ಬಂದರು ಕಾಮಗಾರಿಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ: ಎಸ್‌ಪಿ ನಾರಾಯಣ

| Published : Feb 13 2025, 12:46 AM IST

ಬಂದರು ಕಾಮಗಾರಿಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ: ಎಸ್‌ಪಿ ನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾವರ ವಾಣಿಜ್ಯ ಬಂದರು ನಿರ್ಮಾಣಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ನ್ಯಾಯಾಲಯದ ಆದೇಶ ಇಲ್ಲದೇ ಕಾಮಗಾರಿ ತಡೆಯಲು ಮುಂದಾದರೆ ಕಠಿಣ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಎಚ್ಚರಿಸಿದ್ದಾರೆ.

ಹೊನ್ನಾವರ: ವಾಣಿಜ್ಯ ಬಂದರು ನಿರ್ಮಾಣ ಕುರಿತು ಸರ್ಕಾರ ಕರೆದ ಟೆಂಡರ್‌ನಲ್ಲಿ ಯಶಸ್ವಿಯಾದ ಗುತ್ತಿಗೆ ಕಂಪನಿಯು ಕಾನೂನಿನ ಪ್ರಕಾರ ಕಾಮಗಾರಿ ಆರಂಭಿಸಿದೆ. ಅದಕ್ಕೆ ಅಡ್ಡಿಪಡಿಸುವುದು ಕಾನೂನು ವಿರುದ್ಧ ಕ್ರಮವಾಗುತ್ತದೆ. ಅಂತಹ ಕಾನೂನು ವಿರೋಧಿ ಕೃತ್ಯವನ್ನು ಕಾನೂನು ಪ್ರಕಾರವೇ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪೋಲಿಸ್ ಅಧಿಕ್ಷಕ ಎಂ. ನಾರಾಯಣ ಕಟ್ಟೆಚ್ಚರ ನೀಡಿದರು.

ಅವರು ಮಂಗಳವಾರ ಹೊನ್ನಾವರದಲ್ಲಿ ಬಂದರು ನಿರ್ಮಾಣ ಕುರಿತು ಹಿರಿಯ ಅಧಿಕಾರಿಗಳ ಸರಣಿ ಸಭೆ ನಡೆಸಿದ ನಂತರ ತಹಸೀಲ್ದಾರ್‌ ಕಚೇರಿಯಲ್ಲಿ ಮೀನುಗಾರರ ಹಾಗೂ ಊರಿನ ಮುಖಂಡರ, ಬಂದರು ನಿರ್ಮಾಣ ವಿರೋಧಿ ಹೋರಾಟಗಾರ ಪ್ರಮುಖರ ಸಭೆ ನಡೆಸಿ ಮಾತನಾಡಿದರು.

ಬಂದರು ನಿರ್ಮಾಣವು ಕಾನೂನಿನ ಪ್ರಕಾರವೇ ಆರಂಭವಾಗಿದ್ದು, ಬಂದರು ನಿರ್ಮಾಣ ಮಾಡಬಾರದು ಎಂಬ ನಿರ್ದೇಶನ ಈ ವರೆಗೆ ಇಲ್ಲ. ಆದ್ದರಿಂದ ನಿರ್ಮಾಣ ಕಾರ್ಯ ಕಾನೂನುಬದ್ಧ ಎಂದು ತಿಳಿಯಬೇಕಾಗುತ್ತದೆ. ಸರ್ಕಾರದ ಆದೇಶ ಪಾಲನೆ ನಮ್ಮ ಕರ್ತವ್ಯ. ಹೋರಾಟದ ಹೆಸರಿನಲ್ಲಿ ಅಧಿಕಾರಿಗಳ ಕರ್ತವ್ಯವನ್ನು ತಡೆಯುವುದು ಕಾನೂನು ಬಾಹಿರವಾಗುತ್ತದೆ. ಅಂತಹ ಸಂದರ್ಭದಲ್ಲಿ ಕಾನೂನಿನಂತೆ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಇದೇ ಸಮಯದಲ್ಲಿ ಅವರು ಬಂದರು ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆ ಕಂಪನಿಯವರಿಂದ ಉದ್ದೇಶಿತ ಯೋಜನೆಯ ಕುರಿತು, ಕಾಮಗಾರಿಯ ಕುರಿತು ಸಹ ವಿವರ ಮಾಹಿತಿಯನ್ನು ಪ್ರಾಜೆಕ್ಟರ್‌ ಮೂಲಕ ವಿವರಿಸಿದರು.

ನಡೆಯುತ್ತಿರುವ ಕಾಮಗಾರಿಯನ್ನು ಜನ ತಡೆದರೆ ಕಂಪನಿಯು ತನಗೆ ಆಗುವ ಹಾನಿಯನ್ನು ನೀಡುವಂತೆ ಕೋರಿ ಕಂಪನಿಯ ರಾಷ್ಟ್ರೀಯ ಪರಿಹಾರ ಮಂಡಳಿಗೆ ಅರ್ಜಿ ನೀಡುತ್ತದೆ. ಆಗ ಸರ್ಕಾರವೇ ಕಂಪನಿಗೆ ಶೇ. ೪೦ರಷ್ಟು ದಂಡದ ಪರಿಹಾರ ನೀಡುವುದು ಅನಿರ್ವಾಯವಾಗುತ್ತದೆ. ಆ ಹೊರೆ ಜನತೆಯ ಮೇಲೆ ಬೀಳುತ್ತದೆ ಎಂದು ಹೇಳಿದರು.

ಕಾಮಗಾರಿ ಮಾಡಬಾರದೆಂದು ಯಾವುದೇ ನ್ಯಾಯಾಲಯದಿಂದ ಹೋರಾಟಗಾರರು ಆದೇಶ ಪಡೆಯಲು ಸ್ವತಂತ್ರರು. ಆದರೆ ಯಾವುದೇ ನ್ಯಾಯಾಲಯದ ಆದೇಶ ಇಲ್ಲದೇ ಕಾಮಗಾರಿ ತಡೆಯಲು ಮುಂದಾದರೆ ಕಠಿಣ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ. ಈ ನೆಲದ ಕಾನೂನು ಪಾಲನೆ ಎಲ್ಲರ ಹೊಣೆ ಎಂದರು.

ಮೀನುಗಾರ ಮುಖಂಡರಾದ ಹಮ್‌ಜಾ ಪಟೇಲ್, ರಾಜು ತಾಂಡೇಲ್, ವಿವನ್ ಫರ್ನಾಂಡಿಸ್, ಹೋರಾಟಗಾರ ಪರ ವಕೀಲ ಎಂ.ಎನ್. ಸುಬ್ರಹ್ಮಣ್ಯ, ಮಲ್ಲುಖುರ್ವಾ ಮೈದಿನ್ ಮಸೀದಿಯ ಹುಸೈನ್, ಮಹಮ್ಮದ್ ಖೋಯಾ, ಸಭೆಯಲ್ಲಿ ಮೀನುಗಾರರ ಸಮಸ್ಯೆಯ ಕುರಿತು ವಿವರಿಸಿದರು.