ಉಪನ್ಯಾಸಕನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಖಂಡನೆ

| Published : Jul 17 2025, 12:42 AM IST

ಉಪನ್ಯಾಸಕನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ, ಬೆದರಿಕೆ ಒಡ್ಡಿರುವ ಇಬ್ಬರು ಉಪನ್ಯಾಸಕರ ಹೇಯ ಕೃತ್ಯವನ್ನು ಖಂಡಿಸಿ ಹಾಗೂ ಆರೋಪಿ ಉಪನ್ಯಾಸಕರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ನಗರದ ಹೇಮಾವತಿ ಪ್ರತಿಮೆ ಮುಂದೆ ಪ್ರತಿಭಟಿಸಿದರು. ಒಡಿಶಾದಲ್ಲಿ ಕಾಲೇಜಿನ ಉಪನ್ಯಾಸಕರು ನೀಡಿರುವ ಲೈಂಗಿಕ ಕಿರುಕುಳದಿಂದ ಬೇಸತ್ತು, ಒಬ್ಬ ವಿದ್ಯಾರ್ಥಿನಿ ಬೆಂಕಿ ಹಾಕಿಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡದಿದ್ದರೆ, ಇಂತಹ ಪ್ರಕರಣಗಳು ಹೆಚ್ಚಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ, ಬೆದರಿಕೆ ಒಡ್ಡಿರುವ ಇಬ್ಬರು ಉಪನ್ಯಾಸಕರ ಹೇಯ ಕೃತ್ಯವನ್ನು ಖಂಡಿಸಿ ಹಾಗೂ ಆರೋಪಿ ಉಪನ್ಯಾಸಕರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ನಗರದ ಹೇಮಾವತಿ ಪ್ರತಿಮೆ ಮುಂದೆ ಪ್ರತಿಭಟಿಸಿದರು.

ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಚೈತ್ರ ಅವರು ಮಾತನಾಡಿ, ಬೆಂಗಳೂರಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ, ಬೆದರಿಕೆ ಒಡ್ಡಿರುವ ಇಬ್ಬರು ಶಿಕ್ಷಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ದಿನೇದಿನೇ ಹೆಚ್ಚುತ್ತಿದ್ದು, ಒಡಿಶಾದಲ್ಲಿ ಕಾಲೇಜಿನ ಉಪನ್ಯಾಸಕರು ನೀಡಿರುವ ಲೈಂಗಿಕ ಕಿರುಕುಳದಿಂದ ಬೇಸತ್ತು, ಒಬ್ಬ ವಿದ್ಯಾರ್ಥಿನಿ ಬೆಂಕಿ ಹಾಕಿಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡದಿದ್ದರೆ, ಇಂತಹ ಪ್ರಕರಣಗಳು ಹೆಚ್ಚಾಗುತ್ತದೆ ಎಂದರು.

ಈ ಘೋರ ಘಟನೆಯು ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಪಕವಾಗಿರುವ ಲೈಂಗಿಕ ದೌರ್ಜನ್ಯ ಸಮಸ್ಯೆಗಳಿಗೆ ಹಿಡಿದ ಕನ್ನಡಿಯಾಗಿದೆ. ಯುವ ಮನಸ್ಸುಗಳನ್ನು ಸ್ವಚ್ಛಗೊಳಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕಾದ ಪ್ರಾಧ್ಯಾಪಕರು ಇಂತಹ ಹೇಯಕೃತ್ಯಗಳಲ್ಲಿ ಭಾಗಿಯಾಗಿರುವುದು ದುರಂತವೇ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯ ಬಗ್ಗೆ ತ್ವರಿತ, ನಿಷ್ಪಕ್ಷಪಾತ ಮತ್ತು ಸಂಪೂರ್ಣ ತನಿಖೆ ನಡೆಸಿ, ಎಲ್ಲಾ ಅಪರಾಧಿಗಳನ್ನು ಕೂಡಲೇ ಕಾನೂನಿನ ಮುಂದೆ ತರಬೇಕು. ಆರೋಪಿ ಉಪನ್ಯಾಸಕರನ್ನು ತಕ್ಷಣವೇ ಅಮಾನತುಗೊಳಿಸಬೇಕು. ಇದರಲ್ಲಿ ಪ್ರಬಲ ಕುಂದುಕೊರತೆ ನಿವಾರಣಾ ಕಾರ್ಯಸಮಿತಿ ಸ್ಥಾಪಿಸುವುದು ಸೇರಿದಂತೆ, ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಶಿಕ್ಷಣ ಸಂಸ್ಥೆಗಳಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು.ಸಂತ್ರಸ್ತೆಗೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಕೂಡ ವಿದ್ಯಾರ್ಥಿ ಯುವಜನರಲ್ಲಿ ಉನ್ನತ ಆದರ್ಶ ಮೌಲ್ಯಗಳನ್ನು ಬಿತ್ತುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಬೇಕೆಂದು ಹೇಳಿದರು. ಈ ಪ್ರತಿಭಟನೆಯಲ್ಲಿ ಎಐಡಿಎಸ್ಒ ತಿಲಕ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.