ಅಸ್ಪೃಶ್ಯತೆ ಆಚರಿಸಿದರೆ ಕಾನೂನು ಕ್ರಮ: ಎಚ್ಚರಿಕೆ

| Published : Feb 19 2025, 12:46 AM IST

ಸಾರಾಂಶ

ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಸಭೆ ನಡೆಸಿದರಲ್ಲದೆ, ಅಸ್ಪೃಶ್ಯತೆ ಆಚರಿಸಿದರೆ, ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಸಿತು.

ಕನ್ನಡಪ್ರಭ ವಾರ್ತೆ ಸಂಡೂರು

ತಾಲೂಕಿನ ವಿಠಲಾಪುರದಲ್ಲಿ ಆಸ್ಪೃಶ್ಯತೆಯ ಆಚರಣೆ ಕುರಿತು ದೂರು ಬಂದ ಹಿನ್ನೆಲೆ ಮಂಗಳವಾರ ತಹಶೀಲ್ದಾರ್ ಜಿ.ಅನಿಲ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್, ತಾಲೂಕು ಪಂಚಾಯಿತಿ ಪ್ರಭಾರಿ ಇಒ ರೇಣುಕಾಚಾರ್ಯಸ್ವಾಮಿ ಹಾಗೂ ತೋರಣಗಲ್ಲು ಸಬ್ ಇನ್‌ಸ್ಪೆಕ್ಟರ್ ಯು. ಡಾಕೇಶ್ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಸಭೆ ನಡೆಸಿದರಲ್ಲದೆ, ಅಸ್ಪೃಶ್ಯತೆ ಆಚರಿಸಿದರೆ, ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಸಿತು.

ಗ್ರಾಮದಲ್ಲಿನ ದೇವಸ್ಥಾನ, ಕೆಲ ಕ್ಷೌರಿಕರ ಅಂಗಡಿ, ಹೋಟೆಲ್‌ಗಳಲ್ಲಿ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ ಎಂಬ ದೂರು ಬಂದಿತ್ತು. ಈ ಹಿನ್ನೆಲೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.

ಈ ಕುರಿತು ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಕನ್ನಡಪ್ರಭದೊಂದಿಗೆ ಮಾತನಾಡಿ, ಅಸ್ಪೃಶ್ಯತೆ ಆಚರಣೆ ಹಿನ್ನೆಲೆ ಮಂಗಳವಾರ ಗ್ರಾಮಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದೆವು. ಗ್ರಾಮಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಸ್ಪೃಶ್ಯತೆ ಆಚರಿಸಿದರೆ, ಕಾನೂನು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದೇವೆ. ಗ್ರಾಮಸ್ಥರು ಸಹ ತಾವುಗಳು ಗ್ರಾಮದಲ್ಲಿ ಸೌಹಾರ್ದತೆಯಿಂದ ಇರುವುದಾಗಿ ಮತ್ತು ಅಸ್ಪೃಶ್ಯತೆ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು.

ನಂತರದಲ್ಲಿ ಅಧಿಕಾರಿಗಳು ದಲಿತ ಮುಖಂಡರು, ಗ್ರಾಮಸ್ಥರೊಂದಿಗೆ ಗ್ರಾಮದ ಪಾಂಡುರಂಗ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಅಲ್ಲಿನ ಕೆಲ ಹೋಟೆಲ್ ಮತ್ತು ಕ್ಷೌರಿಕರ ಅಂಗಡಿಗಳಿಗೆ ತೆರಳಿ, ಅಸ್ಪೃಶ್ಯತೆಯನ್ನು ಆಚರಿಸದಿರುವಂತೆ ಸೂಚಿಸಿದರಲ್ಲದೆ, ಅಸ್ಪೃಶ್ಯತೆ ಆಚರಿಸಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

ಗ್ರಾಪಂ ಅಧ್ಯಕ್ಷ ರಮೇಶ್, ಪಿಡಿಒ ಗಂಗಾಧರ, ದಲಿತ ಸಂಘರ್ಷ ಸಮಿತಿ ಮುಖಂಡರಾದ ರಾಮಕೃಷ್ಣ ಹೆಗಡೆ, ಎಲ್.ಎಚ್. ಶಿವಕುಮಾರ್, ಶಿವಲಿಂಗಪ್ಪ, ಕಮ್ಮತ್ತೂರು ಮಲ್ಲೇಶ್, ಹುನುಮಂತರೆಡ್ಡಿ, ಸುಬ್ಬಣ್ಣ, ಗ್ರಾಮದ ಮುಖಂಡರಾದ ಚೌಡಪ್ಪ, ಸಣ್ಣಬಾಬು, ಲೇಪಾಕ್ಷಿ, ಗಂಗಾಧರ, ಲಿಂಗಮೂರ್ತಿ, ದೇವರಾಜ, ಗುರು, ಮಲ್ಲಿಕಾರ್ಜುನ, ತಿರುಮಲ, ಸದಾಶಿವ ಮುಂತಾದವರಿದ್ದರು.