ಸಾರಾಂಶ
ಮಹಾಲಿಂಗಪುರದಲ್ಲಿ ಗರ್ಭಪಾತದಿಂದ ಮಹಿಳೆ ಸಾವಿನ ಹಿನ್ನೆಲೆ ಇದರ ರೂವಾರಿ ಕವಿತಾ ಬಾಡನವರ ಮನೆಗೆ ಶುಕ್ರವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರಅನಧಿಕೃತ ಗರ್ಭಪಾತ ಮಾಡಲು ಹೋಗಿ ಮಹಾರಾಷ್ಟ್ರ ಮೂಲದ ಮಹಿಳೆ ಸಾವಿಗೀಡಾಗಿ ಭ್ರೂಣ ಹತ್ಯೆಯ ಕೃತ್ಯ ಬಯಲಾಗಿರುವುದು ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದೆ. ಇದು ಅಕ್ಷಮ್ಯ ಅಪರಾಧ ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಆದೇಶ ಮಾಡುತ್ತಿದ್ದೇನೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ಪಟ್ಟಣದ ಜಯಲಕ್ಷ್ಮಿ ನಗರದ ಮನೆಯೊಂದರಲ್ಲಿ ಆರೋಪಿ ಕವಿತಾ ಬಾಡನವರ ಅನಧಿಕೃತ ಗರ್ಭಪಾತ ಮಾಡಿ ಮಹಿಳೆಯೊಬ್ಬಳ ಸಾವಿಗೆ ಕಾರಣವಾದ ಹಿನ್ನೆಲೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.ನೋಡಲ್ ಅಧಿಕಾರಿ ನಿರ್ಲಕ್ಷ್ಯ:
2019 ಮತ್ತು 22ರಲ್ಲಿ ಇಂತಹದ್ದೇ ಅಪರಾಧ ಕೃತ್ಯವೆಸಗಿದ ಮಹಿಳೆ ಮನೆ ಮೇಲೆ ದಾಳಿ ನಡೆದು, ಮನೆ ಸೀಜ್ ಮಾಡಲಾಗಿತ್ತು. ಮತ್ತೆ ಇಲ್ಲಿ ಇಂತಹ ಕೃತ್ಯ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದು ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿ ಡಿ.ಬಿ.ಪಟ್ಟಣಶೆಟ್ಟಿ ಅವರ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಇದರಿಂದ ಅಮಾಯಕ ಹೆಣ್ಣು ಮಗಳ ಸಾವಿಗೆ ಕಾರಣವಾಗಿದ್ದು, ಇದಕ್ಕೆ ಡಿಎಚ್‌ಒ ಅವರನ್ನೇ ಹೊಣೆ ಮಾಡಿ ಪೊಲೀಸ್ ಇಲಾಖೆಯಿಂದ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಆರೋಗ್ಯ ಇಲಾಖೆ ಹಾಗೂ ಎಸಿ, ಡಿಸಿ ವರದಿ ಆಧರಿಸಿ ಆಯೋಗ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಡ:
ಕಾನೂನು ಬಾಹಿರ ಅಬಾರ್ಷನ್‌ಗಾಗಿ ಶಿಫಾರಸು ಮಾಡಿದ ಸ್ಥಳೀಯ ಮತ್ತು ಮಹಾರಾಷ್ಟ್ರ ವೈದ್ಯರು/ ಮಧ್ಯವರ್ತಿಗಳ ವಿರುದ್ಧವೂ ಪೊಲೀಸ್ ಇಲಾಖೆ ಕ್ರಮ ಕೈಗೊಂಡು ಅವರ ಆಸ್ಪತ್ರೆ, ತಪಾಸಣೆ ಕೇಂದ್ರಗಳಿಗೆ ಬೀಗ ಜಡಿದು ಯೋಗ್ಯ ಕಾನೂನು ಕ್ರಮ ಜರುಗಿಸಬೇಕು. ಹೀಗಾದಲ್ಲಿ ಮಾತ್ರ ಮುಂದೆ ನಡೆಯುವ ಅನಧಿಕೃತ ಕೃತ್ಯಗಳಿಗೆ ಕಡಿವಾಣ ಬೀಳುತ್ತದೆ. ಅಲ್ಲದೆ ಹೆಚ್ಚಿನ ಅಮಾಯಕರ ಸಾವು ತಡೆಯಬಹುದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸಿ ಮಹಾರಾಷ್ಟ್ರ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.ಸ್ಟಿಂಗ್ ಆಪರೇಶನ್:
ದೇಶದಲ್ಲಿ ಲಿಂಗಾನುಪಾತ ಕುಸಿಯುತ್ತಿದೆ. ಇಂತಹದರಲ್ಲಿ ಕಾನೂನುಬಾಹಿರವಾಗಿ ಇಂತಹ ಕೆಲಸಗಳು ಎಗ್ಗಿಲ್ಲದೆ ನಡೆಯುತ್ತಿವೆ. ಬಾಗಲಕೋಟೆ ಜಿಲ್ಲೆಯಾದ್ಯಂತ 183 ತಪಾಸಣೆ ಕೇಂದ್ರಗಳಿದ್ದು, ಐದು ತಂಡಗಳನ್ನು ರಚನೆ ಮಾಡಿ ಪ್ರತಿ ಕೇಂದ್ರವನ್ನು ಪರಿಶೀಲನೆ (ಸ್ಟಿಂಗ್ ಆಪರೇಶನ್) ಮಾಡಿ, ಅಕ್ರಮ ಕೆಲಸ ಕಾರ್ಯಗಳಿಗೆ ತಡೆ ಒಡ್ಡಲಾಗುವುದು. ಒಂದು ವೇಳೆ ತಪ್ಪುಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ತಪಾಸಣೆ ಕೇಂದ್ರಗಳನ್ನು ಸೀಜ್ ಮಾಡಲಾಗುವುದು ಎಂದು ತಿಳಿಸಿದರು.ಮಹಿಳಾ ಹಕ್ಕುಗಳ ನಿರ್ದೇಶಕ ವೀರನಗೌಡ ಪಾಟೀಲ, ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜಕುಮಾರ ಯರಗಲ್, ಎಸಿ ಸಂತೋಷ ಕಾಮಗೌಡ, ಡಿವೈಎಸ್ಪಿ ಇ.ಶಾಂತವೀರ, ತಹಸೀಲ್ದಾರ್ ಗಿರೀಶ ಸ್ವಾದಿ, ಸಿಪಿಐ ಸಂಜೀವ ಬಳಗಾರ, ನೋಡಲ್ ಅಧಿಕಾರಿ ಡಿ.ಬಿ. ಪಟ್ಟಣಶೆಟ್ಟಿ, ತಾಲೂಕು ವೈದ್ಯಾಧಿಕಾರಿ ವೆಂಕಟೇಶ ಮಲಘಾಣ, ಡಿಸಿಪಿಒ ವೀಣಾ ಎಂ., ಮತ್ತು ಸ್ಥಳೀಯ ಠಾಣಾಧಿಕಾರಿ ಪ್ರವೀಣ ಬೀಳಿಗಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.