ಸಾರಾಂಶ
ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಮಕ್ಕಳು ಚೆನ್ನಾಗಿ ಓದಿ ಉತ್ತಮ ಫಲಿತಾಂಶ ತರಬೇಕು ಎಂದು ಉದ್ಯಮಿ ಹಾಗೂ ಕನ್ನಡಪ್ರಭ ಯುವ ಆವೃತ್ತಿಯ ದಾನಿ ಪಿ.ಆರ್.ಸುಕುಮಾರ್ ಕರೆ ನೀಡಿದರು.
ಅವರು ಸೋಮವಾರ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಮಾಡಿ ಮಾತನಾಡಿದರು .ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲೂ ಉತ್ತಮ ಫಲಿತಾಂಶ ಬರುತ್ತಿದೆ. ಪ್ರತಿ ಪೋಷಕರಿಗೂ ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಕನಸು ಇರುತ್ತದೆ. ಕಷ್ಟಪಟ್ಟು ದುಡಿದು ಮಕ್ಕಳಿಗೆ ಶಿಕ್ಷಣ ಕೊಡಿಸು ತ್ತಾರೆ. ಕನ್ನಡ ಪ್ರಭ ಸಂಸ್ಥೆಯವರು ಮಕ್ಕಳ ಶೈಕ್ಷಣಿಕ ಅಭ್ಯುದಯಕ್ಕಾಗಿ ಕೇವಲ 1 ರು. ಯುವ ಆವೃತ್ತಿ ನೀಡುತ್ತಿದ್ದು ಮಕ್ಕಳು ಪ್ರತಿ ದಿನ ಕನ್ನಡಪ್ರಭ ಯುವ ಆವೃತ್ತಿ ಓದಬೇಕು. ಪ್ರತಿ ನಿತ್ಯ ಪತ್ರಿಕೆ ಓದುವುದರಿಂದ ಮಕ್ಕಳ ಜ್ಞಾನ ವೃದ್ಧಿಯಾಗಲಿದೆ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಲಕ್ಷ್ಮಣ ಶೆಟ್ಟಿ ಮಾತನಾಡಿ, ಕನ್ನಡಪ್ರಭ ಯುವ ಆವೃತ್ತಿಯನ್ನು ಪ್ರತಿ ಮಕ್ಕಳು ಉಪಯೋಗಿಸಿಕೊಂಡು ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಪಡೆದರೆ ಮಾತ್ರ ದಾನ ನೀಡಿದವರಿಗೂ ಸಂತೋಷ ಸಿಗಲಿದೆ. ಶಾಸಕ ಟಿ.ಡಿ.ರಾಜೇಗೌಡರು ಕರ್ನಾಟಕ ಪಬ್ಲಿಕ್ ಸ್ಕೂಲಿನ ಮೂಲಭೂತ ಸೌಕರ್ಯಕ್ಕೆ ಲಕ್ಷಾಂತರ ರು. ಅನುದಾನ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಉತ್ತಮ ಶಿಕ್ಷಕರಿದ್ದಾರೆ ಎಂದರು.
ಕನ್ನಡಪ್ರಭ ಪತ್ರಿಕೆ ತಾಲೂಕು ವರದಿಗಾರ ಯಡಗೆರೆ ಮಂಜುನಾಥ್ ಮಾತನಾಡಿ, ಎಸ್.ಎಸ್.ಎಲ್.ಸಿ.ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಕೇವಲ 1 ರು. ಕನ್ನಡಪ್ರಭ ಯುವ ಆವೃತ್ತಿ ನೀಡಲಾಗುತ್ತಿದೆ. ಮಕ್ಕಳಿಗೆ ದಾನಿಗಳಾದ ಪಿ.ಆರ್. ಸುಕುಮಾರ್ ಹಾಗೂ ಇಂದಿರಾ ನಗರ ರಘು ಯುವ ಆವೃತ್ತಿಯನ್ನು ಉಚಿತವಾಗಿ ನೀಡಿದ್ದಾರೆ. ಯುವ ಆವೃತ್ತಿ 250 ದಿನ ಬರಲಿದ್ದು ಮಕ್ಕಳು ಪ್ರತಿ ದಿನ ಓದಬೇಕು. ಪ್ರತಿಯೊಬ್ಬರೂ ದಿನ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆ ಓದುತ್ತಾ ಬಂದರೆ, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶ, ವಿದೇಶಗಳ ಸುದ್ದಿ ತಿಳಿಯುತ್ತದೆ. ದಿನ ಪತ್ರಿಕೆಗಳು ನಿಖರವಾದ ಸುದ್ದಿ ನೀಡುತ್ತದೆ ಎಂದರು.ಕರ್ನಾಟಕ ಪಬ್ಲಿಕ್ ಸ್ಕೂಲಿನ ಎಸ್.ಡಿ.ಎಂ.ಸಿ.ಸದಸ್ಯ ಉದಯ ಮಾತನಾಡಿ, ಮಕ್ಕಳು ದಿನ ಪತ್ರಿಕೆಗಳನ್ನು ಓದಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ಈಗ ದಾನಿಗಳು ಕೊಟ್ಟಿದ್ದನ್ನು ಉಪಯೋಗಿಸಿ ಮುಂದೆ ದೊಡ್ಡವರಾದ ಮೇಲೆ ನೀವು ಕೂಡಾ ಉನ್ನತ ಸ್ಥಾನ ತಲುಪಿ ಬೇರೆಯವರಿಗೆ ಇದೇ ರೀತಿ ದಾನ ಮಾಡಬೇಕು ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ಕನ್ನಡ ಪ್ರಭ ಯುವ ಆವೃತ್ತಿ ಇನ್ನೊಬ್ಬ ದಾನಿ ಇಂದಿರಾ ನಗರ ಎಸ್. ರಘು, ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ವಾಸಿಂ, ಕೆಪಿಎಸ್ ಉಪ ಪ್ರಾಂಶುಪಾಲ ರುದ್ರಪ್ಪ, ಸಹ ಶಿಕ್ಷಕ ಸಂದೀಪ್ ಇದ್ದರು. ಶಿಕ್ಷಕ ರಾಮಪ್ಪ ಕಾರ್ಯಕ್ರಮ ನಿರೂಪಿಸಿದರು.ಇದೇ ಸಂದರ್ಭದಲ್ಲಿ ಕನ್ನಡಪ್ರಭ ಯುವ ಆವೃತ್ತಿ ದಾನಿಗಳಾದ ಪಿ.ಆರ್.ಸುಕುಮಾರ್, ಇಂದಿರಾನಗರದ ರಘು ಹಾಗೂ ಕನ್ನಡಪ್ರಭ ವರದಿಗಾರ ಯಡಗೆರೆ ಮಂಜುನಾಥ್ ಅವರನ್ನು ಶಾಲೆಯಿಂದ ಸನ್ಮಾನಿಸಲಾಯಿತು.