ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿಯ 8 ಕ್ಷೇತ್ರಗಳಿಗೆ (ಬಿ.ತರಗತಿ) ನಡೆದ ಚುನಾವಣೆಯಲ್ಲಿ ಶಾಸಕ ಜಿ.ಡಿ. ಹರೀಶ್ ಗೌಡ ನೇತೃತ್ವದ ಜೆಡಿಎಸ್ ಬೆಂಬಲಿತ ಎಂಟೂ ಅಭ್ಯರ್ಥಿಗಳು ಗೆಲುವಿನ ನಗೆ ಬೀರುವ ಮೂಲಕ ಜೆಡಿಎಸ್ ತನ್ನ ದಶಕಗಳ ಏಕಚಕ್ರಾಧಿಪತ್ಯವನ್ನು ಮುಂದುವರೆಸಿತು.ವಾರದ ಹಿಂದೆ ನಡೆದ ಸಂಘದ ಎ ತರಗತಿ (ಸೊಸೈಟಿಗಳನ್ನು ಪ್ರತಿನಿಧಿಸುವ ವಿಭಾಗ) ದಲ್ಲಿ ನಾಲ್ಕು ಕ್ಷೇತ್ರಗಳ ಪೈಕಿ ನಾಲ್ಕನ್ನೂ ಜೆಡಿಎಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪ್ರಾಬಲ್ಯ ಮೆರೆದರು. ತೀವ್ರ ಪೈಪೋಟಿ ನೀಡಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸಿದರು. ಒಟ್ಟು 12 ಸ್ಥಾನಗಳ ಪೈಕಿ 12 ಸ್ಥಾನಗಳನ್ನೂ ಜೆಡಿಎಸ್ ತನ್ನ ಮಡಿಲಿಗೆ ಹಾಕಿಕೊಳ್ಳುವ ಮೂಲಕ ಪಾರಮ್ಯ ಮೆರೆಯಿತು.
ಗೆಲುವು-ಸೋಲು ಯಾರು ಯಾರಿಗೆ?ಮಹಿಳಾ ಕ್ಷೇತ್ರದ ವಿಜಯಶಾಲಿಗಳು: ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿನ ಅಭ್ಯರ್ಥಿಗಳಾದ ಇಂದುಕಲಾ ಶ್ರೀಗೌಡ 1213 ಮತಗಳು ಮತ್ತು ಮಂಗಳಗೌರಿ 1103 ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದರು. ಕಾಂಗ್ರೆಸ್ ಬೆಂಬಲಿತ ಕೆ.ಎನ್. ಕಲ್ಪನಾ 303 ಮತ್ತು ಎನ್.ಎಸ್. ಕಾವ್ಯ 255 ಮತಗಳನ್ನು ಗಳಿಸಲಷ್ಟೇ ಶಕ್ತರಾದರು. ಹಿಂದುಳಿದ ವರ್ಗ (ಪ್ರವರ್ಗ ಬಿ) ಮೀಸಲು ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಎ.ಸಿ. ಕೆಂಪೇಗೌಡ 1129 ಮತಗಳನ್ನು ಗಳಿಸಿದರೆ ಕಾಂಗ್ರೆಸ್ ಬೆಂಬಲಿತ ಎಂ. ವೈಶಾಖ್ 320 ಮತಗಳನ್ನು ಗಳಿಸಿ ಸೋಲನುಭವಿಸಿದರು. ಹಿಂದುಳಿದ ವರ್ಗ (ಪ್ರವರ್ಗ ಎ) ಮೀಸಲು ಕ್ಷೇತ್ರದಿಂದ ಜೆಡಿಎಸ್ ನ ಎಚ್.ಟಿ. ಬಾಬು 1057 ಮತಗಳಿಸಿ ವಿಜಯಿಯಾದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ. ಶಂಕರ್ ಕೇವಲ 139 ಮತಗಳನ್ನು ಗಳಿಸಿ ಸೋಲುಂಡರು.
ಪ.ಜಾತಿ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್ ನ ಬಸವಲಿಂಗಯ್ಯ 1112 ಮತಗಳನ್ನು ಗಳಿಸಿ ವಿಜಯದ ನಗೆ ಬೀರಿದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚಿನ್ನವೀರಯ್ಯ 255 ಮತಗಳನ್ನು ಗಳಿಸಿ ಸೋತರು. ಪ.ಪಂಗಡ ಮೀಸಲು ಕ್ಷೇತ್ರದಿಂದ ಜೆಡಿಎಸ್ ನ ಎಂ. ಸೋಮಶೇಖರ್ 1016 ಮತಗಳನ್ನು ಗಳಿಸಿ ವಿಜಯಿಯಾದರೆ, ಕಾಂಗ್ರೆಸ್ ಜವರನಾಯಕ 155 ಮತಗಳನ್ನು ಗಳಿಸಿ ಸೋಲು ಅನುಭವಿಸಿದರು. ಎರಡು ಸಾಮಾನ್ಯ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಎಚ್.ಆರ್. ಮಹೇಶ್ 1099 ಮತಗಳು ಮತ್ತು ಜಿ.ಎನ್. ವೆಂಕಟೇಶ್ 1083 ಮತಗಳನ್ನು ಗಳಿಸಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಬೆಂಬಲಿನ ಅಭ್ಯರ್ಥಿಗಳಾದ ಎಚ್.ಎಸ್. ಮಹೇಶ್ 335 ಮತಗಳು ಹಾಗೂ ಎಂ. ಕುಮಾರ್ 356 ಮತಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಸಂಭ್ರಮಾಚರಣೆಜೆಡಿಎಸ್ ತನ್ನ ಪಾರಮ್ಯ ಮೆರೆಯುತ್ತಿದೆ ಎಂದು ಅರಿತ ಪಕ್ಷದ ಕಾರ್ಯಕರ್ತರು ಮತ್ತು ಶಾಸಕ ಜಿ.ಡಿ. ಹರೀಶ್ ಗೌಡರ ಅಭಿಮಾನಿಗಳು ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಮ್ಮ ನೆಚ್ಚಿನ ನಾಯಕ ಜಿ.ಡಿ. ಹರೀಶ್ ಗೌಡರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿ ಸಂಭ್ರಮಿಸಿದರು. ಸಿಹಿ ಹಂಚಿ ಸಂತಸಪಟ್ಟರು. ಜೈಕಾರಗಳನ್ನು ಮೊಳಗಿಸಿದರು. ತೀವ್ರ ಮುಖಭಂಗಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆಯ ಆರಂಭದಿಂದಲೂ ಕಾಂಗ್ರಸ್ ಪಕ್ಷ ತನ್ನ ಸಾಮರ್ಥ್ಯ ಪ್ರದರ್ಶಿಸಲು ತುರುಸಿನ ಕ್ರಮವಹಿಸಿತ್ತು. ಸಹಕಾರ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳೂ ಅಸ್ತಿತ್ವ ಕಾಣಬೇಕೆಂದು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. 1:10ರ ಪ್ರಮಾಣದಲ್ಲಿ ಮತಗಳಿಸುವ ಮೂಲಕ ಕಾಂಗ್ರೆಸ್ ತೀವ್ರ ಮುಖಭಂಗಕ್ಕೆ ಒಳಗಾಯಿತು. ---ಕೋಟ್‌ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತ್ತೊಮ್ಮೆ ಸಹಕಾರಿಗಳು ಜೆಡಿಎಸ್ ಪರ ಮತ್ತು ನನ್ನನ್ನು ಬೆಂಬಲಿಸಿ ಅಭೂತಪೂರ್ವ ಗೆಲುವು ದೊರಕಿಸಿಕೊಟ್ಟಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು. ಸಹಕಾರಿಗಳ ಈ ಬೆಂಬಲ ನನಗೆ ಆನೆಬಲ ತಂದಿದೆ. ರೈತರು ಮತ್ತು ಸಹಕಾರಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನನ್ನ ಹೋರಾಟಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಜನರ ವಿಶ್ವಾಸಕ್ಕೆ ಕುಂದು ಬಾರದಂತೆ ಕರ್ತವ್ಯ ನಿರ್ವಹಿಸುತ್ತೇನೆ.- ಜಿ.ಡಿ. ಹರೀಶ್ ಗೌಡ, ಶಾಸಕ, ಹುಣಸೂರು.
;Resize=(128,128))
;Resize=(128,128))
;Resize=(128,128))