ಸಾರಾಂಶ
ದಾಬಸ್‍ಪೇಟೆ: ಬೆಂಗಳೂರು-ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ 48ರ ಪುಣೆ-ಬೆಂಗಳೂರು ರಸ್ತೆ ಸೇರಿದಂತೆ ಸೋಂಪುರ ಕೈಗಾರಿಕಾ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ಯಾವುದೇ ಕಾರಣಕ್ಕೂ ಕಂಟೈನರ್ ಲಾರಿಗಳನ್ನು ಕಿ.ಮೀ.ಗಟ್ಟಲೇ ನಿಲ್ಲಿಸಬಾರದು, ನಿಲ್ಲಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ಮುಖ್ಯಸ್ಥರಿಗೆ ದಾಬಸ್‍ಪೇಟೆ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ರಾಜು ಖಡಕ್ ಸೂಚನೆ ನೀಡಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಲಾರಿ ಪಾರ್ಕಿಂಗ್ ನಿರ್ವಹಿಸುತ್ತಿರುವವರು ಹಾಗೂ ಮಾರುತಿ ಸುಜುಕಿ ಕಂಪನಿಯ ಮುಖ್ಯಸ್ಥರ ಸಭೆ ನಡೆಸಿ ಸೂಚನೆ ನೀಡಿದರು.ಮಾರುತಿ ಸುಜುಕಿ ಕಂಪನಿಗೆ ಸೇರಿದ ಕಾರುಗಳನ್ನು ಹೊತ್ತು ತರುವ ಕಂಟೈನರ್ ಲಾರಿಗಳು ಸೋಂಪುರ ಹೋಬಳಿಯ ಎಡೇಹಳ್ಳಿ, ಚಂದನ ಹೊಸಹಳ್ಳಿ, ಸೋಂಪುರ ಸೇರಿದಂತೆ ನೆಲಮಂಗಲದಿಂದ ನಮ್ಮ ಗಡಿಭಾಗದವರೆಗೆ ಕಿಲೋ ಮೀಟರ್‌ಗಟ್ಟಲೆ ನಿಲ್ಲುತ್ತಿವೆ. ಇದರಿಂದ ಸಂಚಾರಕ್ಕೆ ಅಡಚಣೆ, ಅಪಘಾತಗಳು ಸಂಭವಿಸುತ್ತಿವೆ. ಹಲವು ಬಾರಿ ತಿಳಿಸಿದರೂ ಎಚ್ಚೆತ್ತುಕೊಳ್ಳದೇ ಕಂಪನಿಯವರು ನಿರ್ಲಕ್ಷಿಸುತ್ತಿದ್ದು, ಇನ್ನ ಮುಂದೆ ನಿಲ್ಲಸಕೂಡದು ಎಂದು ಎಚ್ಚರಿಕೆ ನೀಡಿದರು.
ಸಾರ್ವಜನಿಕರಿಂದ ದೂರು:ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರಹದ್ದಿನವರೆಗಿನ ವ್ಯಾಪ್ತಿಯನ್ನು ನೆಲಮಂಗಲ ಸಂಚಾರ ಠಾಣಾ ವ್ಯಾಪ್ತಿಗೆ ನೀಡಿದ್ದು ಇಲ್ಲಿ ನಡೆಯುವ ಅಪಘಾತ ಹಾಗೂ ಇನ್ನಿತರೆ ಸಂಚಾರ ನಿಯಂತ್ರಣ ವಿಚಾರವನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಉನ್ನತ ಅಧಿಕಾರಿಗಳಿಗೆ ಮಾರುತಿ ಸುಜುಕಿ ಕಂಪನಿ ಲಾರಿಗಳಿಂದ ಆಗುತ್ತಿರುವ ಟ್ರಾಫಿಕ್ ಸಮಸ್ಯೆ ಬಗ್ಗೆ ದೂರು ನೀಡಿದ್ದರಿಂದ ಸಭೆ ಕರೆದು ಕಂಪನಿಯ ಆಡಳಿತ ಮಂಡಳಿಗೆ ತಿಳಿಸಲಾಗಿದೆ ಎಂದರು.
ರಸ್ತೆ ಅಗಲೀಕರಣಕ್ಕೂ ತೊಂದರೆ:ವಾರಾಂತ್ಯಗಳಲ್ಲಿ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಹೆಚ್ಚಿನ ಟ್ರಾಫಿಕ್‍ನಿಂದ ರಸ್ತೆ ಅಗಲೀಕರಣ ಕಾಮಗಾರಿಗೂ ಅಡಚಣೆಯಾಗಿದೆ. ಇನ್ನು ಮುಂದೆ ಕಂಪನಿ ಲಾರಿಗಳು ರಸ್ತೆಯ ಪಕ್ಕ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದರೆ ಕಾನೂನಿನ ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದರು.
ದಂಡದ ಜೊತೆಗೆ ಮೊಕದ್ದಮೆ :ಪಟ್ಟಣದ ಶಿವಗಂಗೆ ವೃತ್ತ ಹಾಗೂ ಉದ್ದಾನೇಶ್ವರ ವೃತ್ತದಲ್ಲಿ ಲಾರಿಗಳನ್ನು ಯೂಟರ್ನ್ ಮಾಡಲು ಯಾವುದೇ ಅವಕಾಶವಿಲ್ಲ. ಶಾಲಾ ಕಾಲೇಜು ಮಕ್ಕಳು, ಕಾರ್ಮಿಕರು, ಸಾರ್ವಜನಿಕರಿಗೆ ಬೆಳಗ್ಗೆ ಹಾಗೂ ಸಂಜೆ ವೇಳೆ ಬಹಳಷ್ಟು ತೊಂದರೆಯಾಗುತ್ತಿದ್ದು ಬೆಳಗಿನ 11 ಗಂಟೆವರೆಗೂ ಹಾಗೂ ಸಂಜೆ 4ರಿಂದ 10 ಗಂಟೆವರೆಗೂ ತಮ್ಮ ಲಾರಿಗಳನ್ನು ರಸ್ತೆಗೆ ಇಳಿಯದಂತೆ ಕ್ರಮಕೈಗೊಳ್ಳಬೇಕು. ಟ್ರಾಫಿಕ್ ದಟ್ಟಣೆ ಉಂಟು ಮಾಡಿದರೆ ದಂಡದ ಜೊತೆಗೆ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾರುತಿ ಸುಜುಕಿ ಕಂಪನಿ ಮುಖ್ಯಸ್ಥರು, ಪಾರ್ಕಿಂಗ್ ಉಸ್ತುವಾರಿಗಳು, ಪೊಲೀಸರು ಉಪಸ್ಥಿತರಿದ್ದರು.ಪೋಟೋ 3 :
ದಾಬಸ್‍ಪೇಟೆ ಪೊಲೀಸ್ ಠಾಣಾ ಆವರಣದಲ್ಲಿ ಲಾರಿ ಪಾರ್ಕಿಂಗ್ ನಿರ್ವಹಿಸುತ್ತಿರುವವರು ಹಾಗೂ ಮಾರುತಿ ಸುಜುಕಿ ಕಂಪನಿ ಮುಖ್ಯಸ್ಥರ ಸಭೆಯಲ್ಲಿ ಇನ್ಸ್‌ಪೆಕ್ಟರ್ ರಾಜು ಮಾತನಾಡಿದರು.