ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅತಿಥಿ ಉಪನ್ಯಾಸಕರು, ಉಪನ್ಯಾಸಕರು, ಪ್ರಾಂಶುಪಾಲರು, ಬೋಧಕೇತರರ ಸಮಸ್ಯೆಗಳಿಗೆ ಧ್ವನಿಯಾಗಿ ನಿಂತು ಕೆಲಸ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ತಿಳಿಸಿದರು.ನಗರದ ಜಿಲ್ಲಾ ಉಪನ್ಯಾಸಕರ ಸಂಘದ ಕಚೇರಿ ಆವರಣದಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರರ ವರ್ಗ ಆಯೋಜಿಸಿದ್ದ ಗೌರವ ಸಮರ್ಪಣೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರ ವಾಪ್ತಿಯಲ್ಲಿ 29 ತಾಲೂಕುಗಳಲ್ಲಿನ ಅತಿಥಿ ಮತ್ತು ಉಪನ್ಯಾಸಕರ ಮತ್ತು ಕಾಲೇಜುಗಳ ಸಮಸ್ಯೆಗಳು ಗಮನಕ್ಕೆ ಬಂದಿವೆ. ಎಲ್ಲಾ ಸಮಸ್ಯೆಗಳ ಪರಿಹಾರ ನನ್ನೊಬ್ಬನಿಂದ ಸಾಧ್ಯವಿಲ್ಲ. ಹಂತ ಹಂತವಾಗಿ ಸರ್ಕಾರದ ಮಟ್ಟದಲ್ಲಿ, ಸ್ಥಳೀಯ ಶಾಸಕರು, ಸಚಿವರು, ಸಂಸದರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಮುಂದಾಗೋಣ ಎಂದರು.ದಕ್ಷಿಣ ಶಿಕ್ಷಕರ ಕ್ಷೇತ್ರ ವಾಪ್ತಿಗೆ 2 ಕೋಟಿ ರು. ಅನುದಾನ ಬರುತ್ತದೆ. ಇದರಲ್ಲಿ ಸಮನಾಗಿ 29 ತಾಲೂಕುಗಳಿಗೂ ಹಂಚಿಕೆ ಮಾಡಬೇಕಿದೆ. ನನಗೆ ಬರುವ ವೇತನವನ್ನೂ ಶಿಕ್ಷಕರ ಕ್ಷೇತ್ರದಲ್ಲಿನ ಅನಿವಾರ್ಯ ಪರಿಸ್ಥಿತಿಗೆ ವಿನಿಯೋಗಿಸುತ್ತಿದ್ದೇನೆ. ಪ್ರತಿ ತಾಲೂಕಿನ ಕೆಡಿಪಿ ಸಭೆಗಳಲ್ಲಿ ಭಾಗವಹಿಸಿ ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲೂ ಅತಿಥಿ ಉಪನ್ಯಾಸಕರು, ಉಪನ್ಯಾಸಕರು, ಪ್ರಾಂಶುಪಾಲರು, ಬೋಧಕೇತರರ ಸಮಸ್ಯೆಗಳಿಗೆ ಧ್ವನಿಯಾಗಿ ನಿಂತು ಮಾತನಾಡುತ್ತೇನೆ. ಜೊತಗೆ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಉಪನ್ಯಾಸಕರ ನಿಯೋಗ ತೆರಳಿ ಸಮಸ್ಯೆಗಳನ್ನು ಅವರ ಗಮನ ಸೆಳೆದು ಕೇಂದ್ರ ಸರ್ಕಾರದ ಯೋಜನೆ- ಅನುದಾನಗಳನ್ನು ಬಳಸಿಕೊಳ್ಳಲು ಮನವಿ ಸಲ್ಲಿಸೋಣ ಎಂದು ತಿಳಿಸಿದರು.ಸ್ಥಳೀಯ ಸಂಘ- ಸಂಸ್ಥೆ ದಾನಿಗಳು, ಉದ್ಯಮಿಗಳ ಸಹಕಾರ, ಆರ್ಥಿಕ ನೆರವು ಪಡೆದು ಸಣ್ಣ ಪುಟ್ಟದಾಗಿರುವ ಕಾಲೇಜು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ನಾನು ಕೂಡ ಇದಕ್ಕೆ ನೆರವಾಗುತ್ತೇನೆ. ಅಲ್ಲದೇ ಈ ಬಗ್ಗೆ ಸಾಕಷ್ಟು ಉದ್ಯಮಿಗಳ ಗಮನಕ್ಕೆ ತರುವುದು, ಪ್ರಯತ್ನಿಸಲಾಗುವುದು ಸೂಕ್ತ ಎಂದು ಮನವಿ ಮಾಡಿದರು.
ಇದೇ ವೇಳೆ ಪರಿಷತ್ ಸದಸ್ಯ ಕೆ.ವಿವೇಕಾನಂದ ಮತ್ತು ರಾಜ್ಯಾಧ್ಯಕ್ಷ ಉಪನ್ಯಾಸಕರ ಸಂಘದ ಎ.ಎಚ್.ನಿಂಗೇಗೌಡ ಅವರೊಂದಿಗೆ ಸಂವಾದ ನಡೆಸಿ ಸಿಥಿಲಗೊಂಡಿರುವ ಕಾಲೇಜು- ಕಾಂಪೌಂಡ್‌ಗಳ ನಿರ್ಮಾಣ ಮತ್ತು ಅತಿಥಿ ಮತ್ತು ಉಪನ್ಯಾಸಕರು ಹಾಗೂ ಪ್ರಾಂಶುಪಾಲರು, ಬೋಧಕೇತರರ ವರ್ಗದವರು ಮನವಿ ನೀಡಿದರು.ಬಳಿಕ ಶಾಸಕ ವಿವೇಕಾನಂದ, ಎ.ಎಚ್.ನಿಂಗೇಗೌಡರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ನಿಂಗೇಗೌಡ, ಜಿಲ್ಲಾಧ್ಯಕ್ಷ ಚನ್ನಕೃಷ್ಣ, ಪ್ರಾಂಶುಪಾಲರಾದ ಶಿವಲಿಂಗೇಗೌಡ, ಹನುಮಂತಯ್ಯ, ನೌಕರರ ಸಂಘದ ನಿರ್ದೇಶಕ ನಾಗೇಶ್, ಮಂಗಲಶಿವಣ್ಣ, ಡಾ.ಮನುಕುಮಾರ್, ತಮ್ಮೇಗೌಡ ಮತ್ತಿತರರು ಇದ್ದರು.