಲ್ಲಿ ಹೆಚ್ಚು ಮೀಸಲಾತಿ ನೀಡಿದ ಗೌರವ ಕರ್ನಾಟಕಕ್ಕೆ ಸಲ್ಲುತ್ತದೆ. ಅಂದರೆ ಸರ್ಕಾರ ಕನ್ನಡವನ್ನು ಅನುಷ್ಠಾನಕ್ಕೆ ತರುವ ಮೂಲಕ ಕನ್ನಡವನ್ನು ಉಳಿಸುವ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ ಎಂದರು.

ನಗರದ ಲಿಂಗರಾಜ ಕಾಲೇಜಿನಲ್ಲಿ ಕನ್ನಡ ಹಬ್ಬ ಆಚರಿಸುತ್ತಿರುವುದು ಅಭಿಮಾನದ ಸಂಗತಿ. ಇಂದು ವಿದ್ಯಾರ್ಥಿಗಳಲ್ಲಿ ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ಜನಪದ, ನೃತ್ಯ, ಚಿತ್ರಕಲೆಯಂತಹ ಹಲವಾರು ಸಾಂಸ್ಕೃತಿಕ ನೆಲೆಗಳನ್ನು ಬಿತ್ತುವ ಕೆಲಸ ಮಾಡುತ್ತಿರುವುದು ಮೆಚ್ಚುವ ವಿಷಯ. ಈ ಪರಂಪರೆ ಲಿಂಗರಾಜ ಕಾಲೇಜಿನಲ್ಲಿ ಮುಂದುವರಿಯಬೇಕು ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳ ಹೃದಯದಲ್ಲಿ ಕನ್ನಡದ ಅಸ್ಮಿತೆಯನ್ನು ಮೂಡಿಸುವ ನಿಟ್ಟಿನಲ್ಲಿ ಹಲವಾರು ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಡಾ.ಎಚ್.ಎಂ.ಚೆನ್ನಪ್ಪಗೋಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಹೇಶ ಗುರನಗೌಡರ, ಸಿದ್ಧನಗೌಡ ಪಾಟೀಲ ನಿರೂಪಿಸಿದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಆರ್.ಎಸ್.ಸಂಬರಗಿಮಠ, ಪ್ರಾಚಾರ್ಯೆ ಪ್ರೊ.ಗಿರಿಜಾ ಹಿರೇಮಠ, ವಿದ್ಯಾರ್ಥಿ ಪ್ರತಿನಿಧಿ ಅಭಿಷೇಕ ಮಾಳಗೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕನ್ನಡ ಕಲರವ: ಲಿಂಗರಾಜ ಮಹಾವಿದ್ಯಾಲಯವು ಕನ್ನಡ ಭಾವುಟ ಹಾಗೂ ಹೂವುಗಳಿಂದ ಅಲಂಕೃತಗೊಂಡಿತ್ತು. ನಾಡದೇವಿ ಭುವನೇಶ್ವರಿಯ ಭವ್ಯ ಮೂರ್ತಿಯನ್ನು ಆಕರ್ಷಣೀಯವಾಗಿ ಸಿಂಗರಿಸಲಾಗಿತ್ತು. ಎಲ್ಲಿ ನೋಡಿದರೂ ಕನ್ನಡದ ಕಲರವ ಮನೆ ಮಾಡಿತ್ತು. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡಿಗೆಯಲ್ಲಿ ಆಗಮಿಸಿದ್ದರು. 30ಕ್ಕೂ ಹೆಚ್ಚು ಕಾಲೇಜುಗಳಿಂದ ಆಗಮಿಸಿದ್ದ ಸ್ಪರ್ಧಾಳುಗಳು ನೃತ್ಯ, ಹಾಡು, ಚಿತ್ರಕಲೆ, ಕಿರುಚಿತ್ರಗಳಂತಹ ಅನೇಕ ಸ್ಪರ್ಧೆಗಳಲ್ಲಿ ಕನ್ನಡವನ್ನು ಅರಳಿಸಿ ವಿಸ್ಮಯವನ್ನುಂಟು ಮಾಡಿದರು.

----------------------------

ಕೋಟ್‌

ಗಡಿಭಾಗದಲ್ಲಿ ಮೊದಲಿನಿಂದಲೂ ಕೆಎಲ್‌ಇ ಸಂಸ್ಥೆಯ ಕನ್ನಡವನ್ನು ಕಟ್ಟುವ ಹಾಗೂ ಬೆಳೆಸುವ ಕೆಲಸವನ್ನು ಮಾಡಿದೆ. ಡಾ.ಪ್ರಭಾಕರ ಕೋರೆಯವರು ಗಡಿಭಾಗದಲ್ಲಿ ಕನ್ನಡದ ಪೋಷಣೆಗೆ ನೀಡಿರುವ ಕೊಡುಗೆ ಅನುಪಮ. ಲಿಂಗರಾಜ ಮಹಾವಿದ್ಯಾಲಯ 1933 ರಿಂದಲೂ ಕನ್ನಡಿಗರ ಸಾಂಸ್ಕೃತಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

- ಎಂ.ಜಿ.ಹಿರೇಮಠ, ನಿವೃತ್ತ ಪ್ರಾದೇಶಿಕ ಆಯುಕ್ತ

--------------