ಎಡಪಂಥೀಯ ಧರ್ಮದ್ರೋಹಿಗಳಿಗೆ ಶಿಕ್ಷೆ ಆಗಲಿ

| Published : Aug 27 2025, 01:01 AM IST

ಸಾರಾಂಶ

ಸನಾತನ ಧರ್ಮ ನಾಶ ಮಾಡಲು ಎಡಪಂಥೀಯರು ಪ್ರಯತ್ನಿಸುತ್ತಿದ್ದಾರೆ

ನರಗುಂದ: ಅಧರ್ಮದ ವಿರುದ್ಧ ನಡೆಯುವರಿಗೆ ತಕ್ಕ ಶಿಕ್ಷೆ ಆಗಬೇಕು. ಎಸ್ಐಟಿ ತನಿಖೆ ಸರಿಯಿದೆ. ಆದರೆ ಎನ್ಐಎ ತನಿಖೆ ನಡೆದಾಗ ಮಾತ್ರ ಸತ್ಯಾಸತ್ಯತೆ ಗೊತ್ತಾಗುತ್ತದೆ. ಎಡಪಂಥೀಯ ಧರ್ಮದ್ರೋಹಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಅವರು ಪಟ್ಟಣದ ಶಿವಾಜಿ ಮಹಾರಾಜ್ ವೃತ್ತದಲ್ಲಿ ಮಂಗಳವಾರ ಸಂಜೆ ಬಿಜೆಪಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಯುವ ಅಪಪ್ರಚಾರ ಹಾಗೂ ಷಡ್ಯಂತ್ರ ವಿರುದ್ಧ ನಡೆದ ಬೃಹತ್ ಪ್ರತಿಭಟನೆ ಹಾಗೂ ಗಂಟೆಗೂ ಹೆಚ್ಚು ಕಾಲ ಹುಬ್ಬಳ್ಳಿ-ಸೋಲ್ಲಾಪೂರ ರಸ್ತೆ ತಡೆ ನಡೆಸಿದ ನಂತರ ತಹಸೀಲ್ದಾರರಿಗೆ ಮನವಿ ಅರ್ಪಿಸಿ ಮಾತನಾಡಿ, ಸನಾತನ ಧರ್ಮ ನಾಶ ಮಾಡಲು ಎಡಪಂಥೀಯರು ಪ್ರಯತ್ನಿಸುತ್ತಿದ್ದಾರೆ. ರಾಜ್ಯ ಸರ್ಕಾರ ಮೊದಲ ಬಾರಿಗೆ ಐಪಿಎಸ್ ಪೊಲೀಸ್‌ ಅಧಿಕಾರಿಗಳನ್ನು ಹೆಣದ ಗುಂಡಿ ತೋಡಲು ಹಚ್ಚಿದ್ದು, ಆರನೇ ಗ್ಯಾರಂಟಿಯಾಗಿದೆ. ಶ್ರೀಮಂಜುನಾಥನ ಹಾಗೂ ಅಣ್ಣಪ್ಪನ ಕಾವಲಿನಿಂದ ಧರ್ಮ ಉಳಿದಿದೆ. ಗುಂಡಿ ತೋಡುವ ಸಂದರ್ಭದಲ್ಲಿ ಯಾವುದೋ ಅನಾಮಧೇಯ ವ್ಯಕ್ತಿಯ ಅಸ್ಥಿಪಂಜರ ಸಿಕ್ಕಿದ್ದರೆ, ಧರ್ಮಸ್ಥಳ ಕ್ಷೇತ್ರದ ಪರಿಸ್ಥಿತಿ ಏನಾಗುತ್ತಿತ್ತು. ಹೀಗಾಗಿ ಹಿಂದೂ ಸಮಾಜ ಸುಮ್ಮನೆ ಕುಳಿತುಕೊಳ್ಳಬಾರದು ಸದಾ ಜಾಗೃತರಾಗಿರಬೇಕು ಎಂದರು.

ಪಕ್ಕದ ಮಹಾರಾಷ್ಟ್ರ ರಾಜ್ಯ ಸರ್ಕಾರವು ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಮಾಡುವ 1800 ಮಂಡಳಿಗಳಿಗೆ ತಲಾ ₹25 ಸಾವಿರ ಸಹಾಯಧನ ನೀಡುತ್ತಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಗಣಪತಿ ಇಡುವ ಮಂಡಳಿಗಳಿಗೆ ಕಂಡೀಷನ್ ಹಾಕುತ್ತಾ ಅಡೆತಡೆ ಮಾಡುತ್ತಿದೆ. ವಿರೇಂದ್ರ ಹೆಗ್ಗಡೆ ಸಮಾಜಮುಖಿ ಸೇವಾಕಾರ್ಯ ಸಾಕಷ್ಟು ಮಾಡಿದ್ದಾರೆ. ಕ್ಷೇತ್ರ ರಕ್ಷಣೆ ಮಾಡಲು ಸೆ.1 ರಂದು ಧರ್ಮಸ್ಥಳ ಚಲೋ ಕರೆ ನೀಡಲಾಗಿದೆ. ಎಲ್ಲರೂ ಆಗಮಿಸಬೇಕೆಂದು ಹೇಳಿದರು.

ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಪಾವಿತ್ರತೆ ಹಾಳು ಮಾಡುವ ಉದ್ದೇಶದಿಂದ ಎಡಪಂಥೀಯರು ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಶ್ರೇಷ್ಠ ಸಿದ್ಧಾಂತವಿಲ್ಲದ ಎಡಪಂಥೀಯರ ಷಡ್ಯಂತ್ರ ಇದಾಗಿದೆ. ಹಿಂದೂ ಧರ್ಮ ರಕ್ಷಣೆಗೆ ನಾವೆಲ್ಲರೂ ಸದಾ ಜಾಗೃತರಾಗಿರೋಣ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪತ್ರೀವನ‌ಮಠದ ಗುರುಸಿದ್ಧವೀರ ಶಿವಾಚಾರ್ಯರು ಶ್ರೀಗಳು, ಬೈರನಹಟ್ಟಿ-ಶಿರೋಳ ಮಠದ ಶಾಂತಲಿಂಗ ಶ್ರೀಗಳು, ಚಂದ್ರಶೇಖರ ದಂಡಿನ, ಎಸ್. ಆರ್.ಪಾಟೀಲ, ನಾಗನಗೌಡ ತಿಮ್ಮನಗೌಡ್ರ ಮಾತನಾಡಿದರು.

ತಹಸೀಲ್ದಾರ ಶ್ರೀಶೈಲ ತಳವಾರ ಪ್ರತಿಭಟನೆಕಾರರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಅಜ್ಜಪ್ಪ ಹುಡೇದ, ಎಸ್. ಜಿ. ಮುತ್ತವಾಡ, ಬಿ.ಬಿ. ಐನಾಪೂರ, ವಸಂತ ಜೋಗಣ್ಣವರ, ಎನ್. ಕೆ. ಸೋಮಾಪುರ, ದೇಸಾಯಿಗೌಡ ಪಾಟೀಲ, ಚಂಬಣ್ಣ ವಾಳದ, ಸಂಗಪ್ಪ ಪೂಜಾರ, ವಿಠ್ಠಲ ಹವಾಲ್ದಾರ, ಎಸ್.ಎಸ್.ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.