ಪಟ್ಟಣದ ಸರಕಾರಿ ಪಪೂ ಕಾಲೇಜಿನಲ್ಲಿ ಒಂದೂವರೆ ತಿಂಗಳಿಂದ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಉಪನ್ಯಾಸಕನ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟಕ್ಕೆ ಬುಧವಾರ ಜಯಸಿಕ್ಕಿದೆ.
ಕನ್ನಡಪ್ರಭ ವಾರ್ತೆ ನರಗುಂದ
ಪಟ್ಟಣದ ಸರಕಾರಿ ಪಪೂ ಕಾಲೇಜಿನಲ್ಲಿ ಒಂದೂವರೆ ತಿಂಗಳಿಂದ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಉಪನ್ಯಾಸಕನ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟಕ್ಕೆ ಬುಧವಾರ ಜಯಸಿಕ್ಕಿದೆ.ವಿದ್ಯಾರ್ಥಿಗಳು ಉಪನ್ಯಾಸಕನ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿ, ಕಾಲೇಜು ಬಂದ್ ಮಾಡಿ ಬುಧವಾರ ಮತ್ತೆ ಪ್ರತಿಭಟಿಸಿದರು. ಸ್ಥಳಕ್ಕೆ ತಹಶೀಲ್ದಾರ ಶ್ರೀಶೈಲ ತಳವಾರ ಭೇಟಿ ನೀಡಿದರು. ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳನ್ನು ಸಂಪರ್ಕಿಸಿ, ಕೂಡಲೇ ಬರುವಂತೆ ಮನವಿ ಮಾಡಿದಾಗ ಉಪ ವಿಭಾಗಾಧಿಕಾರಿಗಳು ಪಿಯು ಕಾಲೇಜಿಗೆ ಭೇಟಿ ನೀಡಿ ಅಹವಾಲು ಕೇಳಿದರು.
ಕಾಲೇಜಿನ ಅತಿಥಿ ಉಪನ್ಯಾಸಕರು, ಸಿಬ್ಬಂದಿ ಮತ್ತು ಕೆಲವು ವಿದ್ಯಾರ್ಥಿಗಳಿಗೆ ಉಪನ್ಯಾಸಕ ಮನ್ಸೂರ ಅಲಿಖಾನ ಖಾಜಿ ಹೊಸಪೇಟೆ ಇಲ್ಲಸಲ್ಲದ ಆರೋಪ ಮಾಡುತ್ತಾ ಲೀಗಲ್ ನೋಟಿಸ್ ನೀಡಿದ್ದಾನೆಂಬ ಆರೋಪ ಕೇಳಿದ ಉಪ ವಿಭಾಗಾಧಿಕಾರಿಗಳು ಇವತ್ತು ಸಂಜೆಯೊಳಗೆ ಅವರನ್ನು ಅಮಾನತು ಮಾಡಲಾಗುವುದು ಎಂಬ ಭರವಸೆ ನೀಡಿದರು. ಸಂಜೆಯೊಳಗೆ ಅಮಾನತು ಆಗದಿದ್ದರೆ, ನಾಳೆಯಿಂದ ಮತ್ತೆ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.ಅಧಿಕಾರಿಗಳು ಭರವಸೆ ನೀಡಿ ಹೋದ ಎರಡು ಗಂಟೆಯೊಳಗೆ ಉಪನ್ಯಾಸಕನನ್ನು ಗದಗ ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಹಿನ್ನೆಲೆ:
ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುವುದು, ಸರಿಯಾಗಿ ಕಾಲೇಜಿಗೆ ಬಾರದೇ ಹಾಜರಾತಿಯನ್ನು ವೈಟ್ನರ್ ಮೂಲಕ ತಿದ್ದುಪಡಿ ಮಾಡುವುದು, ಪ್ರಶ್ನೆ ಮಾಡಿದ ಪ್ರಾಂಶುಪಾಲರ ವಿರುದ್ಧ ಅಶ್ಲೀಲ ಪದ ಬಳಸಿ, ನಿಂದಿಸುವುದು. ವಿದ್ಯಾರ್ಥಿಗಳಿಗೆ ಧಾರ್ಮಿಕ ಆಚರಣೆಗಳ ಕುರಿತಂತೆ ಕೆಟ್ಟದಾಗಿ ನಿಂದಿಸುವುದು. ಸಮಯಪ್ರಜ್ಞೆ ಇಲ್ಲದೇ ಕಾಲೇಜಿಗೆ ಆಗಮಿಸುವುದನ್ನು ಖಂಡಿಸಿ ಆ.10ರಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಮರುದಿನ ಆ.11ರಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಸಿ.ಸಿ. ಪಾಟೀಲ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದ್ದಾರೆ.ಮರುದಿನ ಕಾಲೇಜಿನಲ್ಲಿ ಶಾಸಕರು ಹಾಗೂ ಡಿಡಿಪಿಯು ಅವರಿಂದ ಸಭೆ ಜರುಗಿತು. ಶೀಘ್ರ ಕ್ರಮಕೈಗೊಳ್ಳುವ ಭರವಸೆಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದರು. ಸೆ.4ರಂದು ವಿದ್ಯಾರ್ಥಿಗಳು ಕ್ರಮಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.