ಪಿಡಿಒಗಳು ಹಣ ಪಡೆದರೆ ಕಾನೂನು ಕ್ರಮ

| Published : May 22 2024, 12:53 AM IST

ಸಾರಾಂಶ

ತಾಲೂಕಿನಲ್ಲಿ ಕೆಲ ಗ್ರಾಮ ಪಂಚಾಯಿತಿ ಪಿಡಿಒಗಳು ಸಾರ್ವಜನಿಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಜೊತೆಗೆ ಆಯಾ ಗ್ರಾಮಗಳ ಅಭಿವೃದ್ಧಿ ಪೂರಕ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಬರುತ್ತಿಲ್ಲ. ಅದಲ್ಲದೇ ಕೆಲಸಕ್ಕೆ ಹಣ ಕೇಳುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಕಾರಣ ಅಂತಹ ಘಟನೆಗಳನ್ನು ನಡೆಯದಂತೆ ನೋಡಿಕೊಳ್ಳಬೇಕು. ಇಲ್ಲವೆಂದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳ ಬೇಕಾಗುತ್ತದೆ ಎಂದು ಲೋಕಾಯುಕ್ತ ಎಸ್.ಪಿ. ಟಿ.ಮಲ್ಲೇಶ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ತಾಲೂಕಿನಲ್ಲಿ ಕೆಲ ಗ್ರಾಮ ಪಂಚಾಯಿತಿ ಪಿಡಿಒಗಳು ಸಾರ್ವಜನಿಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಜೊತೆಗೆ ಆಯಾ ಗ್ರಾಮಗಳ ಅಭಿವೃದ್ಧಿ ಪೂರಕ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಬರುತ್ತಿಲ್ಲ. ಅದಲ್ಲದೇ ಕೆಲಸಕ್ಕೆ ಹಣ ಕೇಳುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಕಾರಣ ಅಂತಹ ಘಟನೆಗಳನ್ನು ನಡೆಯದಂತೆ ನೋಡಿಕೊಳ್ಳಬೇಕು. ಇಲ್ಲವೆಂದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳ ಬೇಕಾಗುತ್ತದೆ ಎಂದು ಲೋಕಾಯುಕ್ತ ಎಸ್.ಪಿ. ಟಿ.ಮಲ್ಲೇಶ ಎಚ್ಚರಿಕೆ ನೀಡಿದರು.

ಪಟ್ಟಣದ ಹಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನಸೌಧ ಸಭಾಭವನದಲ್ಲಿ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ತಾಲೂಕು ಎಲ್ಲ ಸರ್ಕಾರಿ ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ತಾಲೂಕಿನ ಎಲ್ಲ ಸರಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಸೇರಿದಂತೆ ಇತರೆ ದಾಖಲೆಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ತಮ್ಮ ಇಲಾಖೆಗೆ ಯಾವುದೇ ಕೆಲಸಕ್ಕೆಂದು ಬಂದರೆ ತಕ್ಷಣವೇ ಅವರನ್ನು ಗೌರವದಿಂದ ಕಾಣುವ ಮೂಲಕ ತ್ವರಿತಗತಿಯಲ್ಲಿ ಅವರ ಕೆಲಸ ಮುಗಿಸಿ ಕಳಿಸಬೇಕು. ಲಂಚಮುಕ್ತ ಆಡಳಿತಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಅಧಿಕಾರಿಗಳಿಗೆ ಸಲಹೆ ನೀಡಬೇಕು. ಎಲ್ಲ ವಸತಿ ನಿಲಯಗಳ ಸ್ವಚ್ಛತೆ ಹಾಗೂ ಮಕ್ಕಳ ಸಂಖ್ಯೆ ಸೇರಿದಂತೆ ಗುಣಮಟ್ಟ ಆಹಾರ ಮಕ್ಕಳ ಹಾಜರಾತಿ ಸೇರಿದಂತೆ ಅನೇಕ ವಿಷಯಗಳ ಲೋಪದೋಷಗಳ ಬಗ್ಗೆ ಮಾಹಿತಿ ಪಡೆದುಕೊಂಡರು.ರೋಗಿಗಳ ಬಗ್ಗೆ ಕಾಳಜಿ ವಹಿಸಿ:

ಮಡಿಕೇಶ್ವರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ಸಿಬ್ಬಂದಿಗಳು ಅಲ್ಲಿ ಸರಿಯಾದ ಸಮಯಕ್ಕೆ ಹಾಜರಿರುವುದಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆ ಇರುವುದಿಲ್ಲ. ರೋಗಿಗಳಿಗೆ ಪರದಾಡುವಂತೆ ಸಿಬ್ಬಂದಿಗಳು ಮಾಡುತ್ತಿದ್ದಾರೆ. ಹಾಗಾದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಅವರಿಗೆ ಸೂಚಿಸಿದರು.

ಬೀಜ, ಗೊಬ್ಬರದ ತೊಂದರೆ ಆಗದಂತೆ ನೋಡಿಕೊಳ್ಳಿ:

ಸದ್ಯ ಎಲ್ಲೆಡೆ ಮುಂಗಾರು ಬಿತ್ತನೆಗಾಗಿ ರೈತರು ಕಾಯುತ್ತಿದ್ದಾರೆ. ಬೀಜ ಮತ್ತು ಗೊಬ್ಬರ ವಿತರಣೆಯಲ್ಲಿ ತೊಂದರೆಯಾಗದಂತೆ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವುದರೊಂದಿಗೆ ರೈತರಿಗೆ ಅನುಕೂಲ ಮಾಡಿಕೊಡಬೇಕು. ಕೃಷಿಹೊಂಡ ಸಹಾಯಧನ ಬಗ್ಗೆ ಮಾಹಿತಿ ಪಡೆದುಕೊಂಡು ಮುದ್ದೇಬಿಹಾಳ ತಾಲೂಕಿಗೆ ಕೃಷಿಹೊಂಡ ಮಾಡಿರುವ ಬಗ್ಗೆ, ಮಾಹಿತಿ ಪಡೆದುಕೊಂಡು 08 ಕೃಷಿ ಹೊಂಡ ಮಾಡಿರುವುದಾಗಿ ತೋಟಗಾರಿಕ ಅಧಿಕಾರಿ ತಿಳಿಸಿದರು. ಕಳೆದ ವರ್ಷ ಕೃಷಿ ಹೊಂಡ ಲ್ಯಾಪ್ಸ್ ಆದ ಬಗ್ಗೆ ಕಚೇರಿಗೆ ಮಾಹಿತಿ ಸಲ್ಲಿಸುವಂತೆ ಕೃಷಿ ಅಧಿಕಾರಿಗಳಿಗೆ ತಿಳಿಸಿದರು. ಕೃಷಿ ಹೊಂಡಗಳ ಬೇಡಿಕೆ ಬಗ್ಗೆ ಹಾಗೂ ಪಾಲಿ ಹೌಸ್‌ ಸೇರಿದಂತೆ ಎಲ್ಲ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಾಗೂ ತಾಲೂಕು ಕೃಷಿ ಅಧಿಕಾರಿ ಸುರೇಶ ಬಾವಿಕಟ್ಟಿ ಅವರಿಗೆ ಸೂಚಿಸಿದರು.

ಅಹವಾಲು ಸ್ವೀಕಾರ:

ತಾಲೂಕಿನ ರೇಷ್ಮೆ ಇಲಾಖೆ, ಪಶುಸಂಗೋಪನಾ ಇಲಾಖೆ, ದಂಡಾಧಿಕಾರಿಗಳ ಇಲಾಖೆ, ಸಿಡಿಪಿಒ ಇಲಾಖೆ ಅಬಕಾರಿ ಇಲಾಖೆ, ಎಲ್ಲ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಬಳಿಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ಕೊಪ್ಪ ತಾಂಡಾದಲ್ಲಿ ಪಡಿತರ ವಿತರಣೆ ಮಾಡಲು ₹10 ಪಡೆಯುತ್ತಿರುವ ಬಗ್ಗೆ, ಮುದ್ದೇಬಿಹಾಳ ಉದ್ಯಾನವನದಲ್ಲಿ ದೇವಸ್ಥಾನ ನಿರ್ಮಾಣದ ಬಗ್ಗೆ ಮತ್ತು ಕಾಳಗಿ ಗ್ರಾಮದ ಸಾರ್ವಜನಿಕರು ಉತಾರ ನೀಡುವ ಬಗ್ಗೆ ಅರ್ಜಿ ಸಲ್ಲಿಸಿದರು.

ಈ ವೇಳೆ ಡಿವೈಎಸ್ಪಿ ಸುರೇಶ ರಡ್ಡಿ , ಇನ್‌ಸ್ಪೆಕ್ಟರ್‌ ಆನಂದ ಟಕ್ಕನ್ನವರ, ಆನಂದ ಡೋಣಿ, ತಹಸೀಲ್ದಾರ್‌ ಬಸವರಾಜ ನಾಗರಾಳ ಸೇರಿದಂತೆ ಎಲ್ಲ ಸರ್ಕಾರಿ ಅಧಿಕಾರಿಗಳು ಇದ್ದರು.

---

ಬಾಕ್ಸ್‌

ಅಧಿಕಾರಿಗಳ ತರಾಟೆಗೆ, ಸೂಚನೆ

ಪಟ್ಟಣದ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಘನತ್ಯಾಜ್ಯವಸ್ತುಗಳನ್ನು ಎಸೆದಿರುವುದು ಕಂಡುಬರುತ್ತಿದೆ. ಯಾಕೆ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅಧಿಕಾರಿಗಳು ಏನು ಮಾಡುತ್ತಿರುವಿರಿ ಎಂದು ಪುರಸಭೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಜೊತೆಗೆ ತಾಲೂಕಿನಲ್ಲಿ ಎಲ್ಲ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುವುದರೊಂದಿಗೆ ಸ್ವಚ್ಛ ಆಡಳಿತ ನಡೆಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜ ಇಲಾಖೆ ಎಇಇ ಅಧಿಕಾರಿಗಳಿಗೆ ಸೂಚಿಸಿದರು.