ನಗರದ ಹೊರವಲಯ ಬುಳ್ಳಾಪುರದಲ್ಲಿ ರೈತರಿಂದ ಅಡಕೆ ಖರೀದಿಸಿ ಬಳಿಕ ಅದನ್ನು ಸಂಸ್ಕರಿಸಿ, ದೊಡ್ಡ ಪ್ರಮಾಣದಲ್ಲಿ ರಾಜ್ಯ, ಹೊರರಾಜ್ಯಗಳಿಗೆ ರವಾನಿಸುವ ಘಟಕಕ್ಕೆ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ.ಮೈತ್ರಿ ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಹೊರವಲಯ ಬುಳ್ಳಾಪುರದಲ್ಲಿ ರೈತರಿಂದ ಅಡಕೆ ಖರೀದಿಸಿ ಬಳಿಕ ಅದನ್ನು ಸಂಸ್ಕರಿಸಿ, ದೊಡ್ಡ ಪ್ರಮಾಣದಲ್ಲಿ ರಾಜ್ಯ, ಹೊರರಾಜ್ಯಗಳಿಗೆ ರವಾನಿಸುವ ಘಟಕಕ್ಕೆ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ.ಮೈತ್ರಿ ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.ಅಡಕೆ ಗೋದಾಮುಗಳಲ್ಲಿ ಅಡಕೆಗೆ ಹೆಚ್ಚು ಕೆಂಪು ಬಣ್ಣ ಬರಲೆಂದು ನಿಷೇಧಿತ ಹಾಗೂ ಕಾನೂನು ಬಾಹಿರವಾದ ರಸಾಯನಿಕಯುಕ್ತ ಬಣ್ಣಗಳನ್ನು ಬಳಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಈ ಬಣ್ಣವು ಕಡಿಮೆ ದರ್ಜೆಯ ಅಡಕೆಯನ್ನು ಉತ್ತಮ ದರ್ಜೆಯಂತೆ ತೋರಿಸಲು ಮಾಡುವ ಮೋಸದ ಮತ್ತು ಕಾನೂನುಬಾಹಿರ ವ್ಯವಹಾರ ಪದ್ಧತಿಯಾಗಿದೆ. ಇದರಿಂದಾಗಿ ಅಡಕೆ ಬೆಳೆಗಾರರು ಮತ್ತು ಅದನ್ನು ಬಳಸುವವರ ಮೇಲೆ ತೀವ್ರ ತರಹದ ತೊಂದರೆ ಉಂಟು ಮಾಡಲಿದೆ ಎಂದರು.
ರಸಾಯನಿಕಯುಕ್ತ ಬಣ್ಣಗಳು ಆಹಾರ ಪದಾರ್ಥಕ್ಕೆ ಬಳಸುವಂತದ್ದಲ್ಲ, ಅವು ಕೈಗಾರಿಕಾ ಬಣ್ಣಗಳು, ದೇಹದೊಳಗೆ ಹೋದರೆ ಯಕೃತ್ತು ಮತ್ತು ಮೂತ್ರಪಿಂಡ ಹಾಳಾಗುತ್ತದೆ. Rhodamine B ಮತ್ತು Sudan ಬಣ್ಣಗಳು ಕ್ಯಾನ್ಸರ್ ಕಾರಕ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದೆ. ಇಂತಹ ಅಡಕೆಯ ನಿರಂತರ ಸೇವನೆಯಿಂದ ಬಾಯಿ ಕ್ಯಾನ್ಸರ್, ಹೊಟ್ಟೆ ಹುಣ್ಣು, ಅಲರ್ಜಿ, ಉಸಿರಾಟದ ತೊಂದರೆ ಆಗಲಿದೆ. ಅಡಕೆ ಜಗಿಯುವಾಗ ಬಣ್ಣ ನೇರವಾಗಿ ಬಾಯಿಯ ಲೋಳೆಪೊರೆಗೆ ಅಂಟಿಕೊಳ್ಳುವುದರಿಂದ ಆಗುವ ಅಪಾಯ ಊಹಿಸಲು ಅಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು.ಅಡಕೆಯಲ್ಲಿ ಕೃತಕ ಬಣ್ಣ ಹಾಕುವುದು ಸಂಪೂರ್ಣ ನಿಷೇಧ. ಹೊರ ರಾಜ್ಯಗಳಿಗೆ ಮತ್ತು ವಿದೇಶಕ್ಕೆ ರಫ್ತು ಮಾಡುವಾಗ ಬಣ್ಣ ಬಳಕೆಯಾಗಿರುವುದು ಪತ್ತೆಯಾಗಿ ಅನೇಕ ಕಡೆಗಳಲ್ಲಿ ಅಡಕೆಯ ಇಡೀ ಲಾಟ್ ತಿರಸ್ಕೃತವಾಗಿರುವುದು ತಿಳಿದುಬಂದಿದೆ. ಕೇರಳ ಮತ್ತು ಕರ್ನಾಟಕದಿಂದ ಹೋದ ಹಲವು ಲಾಟ್ ಗಳು ಈ ಕಾರಣಕ್ಕೆ ತಿರಸ್ಕೃತಗೊಂಡಿವೆ ಎಂದು ತಿಳಿಸಿದರು.
ರಾಸಾಯನಿಕ ಹಾಕಿದ ಅಡಕೆ ಬೇಗನೆ ಹಾಳಾಗುತ್ತದೆ. ನೈಸರ್ಗಿಕ ಸುವಾಸನೆ ಮತ್ತು ರುಚಿ ಕಳೆದುಕೊಳ್ಳುತ್ತದೆ. ಅಡಕೆ ಬೆಳೆಗಾರರು ಅಥವಾ ವ್ಯಾಪಾರಿಗಳು ಅಡಿಕೆಯನ್ನು ಸರಿಯಾಗಿ ಒಣಗಿಸುವುದು, ಉತ್ತಮ ತಳಿ ಆಯ್ಕೆ ಮತ್ತು ಶುಚಿಯಾದ ಸಂಸ್ಕರಣೆಯಿಂದಲೇ ನೈಸರ್ಗಿಕ ಬಣ್ಣ ತರುವುದು ಸುರಕ್ಷಿತ ವಿಧಾನ ಎಂದು ಸಲಹೆ ನೀಡಿದರು.ನಿರ್ದಾಕ್ಷಿಣ್ಯ ಕ್ರಮ: ಅಡಕೆಯ ಕೆಲವು ಮಾದರಿಗಳನ್ನು ಪಡೆದುಕೊಂಡ ಅವರು, ಅಡಕೆಗೆ ಬಣ್ಣ ಬಳಸಿರುವುದು ಖಚಿತವಾದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ. ರಸಾಯನಿಕಗಳಿಲ್ಲದೆ ಅಡಕೆಯನ್ನು ಸರಿಯಾದ ವಿಧಾನದಲ್ಲಿ ಸಂಸ್ಕರಿಸಿ, ವಹಿವಾಟು ನಡೆಸುವಂತೆ ಹಾಗೂ ರೈತರ ಶ್ರಮಕ್ಕೆ ನ್ಯಾಯ ಒದಗಿಸುವಂತೆ ಅವರು ಸೂಚಿಸಿದರು.
ಈ ಸಂದರ್ಭ ತಹಸೀಲ್ದಾರ್ ರಾಜೀವ್, ಕಂದಾಯ ಇಲಾಖೆಯ ಅಧಿಕಾರಿಗಳಾದ ಲಿಂಗರಾಜ್, ಕೀರ್ತಿಕುಮಾರ್, ಶ್ರವಣಕುಮಾರ್, ಶ್ವೇತಾ, ಸುಮಾ ಮತ್ತು ಮನೋಜ್ ಸಹಿತ ಹಲವರು ಉಪಸ್ಥಿತರಿದ್ದರು.