ದೇಶದ ಸ್ವಾತಂತ್ರ್ಯ ನಂತರ ದೇಶಕ್ಕೆ ಬೇಕಾದ ನ್ಯಾಯ ಸಮ್ಮತ ಕಾನೂನು ರೂಪಿಸುವ ಸಂವಿಧಾನವನ್ನು ರಚನೆ ಮಾಡಬೇಕೆಂದು ಕರಡು ಸಮಿತಿಯನ್ನು ರಚಿಸಿ ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಲಿಖಿತ ಸಂವಿಧಾನ ರಚನೆ ಮಾಡಲಾಯಿತು.

ಕೂಡ್ಲಿಗಿ: ಎಲ್ಲರೂ ಜಾತಿ, ಧರ್ಮಗಳ ಸಂಕೋಲೆಯಿಂದ ಬಂಧಮಕ್ತವಾಗಿ ಬಾರತೀಯತೆ ಮೈಗೂಡಿಸಿಕೊಂಡು ಸಂಘಟಿತರಾದರೆ ಮಾತ್ರ ದೇಶದ ಉದ್ಧಾರ ಸಾಧ್ಯ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ ತಿಳಿಸಿದರು.

ಅವರು ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣ ಬಯಲು ರಂಗಮಂದಿರ ವೇದಿಕೆಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ 77ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ದೇಶದ ಸ್ವಾತಂತ್ರ್ಯ ನಂತರ ದೇಶಕ್ಕೆ ಬೇಕಾದ ನ್ಯಾಯ ಸಮ್ಮತ ಕಾನೂನು ರೂಪಿಸುವ ಸಂವಿಧಾನವನ್ನು ರಚನೆ ಮಾಡಬೇಕೆಂದು ಕರಡು ಸಮಿತಿಯನ್ನು ರಚಿಸಿ ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಲಿಖಿತ ಸಂವಿಧಾನ ರಚನೆ ಮಾಡಲಾಯಿತು. ನಮ್ಮ ದೇಶದ ಸಂವಿಧಾನವು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕೂಡ್ಲಿಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಯಿಂದ 150ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದರು.

ತಹಸೀಲ್ದಾರ್ ವಿ.ಕೆ. ನೇತ್ರಾವತಿ ಧ್ವಜಾರೋಹಣ ನೆರವೇರಿಸಿದ ನಂತರ ವೇದಿಕೆಯಲ್ಲಿ ಗಣರಾಜ್ಯೋತ್ಸವದ ಸಂದೇಶ ನೀಡಿದರು. ತಾಪಂ ಇಒ ಕೆ.ನರಸಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್, ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಬಿಇಒ ಮೈಲೇಶ ಬೇವೂರು, ಲೋಕೋಪಯೋಗಿ ಇಲಾಖೆಯ ಎಇಇ ನಾಗನಗೌಡ, ಬಿಸಿಎಂ ಅಧಿಕಾರಿ ಶ್ಯಾಮಪ್ಪ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಜಿಲಾನ್, ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಟಿ ಕೊತ್ಲಮ್ಮ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ ಎಸ್ ಜನ್ನು, ಸಾವಜ್ಜಿ ರಾಜೇಂದ್ರ ಪ್ರಸಾದ್, ಜಯರಾಮ್ ನಾಯಕ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಶಾಸಕರು, ತಹಶೀಲ್ದಾರ್ ಮಹಾತ್ಮ ಗಾಂಧೀಜಿ ಹುತಾತ್ಮರ ಸ್ಮಾರಕಕ್ಕೆ ತೆರಳಿ ಪುಷ್ಪನಮನ ಅರ್ಪಿಸಿ ನಂತರ ಧ್ವಜಾರೋಹಣ ನೆರವೇರಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ತಾಲೂಕಿನ ಸಾಧಕರಿಗೆ ಸನ್ಮಾನ ಮಾಡಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜಯಿಗಳಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಇತರೆ ಮಕ್ಕಳಿಗೆ ಲ್ಯಾಪ್ ಟ್ಯಾಪ್ ವಿತರಣೆ ಮಾಡಿದರು. ಶಾಲಾ ಮಕ್ಕಳಿಂದ ದೇಶ ಭಕ್ತಿಗೀತೆಗಳಿಗೆ ನೃತ್ಯರೂಪಕ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಾಲ್ಕು ವರ್ಷದ ಬಾಲಕಿ ಸಂವಿಧಾನ ಪೀಠಿಕೆ ಓದಿದ್ದು ಅಲ್ಲಿ ನೆರೆದ ಜನತೆಯಿಂದ ಚಪ್ಪಾಳೆ ಗಿಟ್ಟಿಸಿತು.