ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಒಬ್ಬ ಅನಾಮಿಕ ವ್ಯಕ್ತಿ ಹೇಳಿದ್ದಕ್ಕೆ ಕಳೆದ 10 ದಿನದಿಂದ ಭೂಮಿಯನ್ನು ಅಗೆಯುತ್ತಿದ್ದು, ಇದುವರೆಗೆ ಯಾಕೆ ಅಸ್ಥಿಪಂಜರ ಸಿಕ್ಕಿಲ್ಲ? ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವ ಎಡಪಂಥೀಯರು ಯಾರೆಂಬುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇವೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ನಗರದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನಾಮಿಕ ವ್ಯಕ್ತಿ ಹೇಳಿದ, ತೋರಿಸಿದ ಕಡೆಗಳಲ್ಲೆಲ್ಲಾ ಎಸ್ಐಟಿ ತಂಡದ ಅಧಿಕಾರಿಗಳು ಭೂಮಿಯನ್ನು ಅಗೆಸುತ್ತಿದ್ದರೂ ಯಾಕೆ ಒಂದೇ ಒಂದು ಕಡೆಯಾದರೂ ಅಸ್ಥಿಪಂಜರ ಸಿಕ್ಕಿಲ್ಲ? ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಇದರ ಹಿಂದಿರುವಂತಹ ಎಡಪಂಥೀಯರು ಮಾಡುತ್ತಿದ್ದಾರೆ ಎಂದರು.
ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಬಗ್ಗೆ ಹಿಂದೂಗಳಲ್ಲಿ ಪೂಜ್ಯ, ಗೌರವದ ಭಾವನೆ ಇದೆ. ರಾಜ್ಯಾದ್ಯಂತ ನಗರ, ಗ್ರಾಮೀಣ ಬಡವರು, ಕಡು ಬಡವರ ಕುಟುಂಬಗಳಿಗೆ ಶ್ರೀಕ್ಷೇತ್ರದಿಂದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಲಕ ಆಸರೆಯಾಗುತ್ತಿದೆ. ಅವರ ಬಗ್ಗೆ ಅಪಪ್ರಚಾರ ಸಲ್ಲದು ಎಂದರು.ಆಟಂ ಬಾಂಬ್ ಎಂದು ಬೆಂಗಳೂರಿಗೆ ಬಂದಿದ್ದು ಯಾವ ಪುರುಷಾರ್ಥಕ್ಕೆ?:
ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣಿಯಾಗಿದ್ದು, ಮಿದುಳು-ನಾಲಿಗೆಗೆ ಸಂಪರ್ಕವೇ ಇಲ್ಲದ ಈ ವ್ಯಕ್ತಿ ಬೆಂಗಳೂರಿಗೆ ಯಾವ ಪುರುಷಾರ್ಥಕ್ಕೆ ಬಂದು ಸಭೆ ಮಾಡಿದ್ದು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದರು.ಬೆಂಗಳೂರಿನಲ್ಲಿ ಆಟಂ ಬಾಂಬ್ ಆಟಂ ಬಾಂಬ್ ಸಿಡಿಸುವೆ ಎಂದು ರಾಹುಲ್ ಗಾಂಧಿ ಹೇಳಿದ್ದು, ಎಲ್ಲಿ ಸಿಡಿಸಿದರೆಂಬುದನ್ನು ಹೇಳಲಿ. ಮತಗಳ್ಳತನ ಅಂತಾ ದೊಡ್ಡದಾಗಿ ಆರೋಪ ಮಾಡಿದ ಇದೇ ರಾಹುಲ್ ಗಾಂಧಿ ಚುನಾವಣಾ ಆಯೋಗದ ಕಚೇರಿಗೆ ಹೋಗಿ ಲಿಖಿತ ದೂರು ಕೊಡಲಿಲ್ಲ. ದೂರು ಕೊಟ್ಟರೂ ಅದರಲ್ಲಿ ಸಹಿಯನ್ನೇ ರಾಹುಲ್ ಗಾಂಧಿ ಮಾಡಲಿಲ್ಲ ಎಂದು ಟೀಕಿಸಿದರು.
ಇದೇ ರೀತಿ ರಾಹುಲ್ ಗಾಂಧಿ ವರ್ತನೆ, ಮಾತು ಮುಂದುವರಿದರೆ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ವಿಳಾಸವೇ ಉಳಿಯದಂತೆ ಆಗುವ ದಿನಗಳು ದೂರವಿಲ್ಲ ಎಂದು ಕುಟುಕಿದರು.ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ನೀಡಿದ್ದ ಉತ್ತಮ ಆಡಳಿತವನ್ನು ನೋಡಿ, ದೇಶದ ಪ್ರಧಾನಿಯಾಗಿ ಮತ್ತೆ ಮತ್ತೆ ಅಧಿಕಾರವನ್ನು ದೇಶ ವಾಸಿಗಳು ನೀಡುತ್ತಿದ್ದಾರೆ. ನಿಮ್ಮ ಕಾಂಗ್ರೆಸ್ ಪಕ್ಷದ ಸಂಸದರು ಆಯ್ಕೆಯಾದಾಗ, ರಾಜ್ಯದಲ್ಲಿ 138 ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗರು ಗೆದ್ದಾಗ ಮತಗಳ್ಳತನ ಆಗಲಿಲ್ಲವೇ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಬಿ.ಎಂ.ಸತೀಶ ಕೊಳೇನಹಳ್ಳಿ, ರಾಜು ವೀರಣ್ಣ, ಪ್ರವೀಣ ಜಾಧವ್, ಕೆ.ಎನ್.ವೆಂಕಟೇಶ ಇತರರು ಇದ್ದರು.